ದಾಂಡೇಲಿ: ಜಿಲ್ಲಾ ಕುಟುಂಬ ಕಲ್ಯಾಣ ಇಲಾಖೆ, ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹಳಿಯಾಳ ಹಾಗೂ ದಾಂಡೇಲಿ ಸಾರ್ವಜನಿಕ ಆಸ್ಪತ್ರೆಯ ಸಹಯೋಗದಲ್ಲಿ ಪ್ರಧಾನಮಂತ್ರಿ ಸುರಕ್ಷಾ ಮಾತೃತ್ವ ಅಭಿಯಾನ ಯೋಜನೆಯಡಿ ತಾಯಿಯಿಂದ ಮಗುವಿಗೆ ಹೆಚ್ ಐ ವಿ ಹಾಗೂ ಹೈಪಟೈಟಿಸ್ ಹರಡುವಿಕೆ ನಿರ್ಮೂಲನೆ ಆಂದೋಲನ ಕಾರ್ಯಕ್ರಮವನ್ನು ನಗರದ ತಾಯಿ & ಮಕ್ಕಳ ಆರೈಕೆ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಯಿತು.
ತಾಲ್ಲೂಕು ವೈದ್ಯಾಧಿಕಾರಿ ಡಾ. ಅನಿಲಕುಮಾರ್ ನಾಯ್ಕ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ, ಹೆಪಾಟೈಟಿಸ್ ಕಾಯಿಲೆ ಹರಡುವಿಕೆ ಹಾಗೂ ತಡೆಗಟ್ಟುವ ಮಾರ್ಗಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ರೂಪಾ ತುರಮರಿ ಅವರು ಗರ್ಭಿಣಿ ಸ್ತ್ರೀಯರಿಗೆ ಪೌಷ್ಟಿಕ ಆಹಾರ, ಎದೆ ಹಾಲಿನ ಮಹತ್ವ,ಮಕ್ಕಳ ಆರೈಕೆ , ಗರ್ಭಿಣಿ ಸ್ತ್ರೀಯ ಆರೋಗ್ಯ ಕಾಳಜಿ ಮತ್ತು ಕುಟುಂಬ ಯೋಜನೆ ವಿಧಾನಗಳ ಮಹತ್ವದ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಹಳಿಯಾಳ ಐಸಿಟಿಸಿ ಆಪ್ತ ಸಮಾಲೋಚಕರಾದ ವಾಸು ಇವರು ಎಚ್ ಐ ವಿ ಏಡ್ಸ್ ಹರಡುವ ವಿಧಾನ, ತಡೆಗಟ್ಟುವ ಸುರಕ್ಷತಾ ಕ್ರಮಗಳನ್ನು ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ 42 ಗರ್ಭಿಣಿ ಸ್ತ್ರೀಯರಿಗೆ ಸೀಮಂತ ಕಾರ್ಯಕ್ರಮವನ್ನು ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿಗಳು ನಡೆಸಿಕೊಟ್ಟರು.
ತಾಯಿ ಮಕ್ಕಳ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ. ಅಖಿಲ್ ಕಿತ್ತೂರು, ಮಕ್ಕಳ ತಜ್ಞ ಡಾ. ಬಂಟ್, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಡಾ. ತ್ರಿವೇಣಿ, ಹಳಿಯಾಳ ಬಿಪಿಎಂ ನ ಚನ್ನಬಸು ಇವರು ಆರೋಗ್ಯ ರಕ್ಷಣೆ ಔಷಧೋಪಚಾರದ ಕುರಿತು ಗರ್ಭಿಣಿ ಸ್ತ್ರೀಯರಿಗೆ ಉಪಯುಕ್ತ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರು, ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.