
ಯಲ್ಲಾಪುರ: ಲಾರಿ ಹಾಗೂ ಬುಲೆರೊ ನಡುವೆ ಅಪಘಾತ ಸಂಭವಿಸಿ, ಲಾರಿ ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ತಾಲೂಕಿನ ಗೇರಗದ್ದೆ ಕ್ರಾಸ್ ಬಳಿ ಸೋಮವಾರ ಸಂಜೆ ನಡೆದಿದೆ. ಅಂಕೋಲಾ ಕಡೆಯಿಂದ ಯಲ್ಲಾಪುರ ಕಡೆಗೆ ದಾಳಿಂಬೆ ಹಣ್ಣು ಸಾಗಿಸುತ್ತಿದ್ದ ಬುಲೆರೊಗೆ, ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ಬರುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಲಾರಿ ರಸ್ತೆ ಪಕ್ಕದ ಕಂದಕಕ್ಕೆ ಉರುಳಿದೆ. ಬುಲೆರೊ ಹಿಂಭಾಗ ನುಜ್ಜುಗುಜ್ಜಾಗಿದ್ದು, ದಾಳಿಂಬೆ ಹಣ್ಣು ರಾಶಿ ರಾಶಿಯಾಗಿ ಹೆದ್ದಾರಿ ಮೇಲೆ ಬಿದ್ದಿದೆ. ಗಾಯಗೊಂಡ ಲಾರಿ ಚಾಲಕನನ್ನು ಯಲ್ಲಾಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಿಂದ ಕೆಲಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಯಿತು. ಪೊಲೀಸರು ಸ್ಥಳಕ್ಕೆ ಆಗಮಿಸಿ, ಸಂಚಾರ ವ್ಯವಸ್ಥೆ ಸುಗಮಗೊಳಿಸಿದರು. ದಾಳಿಂಬೆ ಹಣ್ಣು ಹೊತ್ತೊಯ್ದ ಜನರು: ರಸ್ತೆಯಲ್ಲಿ ಹರಡಿ ಬಿದ್ದ ದಾಳಿಂಬೆ ಹಣ್ಣುಗಳನ್ನು ಹೊತ್ತೊಯ್ಯಲು ಜನತೆ ಮುಗಿ ಬಿದ್ದರು. ರಸ್ತೆಯಲ್ಲಿ ವಾಹನಗಳು ಸಂಚರಿಸುವುದನ್ನೂ ಲೆಕ್ಕಿಸದೇ ಚೀಲಗಳಲ್ಲಿ ಹಣ್ಣುಗಳನ್ನು ತುಂಬಿಕೊಂಡು ಒಯ್ಯುವುದು ಕಂಡು ಬಂತು. ಕೆಲವರು ಹಣ್ಣುಗಳನ್ನು ತುಂಬಿದ್ದ ಟ್ರೇ ಸಮೇತ ಎತ್ತಿಕೊಂಡು ಹೋದರು.



