ದಾಂಡೇಲಿ : ಸಂಸ್ಕಾರ ಸಾಕಾರ ಭಾರತಿ, ಶ್ರೀ.ಶಂಕರ ಮಠ ಹಾಗೂ ಸಹ್ಯಾದ್ರಿ ಲಲಿತ ಕಲಾ ಕೇಂದ್ರ (ರಿ.) ದಾಂಡೇಲಿ ಇವರ ಸಹಯೋಗದಲ್ಲಿ ನಗರದ ಶ್ರೀ ವೀರಭದ್ರೇಶ್ವರ ಸಭಾಭವನದಲ್ಲಿ ಸಂಭ್ರಮ ಹಾಗೂ ಸಡಗರದಿಂದ ನಾಟ್ಯೋತ್ಸವ ಕಾರ್ಯಕ್ರಮವು ಜರುಗಿತು.
ಕಾರ್ಯಕ್ರಮವನ್ನು ನಗರದ ಶ್ರೀ. ಶಂಕರ ಮಠದ ಅಧ್ಯಕ್ಷರು ಹಾಗೂ ವಕೀಲರ ಸಂಘದ ಅಧ್ಯಕ್ಷರಾದ ಎಚ್.ಎಸ್.ಕುಲಕರ್ಣಿ ಅವರು ಉದ್ಘಾಟಿಸಿ ಮಾತನಾಡುತ್ತಾ,
ನಮ್ಮ ದೇಶದ ಸಾಂಸ್ಕೃತಿಕ ಘನ ಪರಂಪರೆಯನ್ನು ಹೊಂದಿರುವ ಭರತ ನಾಟ್ಯ ವಿಶ್ವವ್ಯಾಪಿ ಗಮನ ಸೆಳೆದಿದೆ. ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಮೈದುಂಬಿಕೊಂಡ ಈ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಸಂಸ್ಕಾರ ಸಾಕಾರ ಭಾರತಿ ಹಾಗೂ ಸಹ್ಯಾದ್ರಿ ಲಲಿತ ಕಲಾ ಕೇಂದ್ರದ ಕೊಡುಗೆ ಮಹತ್ವಪೂರ್ಣವಾಗಿದೆ ಎಂದರು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಬಿ.ಎನ್.ವಾಸರೆಯವರು ಮಕ್ಕಳ ವ್ಯಕ್ತಿತ್ವ ವಿಕಸನದ ಜೊತೆಗೆ ಉನ್ನತ ಆದರ್ಶಗಳನ್ನು ಮೈಗೂಡಿಸಿಕೊಳ್ಳಲು ನೃತ್ಯ ಕಲೆ ಮಹತ್ವದ ಪಾತ್ರವನ್ನು ವಹಿಸುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಶಿಕ್ಷಕರಾದ ಗಣಪತಿ ಶೇಠ್ ಮತ್ತು ಸುಭಾಷ್.ಸಿ.ನಾಯಕ ಅವರು ಭಾಗವಹಿಸಿ ಸಂದರ್ಭೋಚಿತವಾಗಿ ಮಾತನಾಡಿ ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸುದರು.
ಕಾರ್ಯಕ್ರಮದಲ್ಲಿ ನೃತ್ಯಗುರುಗಳಾದ ಕೃಷ್ಣ ಭಾಗ್ವತ್, ಸೌಮ್ಯ ಪ್ರದೀಪ್ ಹೆಗಡೆ, ಅಮೃತಾ ರಾಘವ ಹೆಗಡೆ ಅವರುಗಳನ್ನು ಸನ್ಮಾನಿಸಲಾಯ್ತು.
ಕೃಷ್ಣ ಭಾಗ್ವತ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಸಂಪದಾ ಕುಲಕರ್ಣಿ ವಂದಿಸಿದರು. ಎನ್.ಬಿ.ಗೌಡ ಮತ್ತು ಸುಖದೇವಿ ಕಾರ್ಯಕ್ರಮವನ್ನು ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ನಾಟ್ಯೋತ್ಸವ ಚಿತ್ರ ನೃತ್ಯ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಲಾಭಿಮಾನಿಗಳು ಭಾಗವಹಿಸಿದ್ದರು.