ಯಲ್ಲಾಪುರ: ಲಾರಿ ಚಾಲಕ, ಮಾಲಕರಿಗೆ ಕೇಂದ್ರ ಸರ್ಕಾರ ಹೊಸದಾಗಿ ಆದೇಶಿಸಿರುವ ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ, ಹಿಟ್ ಆ್ಯಂಡ್ ರನ್ ಪ್ರಕರಣದ ಬಗ್ಗೆ ತಿದ್ದುಪಡಿಯನ್ನು ರದ್ದುಗೊಳಿಸಲು ಆಗ್ರಹಿಸಿ, ಲಾರಿ ಚಾಲಕ ಮಾಲಕ ಸಂಘದವರು ಪಟ್ಟಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಪಟ್ಟಣ ಅಂಬೇಡ್ಕರ್ ಸರ್ಕಲ್ ನಿಂದ ತಹಸೀಲ್ದಾರ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಅಂಬೇಡ್ಕರ್ ಸರ್ಕಲ್ ಬಳಿ ಪ್ರತಿಭಟನಾಕಾರರ ಬೇಡಿಕೆಗಳನ್ನು ಆಲಿಸಿದ ಶಾಸಕ ಶಿವರಾಮ ಹೆಬ್ಬಾರ್ ಮಾತನಾಡಿ, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಾನೂನಿನಿಂದ ಚಾಲಕ-ಮಾಲಕರಿಗೆ ತೊಂದರೆ ಉಂಟಾಗುತ್ತಿದ್ದು, ಕೂಡಲೇ ಈ ತಿದ್ದುಪಡಿಯನ್ನು ರದ್ದುಗೊಳಿಸಬೇಕು. ಚಾಲಕ-ಮಾಲಕರ ನ್ಯಾಯಸಮ್ಮತ ಬೇಡಿಕೆಗೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದರು.
ನಂತರ ಗ್ರೇಡ್ ತಹಸೀಲ್ದಾರ ಸಿ.ಜಿ.ನಾಯ್ಕ ಅವರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಹೊಸ ಕಾಯ್ದೆಯ ಪ್ರಕಾರ ಹಿಟ್ ಆ್ಯಂಡ್ ರನ್ ಪ್ರಕರಣದಲ್ಲಿ ಚಾಲಕರಿಗೆ 5-10 ವರ್ಷ ಜೈಲುವಾಸ, 7 ಲಕ್ಷ ರೂವರೆಗೆ ದಂಡ ವಿಧಿಸಲಾಗುವುದು. ಇಂತಹ ಕಠಿಣ ಕಾಯ್ದೆಯನ್ನು ತೆಗೆದುಹಾಕಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘದ ಪ್ರಮುಖರಾದ ಸಂತೋಷ ನಾಯ್ಕ, ಸಂದೀಪ ವಡ್ಡರ್, ಮಹೇಶ ನಾಯ್ಕ, ವಿನಾಯಕ ಗುತ್ತಲ್, ನಾಗೇಂದ್ರ ಭಟ್ಟ ಕವಾಳೆ, ಅಜಯ ಮರಾಠಾ, ಮೈನುದ್ದೀನ್ ಅತ್ತಾರ ಇತರರಿದ್ದರು