ಜೋಯಿಡಾ ತಾಲೂಕಿನ ಉಳವಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಬೋಳಿ ಗ್ರಾಮದ 6 ಮಜರೆಗಳಿಗೆ ವಿದ್ಯುತ್ ಪೂರೈಸಲು ಹೆಸ್ಕಾಂ ಇಲಾಖೆ ವಿಫಲವಾಗಿದ್ದು, ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಸತ್ಯಾಗ್ರಹ ಮಾಡುವುದಾಗಿ ಗ್ರಾಮಸ್ಥರು ತಹಶೀಲ್ದಾರ್‌ಗೆ ಎಚ್ಚರಿಕೆಯ ಮನವಿ ಸಲ್ಲಿಸಿದ್ದಾರೆ.
ತಹಶೀಲ್ದಾರರಿಗೆ ನೀಡಿದ ಮನವಿಯಲ್ಲಿ, ಅಂಬೋಳಿ ಗ್ರಾಮದ 6 ಮಜರೆಗಳಲ್ಲಿ 20 ಕ್ಕೂ ಹೆಚ್ಚು ಕುಟುಂಬಗಳು ಅನಾದಿಕಾಲದಿಂದಲೂ ವಾಸವಾಗಿವೆ. ದೇಶ ಸ್ವಾತಂತ್ರ್ಯವಾಗಿ 7 ದಶಕ ಕಳೆದರೂ ಇಲ್ಲಿಯ ಮನೆಗಳ ಕತ್ತಲೆಯನ್ನು ಹೋಗಲಾಡಿಸುವ ಕೆಲಸವಾಗಿಲ್ಲ. ಇಲ್ಲಿರುವ ಹರಿಜನ ಕುಟುಂಬವು ವಿದ್ಯುತ್ ಬೆಳಕಿನ ಭಾಗ್ಯದಿಂದ ವಂಚಿತವಾಗಿದೆ. ಈ ಗ್ರಾಮಗಳಿಗೆ 2017 ರಲ್ಲಿ ವಿದ್ಯುತ್ ಮಂಜೂರಿ ಆದಾಗ ಗ್ರಾಮ ಪಂಚಾಯತ್ ಉಳವಿ ಮುಖಾಂತರ ರೇಶನ್ ಕಾರ್ಡ್, ಆಧಾರ್ ಸೇರಿದಂತೆ ಎಲ್ಲಾ ದಾಖಲೆಗಳನ್ನು ನೀಡಲಾಗಿದೆ. ಬೆಳಕು ಯೋಜನೆ ನಮ್ಮ ಪಾಲಿಗೆ ಕತ್ತಲೆಯ ಯೋಜನೆಯಾಗಿದೆ. ಶಾಲಾ ವಿದ್ಯಾರ್ಥಿಗಳು, ರೈತರು ತುಂಬಾ ತೊಂದರೆ ಅನುಭವಿಸುವಂತಾಗಿದೆ. ಈ ನಿಟ್ಟಿನಲ್ಲಿ ಒಂದು ವಾರದೊಳಗೆ ವಿದ್ಯುತ್ ನೀಡಲು ಕ್ರಮ ಕೈಗೊಳ್ಳದೇ ಇದ್ದರೆ ತಹಶೀಲ್ದಾರ್ ಕಾರ್ಯಾಲಯದ ಮುಂಭಾಗದಲ್ಲಿ ನಿರಂತರ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ತಿಳಿಸಿದ್ದಾರೆ.
ಮನವಿ ನೀಡುವ ವೇಳೆ ಪ್ರಮುಖರಾದ ಪ್ರೇಮಾನಂದ ವೆಳಿಪ, ಸಂದೇಶ ಮಿರಾಶಿ, ಲಕ್ಷ್ಮಣ ಮಿರಾಶಿ, ಗ್ರಾ.ಪಂ ಸದಸ್ಯ ವಿಷ್ಣು ಭಿರಂಗತ್, ಹಾಗೂ ಸೈನಿಕರ ಸಂಘದ ತಾಲೂಕು ಅಧ್ಯಕ್ಷ ಸಂತೋಷ ಸಾವಂತ್ ಮೊದಲಾದವರು ಉಪಸ್ಥಿತರಿದ್ದರು.