ಬಾಗಲಕೋಟೆ, ಜ.4: ಒಂದು ಕಡೆ ಹಳ್ಳ, ಹಳ್ಳದ ಹೊಂಡದಲ್ಲಿ ನೀರು. ಪಕ್ಕದಲ್ಲಿ ದೇವಸ್ಥಾನ, ದೇವಸ್ಥಾನದ ಮುಂದೆ ಲವಕುಶರ ಕಟ್ಟೆಗಳು. ಇವೆಲ್ಲವನ್ನೂ ಬಾಗಲಕೋಟೆ ತಾಲ್ಲೂಕಿನ ಬಿಲ್‌ಕೆರೂರು ಗ್ರಾಮದಲ್ಲಿ ನೋಡಬಹುದು. ಬಿಲ್‌ಕೆರೂರು ಹೆಸರಿನಲ್ಲೇ ಬಿಲ್ ಅಂತಿದೆ. ಆದರೆ ಇದು ಸಾಮಾನ್ಯವಾಗಿ ಬಂದಿರುವಂತದ್ದಲ್ಲ. ಇದಕ್ಕೆ ರಾಮಾಯಣ ಇತಿಹಾಸವಿದೆ. ರಾಮನ ಬಿಲ್ಲಿನಿಂದ ಗ್ರಾಮಕ್ಕೆ ಬಿಲ್‌ಕೆರೂರು ಅಂತ ಹೆಸರು ಬಂದಿದೆ.
ರಾಮಸೀತೆ ಲಕ್ಷ್ಮಣ ವನವಾಸದಲ್ಲಿದ್ದಾಗ ಈ ಜಾಗದಲ್ಲಿ ಸಂಚರಿಸುತ್ತಿದ್ದರಂತೆ. ಆಗ ಸೀತೆಗೆ ವಿಪರೀತ ಬಾಯಾರಿಕೆ ಆಗಿತ್ತಂತೆ. ಸುತ್ತಮುತ್ತ ಎಲ್ಲೂ ನೀರು ಸಿಗದಿದ್ದಾಗ ರಾಮ ತನ್ನ ಬಿಲ್ಲಿನಿಂದ ಬಾಣ ಬಿಟ್ಟಾಗ ಗಂಗೆ ಚಿಮ್ಮಿದ್ದಾಳೆ. ಆ ನೀರನ್ನು ಕುಡಿದು ಸೀತಾಮಾತೆ ದಾಹ ನೀಗಿಸಿಕೊಂಡಿದ್ದಳು ಎಂಬುದು ನಂಬಿಕೆ.
ರಾಮ ಬಿಲ್ಲಿನಿಂದ ನೆಲಕ್ಕೆ ಬಾಣ ಬಿಟ್ಟು ನೀರು ಹೊರತೆಗೆದ ಕಾರಣ ಅಲ್ಲಿ ಕೆರೆ ನಿರ್ಮಾಣವಾಗಿದೆ. ಮೊದಲು ಈ ಸ್ಥಳಕ್ಕೆ ಬಿಲ್ ಕೆರಿ ಅಂತ ಕರೆಯುತ್ತಿದ್ದರು. ಕಾಲಕ್ರಮೇಣ ಅದು ಬಿಲ್‌ಕೆರೂರು ಆಗಿ ಬದಲಾಗಿದೆ. ರಾಮನ ಬಿಲ್ಲಿನಿಂದ ಗ್ರಾಮಕ್ಕೆ ಬಿಲ್‌ಕೆರೂರು ಎಂದು ಹೆಸರು ಬಂದಿದ್ದು ಗ್ರಾಮ ರಾಮಚರಿತೆಯ ಒಂದು ಕುರುಹಾಗಿ ಎಲ್ಲರ ಗಮನ ಸೆಳೆಯುತ್ತಿದೆ.
ರಾಮನ ಶಕ್ತಿಗೆ ಸಾಕ್ಷಿ ರಾಮತೀರ್ಥ ಹೊಂಡ
ಈ ಹೊಂಡದ ವಿಶೇಷತೆ ಏನೆಂದರೆ, ಅಂದು ನಿರ್ಮಾಣವಾದ ಈ ಹೊಂಡಕ್ಕೆ ರಾಮತೀರ್ಥ ಹೊಂಡ ಅಂತ ಕರೆಯುತ್ತಾರೆ. ಈ ಹಳ್ಳಕ್ಕೆ ರಾಮತೀರ್ಥಹಳ್ಳ ಅಂತಾನು ಕರೆಯುತ್ತಾರೆ. ಈ ಹೊಂಡದ ನೀರು ಎಂದು ಕೂಡ ಬತ್ತಿಲ್ಲ ಇದು ರಾಮನ ಶಕ್ತಿಗೆ ಸಾಕ್ಷಿ ಅಂತ ಸ್ಥಳೀಯರ ನಂಬಿಕೆ. ಇನ್ನು ಹೊಂಡದ ಪಕ್ಕದಲ್ಲಿ ಒಂದು ಪ್ರಾಚೀನ ಗುಡಿಯೂ ಇದೆ. ಅದಕ್ಕೆ ರಾಮಲಿಂಗೇಶ್ವರ ದೇವಸ್ಥಾನ ಎಂದು ಕರೆಯುತ್ತಾರೆ.
ಇಲ್ಲಿಯೇ ಶ್ರೀರಾಮ, ಸೀತೆ ಕೆಲ ಕಾಲ ಇದ್ದರು ಎನ್ನುವ ಐತಿಹ್ಯ ಇದೆ. ರಾಮಲಿಂಗೇಶ್ವರ ಎಂದು ಕರೆಯುವ ಪುರಾತನ ದೇವಾಲಯದಲ್ಲಿ ಹನಮಂತ ಹಾಗೂ ಲಿಂಗುವಿನ ಮೂರ್ತಿಗಳು ಇವೆ. ಇನ್ನು ದೇವಾಲಯದ ಎದುರಿಗೆ ಎರಡು ಕಟ್ಟೆಗಳು ಇದ್ದು, ಅವುಗಳಿಗೆ ಲವ-ಕುಶ ಕಟ್ಟೆಗಳು ಎಂದು ಕರೆಯುತ್ತಾರೆ.
ಈ ಕಟ್ಟೆಗಳ ಮೇಲೆ ಲವ-ಕುಶ ಆಟ ಆಡುತ್ತಿದ್ದರು ಎನ್ನುವ ನಂಬಿಕೆ ಇಲ್ಲಿನ ಜನರದ್ದು. ಕಟ್ಟೆ ಮೇಲೆ ಲವಕುಶರ ಪಾದಗಳು ಇವೆ. ಅವುಗಳ ಪಕ್ಕದಲ್ಲಿ ಕಲ್ಲಿನ ಗುಂಡು ಇದ್ದು, ಲವಕುಶ ಕಲ್ಲು ಎಂದು ಕರೆಯುತ್ತಾರೆ. ಜನರು ಈಗಲೂ ಆ ಕರಿಕಲ್ಲಿನ ಗುಂಡು ಎತ್ತುವ ಸಂಪ್ರದಾಯ ಇದೆ. ಗುಂಡು ಸರಳವಾಗಿ ಎದ್ದರೆ ತಮ್ಮ ಬೇಡಿಕೆ ಈಡೇರುತ್ತವೆ, ಭಾರವಾದರೆ ಕೆಲಸ ಆಗಲ್ಲ ಎನ್ನುವ ನಂಬಿಕೆ.
ಪ್ರತಿ ವರ್ಷ ಶ್ರಾವಣದ ದಿನದಂದು ರಾಮಭಕ್ತರು ಇಲ್ಲಿಗೆ ಬಂದು ವಿಶೇಷ ಪೂಜೆ ಪುನಸ್ಕಾರ ಮಾಡುತ್ತಾರೆ. ಒಟ್ಟಿನಲ್ಲಿ ರಾಮಮಂದಿರ ಉದ್ಘಾಟನೆಯ ಈ ಸಂದರ್ಭದಲ್ಲಿ ರಾಮನ ಅನೇಕ ಕುರುಹುಗಳು ಚರ್ಚೆಗೆ ಬರುತ್ತಿದ್ದು, ರಾಮನ ಚರಿತೆಗೆ ಸಾಕ್ಷಿ ಹೇಳುವಂತಿವೆ.