ದಾಂಡೇಲಿ : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಹಯೋಗದಲ್ಲಿ 2022-23ನೇ ಸಾಲಿನ ವಿವೇಕ ಯೋಜನೆಯಡಿ ಬಂಗೂರನಗರ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರ್ಮಾಣಗೊಂಡ ನೂತನ ಕೊಠಡಿಯನ್ನು ಶಾಸಕರು ಹಾಗೂ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದ ಆರ್.ವಿ.ದೇಶಪಾಂಡೆಯವರು ಶನಿವಾರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಆರ್.ವಿ.ದೇಶಪಾಂಡೆ ಅವರು ಪ್ರತಿಯೊಬ್ಬನಿಗೂ ವಿದ್ಯೆ ಬಹಳ ಮುಖ್ಯ. ಬದಲಾಗುತ್ತಿರುವ ಇಂದಿನ ಆಧುನಿಕತೆಯ ಈ ಸಮಾಜದಲ್ಲಿ ಶಿಕ್ಷಣ ಅತಿ ಅಗತ್ಯವಾಗಿ ಬೇಕಾಗಿದೆ. ಪ್ರತಿಯೊಂದು ಮಗುವು ಶಿಕ್ಷಣವನ್ನು ಪಡೆಯಬೇಕು. ಶಿಕ್ಷಣವಂತ ಸಮಾಜದಿಂದ ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂದರು. ಇಲ್ಲಿಯ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನೂತನ ಕೊಠಡಿಯನ್ನು ಮಂಜೂರು ಮಾಡಿ ನಿರ್ಮಿಸಿ, ಉದ್ಘಾಟನೆ ಮಾಡಲಾಗಿದೆ. ಶಾಲೆಯ ಪ್ರಗತಿಗೆ ಮತ್ತಷ್ಟು ಸಹಕಾರವನ್ನು ನೀಡುವುದಾಗಿ ಈ ಸಂದರ್ಭದಲ್ಲಿ ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಮೋದ್ ಮಹಾಲೆ ಅವರು ಮಾತನಾಡಿ, ಆರ್.ವಿ.ದೇಶಪಾಂಡೆ ಅವರು ಹಳಿಯಾಳ ಮತ್ತು ದಾಂಡೇಲಿ ತಾಲೂಕಿಗೆ ಅತಿ ಹೆಚ್ಚು ಅತಿಥಿ ಶಿಕ್ಷಕರನ್ನು ಒದಗಿಸಿ ಕೊಟ್ಟಿದ್ದಾರೆ. ಕ್ಷೇತ್ರದ ಶಾಲೆಗಳಿಗೆ ಅಗತ್ಯ ಮೂಲಸೌಕರ್ಯಗಳನ್ನು ತ್ವರಿತ ಗತಿಯಲ್ಲಿ ಕೊಡಿಸುವ ಮೂಲಕ ಶೈಕ್ಷಣಿಕ ಕ್ಷೇತ್ರದ ಪ್ರಗತಿಗೆ ಆದ್ಯತೆಯಡಿ ಆರ್.ವಿ.ದೇಶಪಾಂಡೆಯವರು ಅನುದಾನವನ್ನು ಮಂಜೂರು ಮಾಡಿದ್ದಾರೆ. ತಾಲೂಕಿನ ಸಾಕಷ್ಟು ಶಾಲೆಗಳಿಗೆ ವಿವೇಕ ಯೋಜನೆಯಡಿ ಕೊಠಡಿಗಳ ನಿರ್ಮಾಣವಾಗಿದ್ದು, ಇದು ಆರ್.ವಿ.ದೇಶಪಾಂಡೆಯವರ ಬಹುಮೂಲ್ಯ ಕೊಡುಗೆಯಾಗಿದೆ ಎಂದರು.
ವೇದಿಕೆಯಲ್ಲಿ ನಗರಸಭೆಯ ಸ್ಥಾಯಿ ಸಮಿತಿಯ ಅಧ್ಯಕ್ಷೆ ಶಾಹಿದಾ ಪಠಾಣ್, ನಗರಸಭೆಯ ನಿಕಟ ಪೂರ್ವ ಅಧ್ಯಕ್ಷೆ ಸರಸ್ವತಿ ರಜಪೂತ್, ತಹಶೀಲ್ದಾರ್ ಶೈಲೇಶ್ ಪರಮಾನಂದ, ಪೌರಾಯುಕ್ತರಾದ ಆರ್.ಎಸ್.ಪವಾರ್, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ ಹಾಲಮನ್ನವರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿ.ಆರ್ ಹೆಗಡೆ ಕಾಂಗ್ರೆಸ್, ಮುಖಂಡರಾದ ಮುನ್ನಾ ವಹಾಬ್, ದಾದಾಪೀರ್ ನದೀಮುಲ್ಲಾ ಮೊದಲಾದವರು ಉಪಸ್ಥಿತರಿದ್ದರು.
ನೂತನ ಕೊಠಡಿಯನ್ನು ಮಂಜೂರು ಮಾಡಿದ ಆರ್ ವಿ ದೇಶಪಾಂಡೆ ಅವರನ್ನು ಶಾಲಾಭಿವೃದ್ಧಿ ಸಮಿತಿ ಮತ್ತು ಶಾಲೆಯ ವತಿಯಿಂದ ಸನ್ಮಾನಿಸಲಾಯಿತು.
ಶಾಲಾ ಮುಖ್ಯೋಪಾಧ್ಯಯಿನಿ ಅತಿಯಾ.ವೈ. ಪಠಾಣ್ ಸ್ವಾಗತಿಸಿದರು. ಸಿ.ಆರ್.ಪಿ ಲಲಿತಾ ಗೌಡ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.