ಅಯೋಧ್ಯಾ ನಗರಿಯಲ್ಲಿ ವಿರಾಜಮಾನನಾದ ಮರ್ಯಾದಾ ಪುರುಷೋತ್ತಮ ರಾಮ

ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಭವ್ಯ ರಾಮ ಮಂದಿರದ ಪ್ರಾಣಪ್ರತಿಷ್ಠೆ ಇಂದು ನೆರವೇರಿದೆ. ಅಯೋದ್ಯಾನಗರಿಯಲ್ಲಿ ಮರ್ಯಾದಾ ಪುರುಷೋತ್ತಮ ವಿರಾಜಮಾನನಾಗಿದ್ದಾನೆ. ಪ್ರಧಾನಿ ನರೇಂದ್ರ ಮೋದಿ ವಿಧಿ ವಿಧಾನಗಳನ್ನು ಪೂರೈಸಿದ್ದಾರೆ. ಶ್ರೀರಾಮನ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತ್ರವಲ್ಲದೇ, ಈ ಮಹತ್ವದ ಸಮಾರಂಭವನ್ನು ಜಾಗತೀಕರಣಗೊಳಿಸುವ ನಿಟ್ಟಿನಲ್ಲಿ ವಿವಿಧ 50 ದೇಶಗಳನ್ನು ಪ್ರತಿನಿಧಿಸುವ 92 ವಿಶೇಷ ಆಹ್ವಾನಿತರು ಈ ಸಮಾರಂಭದಲ್ಲಿ ಅತಿಥಿಗಳಾಗಿ ಆಗಮಿಸಿದ್ದಾರೆ.

ಮಧ್ಯಾಹ್ನ 12.20 ಕ್ಕೆ ಸರಿಯಾಗಿ ಧಾರ್ಮಿಕ ವಿಧಿ ವಿಧಾನಗಳು ಪ್ರಾರಂಭವಾಗಿದ್ದು 12, 45ರವರೆಗೆ ನಡೆದಿದೆ. ಸುಮಾರು 2 ಗಂಟೆಗಳ ಕಾಲ 25 ರಾಜ್ಯದಗಳ ವಿವಿಧ ಸಂಗೀತ ವಾದ್ಯಗಳ ಮಂಗಲ ಧ್ವನಿ ಕಾರ್ಯಕ್ರಮವೂ ನೆರವೇರಿದೆ. ಶ್ರೀರಾಮನ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ಹಿನ್ನೆಲೆ ಅಯೋಧ್ಯೆಯ ಇಡೀ ನಗರವನ್ನು 2500 ಕ್ವಿಂಟಾಲ್‌ಗೂ ಹೆಚ್ಚು ಹೂವಿನಿಂದ ಅಲಂಕರಿಸಲಾಗಿದ್ದು, ಪ್ರಾಣ ಪ್ರತಿಷ್ಠೆಯ ನಂತರ ಭಕ್ತರಿಗೆ ದೇವಾಲಯದ ಬಾಗಿಲು ತೆರೆಯಲಾಗುತ್ತದೆ.

ಆದರೆ ಜನಸಂದಣಿ ಕಡಿಮೆಯಾದ ನಂತರ ಜನವರಿ 27ರ ನಂತರವೇ ದೇವಾಲಯಕ್ಕೆ ಭೇಟಿ ನೀಡುವಂತೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಭಕ್ತರಲ್ಲಿ ವಿನಂತಿ ಮಾಡಿದೆ.

ಸಮಾರಂಭದಲ್ಲಿ ಎನ್‌ಎಸ್‌ಜಿ ಸ್ನೈಪರ್‌ಗಳ ಎರಡು ತಂಡಗಳು, ಆ್ಯಂಟಿ ಡ್ರೋನ್ ತಂತ್ರಜ್ಞಾನ ಹೊಂದಿದ ಎಟಿಎಸ್ ಕಮಾಂಡೋಗಳ ಆರು ತಂಡಗಳು ಮತ್ತು ಯುಪಿ ಮತ್ತು ಅರೆಸೇನಾ ಪಡೆಗಳ 15,000 ಪೊಲೀಸ್ ಸಿಬ್ಬಂದಿಯನ್ನು ಅಯೋಧ್ಯೆಯ ಭದ್ರತೆಗಾಗಿ ನಿಯೋಜಿಸಲಾಗಿದೆ. ಆರ್​ಎಸ್​ಎಸ್​ನ ಸರಸಂಘ ಚಾಲಕ ಮೋಹನ್ ಭಾಗವತ್​, ರಾಜ್ಯಪಾಲೆ ಆನಂದಿ ಬೆನ್, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಪಾಲ್ಗೊಂಡಿದ್ದರು.