ಜೋಯಿಡಾ : ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯ ನಿಮಿತ್ತವಾಗಿ ತಾಲೂಕಿನ ರಾಮನಗರ, ಜಗಲಬೇಟ್, ಕ್ಯಾಸಲರಾಕ್, ಜೋಯಿಡಾ, ಕುಂಬಾರವಾಡಾ, ಗುಂದ ಸೇರಿದಂತೆ ತಾಲೂಕಿನೆಲ್ಲೆಡೆ ಸೋಮವಾರ ಸಂಭ್ರಮ ಸಡಗರ ಹಾಗೂ ಶ್ರದ್ಧಾ ಭಕ್ತಿಯಿಂದ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ತಾಲೂಕಿನ ವಿವಿದೆಡೆಗಳ್ಲಿರುವ ದೇವಾಲಯಗಳಲಿ ಭಕ್ತರು ಶ್ರದ್ದಾ ಭಕ್ತಿಯಿಂದ ರಾಮ ಜಪ, ಭಜನೆ, ವಿಶೇಷ ಪೂಜೆಯನ್ನು ಸಲ್ಲಿಸಿ ಜೈ ಶ್ರೀ ರಾಮ ಎನ್ನುವ ಘೋಷಣೆಯೊಂದಿಗೆ ಪೂಜೆಯನ್ನು ಸಂಪನ್ನಗೊಳಿಸಿದರು.
ಗುಂದದ ಹನುಮಾನ್ ಮಂದಿರದಲ್ಲಿ ಸಾಮೂಹಿಕ ಭಜನೆ ಹಾಗೂ ವೈದಿಕ ವೃಂದದವರಿಂದ ವಿಶೇಷ ಪೂಜೆ ಜರುಗಿತು. ಈ ಸಂದರ್ಭದಲ್ಲಿ ಮಾತನಾಡಿದ ವೇದಮೂರ್ತಿ ಪ್ರವೀಣ ಭಟ್ಟ ಅವರು ಎಷ್ಟೋ ವರ್ಷಗಳ ಕನಸು ಇಂದು ನನಸಾಗಿದೆ. ಬಹಳಷ್ಟು ಜನರ ತ್ಯಾಗ ಬಲಿದಾನದಿಂದಾಗಿ ಇಂದು ಅಯೋಧ್ಯಾದಲ್ಲಿ ರಾಮಮಂದಿರ ನಿರ್ಮಾಣವಾಗಿದೆ. ಪ್ರಭು ಶ್ರೀ ರಾಮ ಸರ್ವರಿಗೂ ಸನ್ಮಂಗಲವನ್ನು ದಯಪಾಲಿಸಲೆಂದು ಪ್ರಾರ್ಥಿಸಿದರು.
ತಾಲೂಕಿನ ಬಹುತೇಕ ಎಲ್ಲ ದೇವಸ್ಥಾನಗಳಲ್ಲಿ ವಿಶೇಷ ಪೂಜೆಯ ಬಳಿಕ ಪ್ರಸಾದ ವಿತರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಎಲ್ಲ ದೇವಸ್ಥಾನಗಳಿಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.