ಹಳಿಯಾಳ : ಇಂದು ನಾವು ನೀವೆಲ್ಲರೂ ಸುಖವಾಗಿ ನೆಮ್ಮದಿಯ ಜೀವನವನ್ನು ನಡೆಸುವಂತಾಗಲೂ ಮೂಲ ಕಾರಣ ನಮ್ಮ ದೇಶದ ರೈತರು. ತಮ್ಮ ದೇಹವನ್ನು ದಂಡಿಸಿ, ಮಳೆ, ಚಳಿ, ಬಿಸಿಲೆನ್ನದೆ ದುಡಿಯುತ್ತಿರುವ ರೈತರು ಪ್ರಾಂಜಲ ಗುಣಮನಸ್ಸಿನ ಕಾಯಕಯೋಗಿಗಳು ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದ ಆರ್.ವಿ.ದೇಶಪಾಂಡೆಯವರು ಹೇಳಿದರು.
ಅವರು ಜಿಲ್ಲಾಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಕೃಷಿ ಇಲಾಖೆ ಹಳಿಯಾಳ ಇವರ ಆಶ್ರಯದಲ್ಲಿ ಸೋಮವಾರ ಪಟ್ಟಣದಲ್ಲಿರುವ ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರಿಯ ರೈತರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ರೈತರಷ್ಟೇ ಅಭಿವೃದ್ಧಿಗಾಗಿ ರಾಜ್ಯ ಸರಕಾರ ಉಪಯುಕ್ತ ಕಾರ್ಯಯೋಜನೆಗಳನ್ನು ಕೈಗೆತ್ತಿಕೊಂಡಿದೆ. ರೈತರು ಅಧಿಕ ಇಳುವರಿ ಹಾಗೂ ಅಧಿಕ ಆದಾಯ ತರುವ ಕೃಷಿ ಚಟುವಟಿಕೆಗೆ ಹೆಚ್ಚಿನ ಆಸಕ್ತಿಯನ್ನು ವಹಿಸಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ 2023-24ನೇ ಸಾಲಿನ ಆತ್ಮ ಯೋಜನೆಯಡಿ ಮಂಜೂರಾದ ಕೃಷಿ ಯಂತ್ರೋಪಕರಣ, ತಾಡಪತ್ರಿ, ತುಂತುರು ನೀರಾವರಿ ಘಟಕದ ಸಲಕರಣೆಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಲಾಯ್ತು. ತಾಲೂಕು ಮಟ್ಟದ ಉತ್ತಮ ಕೃಷಿಕ ಪ್ರಶಸ್ತಿಗೆ ಆಯ್ಕೆಯಾದ ರೈತರನ್ನು ಆರ್.ವಿ.ದೇಶಪಾಂಡೆಯವರು ಸನ್ಮಾನಿಸಿ, ಅಭಿನಂದಿಸಿದರು.
ಮುಗದ ಇಲ್ಲಿಯ ಕೃಷಿ ಸಂಶೋಧನಾ ಕೇಂದ್ರದ ಭತ್ತದ ತಳಿ ವಿಜ್ಞಾನಿ ಡಾ.ಸತೀಶ್.ಆರ್.ಜಿ ಅವರಿಂದ ಭತ್ತದ ತಳಿಗಳ ಬಗ್ಗೆ ಉಪನ್ಯಾಸ ನಡೆಯಿತು.
ವೇದಿಕೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೃಷ್ಣ ಪಾಟೀಲ್, ಕೆಪಿಸಿಸಿ ಸದಸ್ಯರಾದ ಸುಭಾಷ್ ಕೊರ್ವೇಕರ, ಮಾಜಿ ಜಿ.ಪಂ ಉಪಾಧ್ಯಕ್ಷ ಸಂತೋಷ್ ರೇಣುಕೆ, ಪ್ರಮುಖರಾದ ಸುವರ್ಣ ಮಾದರ್ ಉಮೇಶ್ ಬೋಳಶೆಟ್ಟಿ ಅಶೋಕ್ ಮೇಟಿ ಮೊದಲಾದವರು ಉಪಸ್ಥಿತರಿದ್ದರು.
ಸಹಾಯಕ ಕೃಷಿ ನಿರ್ದೇಶಕರಾದ ಪಿ.ಐ.ಮಾನೆ ಸ್ವಾಗತಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.