ಆಟದ ತೋಟ ಅಂಕಣ : ಪ್ರಸ್ತುತ ನಮ್ಮ ದೇಶದ ಕ್ರೀಡಾರಂಗ ಸಂಪೂರ್ಣ ಕ್ರಿಕೆಟ್ ಮಯವಾಗಿದೆ. ಕ್ರಿಕೆಟ್ ಪಡೆದುಕೊಂಡಿರುವ ಜನಪ್ರೀಯತೆ, ಆ ಕ್ರೀಡೆಯಲ್ಲಿ ತೊಡಗಿಕೊಂಡಿರುವ ಆಟಗಾರರು ಗಳಿಸಿಕೊಂಡಿರುವ ಸ್ಥಾನಮಾನಗಳನ್ನು ಉಳಿದ ಕ್ರೀಡೆಗಳೊಂದಿಗೆ ಹೋಲಿಸಿ ನೋಡಿದರೆ, ನಿಲುಕೆಗೂ ಸಿಗದಷ್ಟು ಅಜಗಜಾಂತರ ವ್ಯತ್ಯಾಸ ಕಂಡುಬರುವುದು ನಿಜ. ಇಂದಿನ ದಿನಮಾನಗಳಲ್ಲಿ ನಮ್ಮ ನಾಡಿನ ಕ್ರಿಕೆಟ್ ತಂಡದ ಪಂದ್ಯವೊಂದು ನಡೆಯುತ್ತದೆ ಅಂತಾದರೆ, ಮಾಧ್ಯಮದವರಿಂದ ಹಿಡಿದು ತೀರಾ ಜನಸಾಮಾನ್ಯರೂ ಕೂಡ ಆ ಸಮಯಕ್ಕೆ ಕಾಲಾವಕಾಶ ಮಾಡಿಕೊಂಡು ತುಂಬಾ ಕುತೂಹಲದಿಂದ ಪಂದ್ಯಕ್ಕಾಗಿ ಎದುರು ನೋಡುವಂತದ್ದು ತೀರಾ ಸಾಮಾನ್ಯ…
ಭಾರತದಂತಹ ಬೃಹತ್ ರಾಷ್ಟ್ರದಲ್ಲಿ ಕ್ರೀಡೆಯೊಂದು ಎಲ್ಲಾ ವಯೋಮಾನದ ಜನರ ಚಿತ್ತವನ್ನು ತನ್ನೆಡೆಗೆ ಆಕರ್ಷಿಸಿಕೊಳ್ಳವುದೆಂದರೆ ಅದು ಏಕಾಏಕಿ ಸಂಭವಿಸುವ ಪವಾಡವಲ್ಲ. ಅದು ಆ ಕ್ರೀಡೆಯಲ್ಲಿ ರಾಷ್ಟ್ರೀಯ ತಂಡದ ಹಾಗೂ ಆಟಗಾರರ ಹಲವಾರು ವರ್ಷಗಳ ಕಠಿಣ ಪರಿಶ್ರಮ. ಸಾಧನೆಗಳ, ದಾಖಲೆಗಳ ಫಲಶ್ರುತಿ .
ಒಂದು ದೇಶದ ಬಹುಪಾಲು ಜನರು ಒಂದು ಕ್ರೀಡೆಯನ್ನು ಇನ್ನಿಲ್ಲದಂತೇ ಇಷ್ಟಪಡುತ್ತಾರೆಂದರೆ ಹಾಗೂ ಆ ಕ್ರೀಡೆಯಲ್ಲಿ ತೊಡಗಿಕೊಂಡಿರುವ ಆಟಗಾರರನ್ನು ಆರಾಧಿಸುವ ಹಂತ ತಲುಪುತ್ತಾರೆಂದಾದರೆ, ಆ ಕ್ರೀಡೆಯಲ್ಲಿ ಆ ದೇಶದ ತಂಡ ವಿಶ್ವ ಮಟ್ಟದಲ್ಲಿ ತನ್ನ ಪಾರಮ್ಯತೆಯನ್ನು ಬಹು ಕಾಲಗಳಿಂದ ನಿರಂತರವಾಗಿ ಕಾಯ್ದುಕೊಂಡು ಬಂದಿದೆ ಅಂತಲೇ ಅರ್ಥ. ಎಂದಿಗೆ ಅದು ವಿಶ್ವ ಮಟ್ಟದಲ್ಲಿ ತನ್ನ ಸಾರ್ವಭೌಮತ್ವವನ್ನು ಕಾಪಾಡಿಕೊಂಡು ಹೋಗುವಲ್ಲಿ ವೈಫಲ್ಯತೆ ಕಾಣತೊಡಗುತ್ತದೊ ಅಲ್ಲಿಗೆ ಅದರ ಜನಪ್ರೀಯತೆಯೂ ನಿಧಾನವಾಗಿ ಕ್ಷೀಣಿಸ ತೊಡಗುತ್ತದೆ.
1970 ರ ತನಕ ಭಾರತದಲ್ಲಿ ಹಾಕಿ ಆಟ ಜನಪ್ರಿಯತೆಯ ಉತ್ತುಂಗ ಸ್ಥಾನದಲ್ಲಿತ್ತು. ಅಲ್ಲಿಯತನಕ ಭಾರತ ವಿಶ್ವ ಹಾಕಿ ರಂಗದ ಪ್ರಭಲ ಶಕ್ತಿ ಎನಿಸಿಕೊಂಡಿತ್ತು. ಆದರೆ ಕಾಲ ಕ್ರಮೇಣ ಈ ಪರಮ ಶ್ರೇಷ್ಠತೆಯನ್ನು ಉಳಿಸಿಕೊಂಡು ಹೋಗುವಲ್ಲಿ ಭಾರತದ ಹಾಕಿ ತಂಡಕ್ಕೆ ಸಾಧ್ಯವಾಗಲಿಲ್ಲ . ಅಂತೆಯೇ ನಾಡಿನಾದ್ಯಂತ ಅದು ಗಳಿಸಿಕೊಂಡಿದ್ದ ಜನಪ್ರೀಯತೆ ನಿಧಾನವಾಗಿ ಕ್ಷೀಣಿಸತೊಡಗಿತು.
1960 ರ ದಶಕದಲ್ಲಿ ಅಥ್ಲೆಟಿಕ್ಸ್‌ನಲ್ಲಿ ಮಿಲ್ಕಾ ಸಿಂಗ್‌ರ ಅದ್ಭುತ ಸಾಧನೆ ನಾಡಿನ ಯುವಜನತೆಯಲ್ಲಿ ರೋಮಾಂಚನ ಮೂಡಿಸಿತ್ತು. ಆದರೆ ಅವರ ನಂತರ 1980 ರ ದಶಕದಲ್ಲಿ ಪಿ.ಟಿ.ಉಶಾ ರಂಗ ಪ್ರವೇಶಿಸುವವರೆಗೆ ಇನ್ಯಾವದೇ ವಿಶೇಷ ಸಾಧನೆ ಅಥ್ಲೆಟಿಕ್ ಕ್ಷೇತ್ರದಲ್ಲಿ ಕಂಡುಬರಲಿಲ್ಲ. ಆದರೆ ಇಂದು ಪರಿಸ್ಥಿತಿ ಮೊದಲಿನಂತಿಲ್ಲ. ನೀರಜ್ ಛೋಪ್ರಾ ಓಲಂಪಿಕ್ಸ್ನಲ್ಲಿ ಭರ್ಚಿ ಎಸೆತದಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ರಚಿಸಿದ್ದಲ್ಲದೇ ನಾಡಿನ ಯುವ ಜನತೆಯಲ್ಲಿ ವಿದ್ಯುತ್ ಸಂಚಾರ ಉಂಟುಮಾಡಿದರು…
ಈ ಅಪ್ರತಿಮ ಸಾಧನೆಯ ಪ್ರಭಾವ ಎಷ್ಟರ ಮಟ್ಟಿಗೆ ಯುವ ಜನಾಂಗದ ಮೇಲೆ ಉಂಟಾಯಿತು ಎಂದರೆ, ಇದಾದ ಕೇವಲ ಒಂದು ವರ್ಷದ ಒಳಗಾಗಿ ನಡೆದ ಏಷ್ಯನ್ ಗೇಮ್ಸ್ನಲ್ಲಿ ನೀರಜ್ ಗೆ ಸಮಭಲದ ಹೋರಾಟ ನೀಡುವ ಮಟ್ಟಿಗೆ ನಮ್ಮ ನಾಡಿನ ಮತ್ತೊಬ್ಬ ಪ್ರತಿಭಾನ್ವಿತ ಆಟಗಾರ ಕಿಶೋರ ಜೆನಾ ಅಖಾಡಕ್ಕೆ ಸಿದ್ದಗೊಂಡರು. ಅಷ್ಟೇ ಅಲ್ಲದೇ ಹಿಂದೆಂದೂ ನಮ್ಮ ದೇಶಗಳಿಸದಿದ್ದ ನೂರಕ್ಕೂ ಮೀರಿದ ಸಂಖ್ಯೆಯಲ್ಲಿ ಪದಕ ಗೆದ್ದು ನಾಡಿನ ಪ್ರತಿಷ್ಠೆಯನ್ನು ಬೆಳಗಿದರು. ಆದರೆ ಈ ಸಾಧನೆಯ ಪಯಣ ಇಲ್ಲಿಗೆ ನಿಂತು ಹೋಗಬಾರದು. ಅದು ಆರೋಹಣ ಕ್ರಮದಲ್ಲೇ ನಿರಂತರವಾಗಿ ಸಾಗುತ್ತಲಿರಬೇಕು. ಅಂದರೆ ಮಾತ್ರ ಅಥ್ಲೆಟಿಕ್ ಕೂಡಾ ನಾಡಿನಲ್ಲಿ ಜನಪ್ರೀಯತೆ ಗಳಿಸಿಕೊಳ್ಳಬಹುದು.
ಟೆನ್ನಿಸ್ ಕ್ರೀಡೆಯಲ್ಲಿ ಅಮೃತರಾಜ್ ಸಹೋದರರು, ಲಿಯಾಂಡರ್ ಪೇಸ್, ರಮೇಶ ಹಾಗೂ ರಾಮನಾಥ ಕೃಷ್ಣನ್, ಮಹೇಶ ಭೂಪತಿ, ಬೋಪಣ್ಣ ಹಾಗೂ ಸಾನಿಯಾ ಮಿರ್ಜಾ ವಿಶ್ವ ಮಟ್ಟದಲ್ಲಿ ಉತ್ತಮ ಸಾಧನೆಗೈದರೂ ಕೂಡ, ಉಳಿದ ದೇಶದ ಆಟಗಾರರ ಪರಾಕ್ರಮಕ್ಕೆ ಸರಿಸಮನಾಗಿ ಸವಾಲು ಹಾಕುವ ಮಟ್ಟಕ್ಕೆ ಏರಲು ಸಾಧ್ಯವಾಗಲಿಲ್ಲ. ಹಾಗಾಗಿ ಟೆನ್ನಿಸ್ ಎಂಬ ಕ್ರೀಡೆ ಕೂಡಾ ಜನಮಾನಸದಲ್ಲಿ ಆಳವಾಗಿ ಬೇರೂರಲೇ ಇಲ್ಲ.
ಪ್ರಕಾಶ್ ಪಡುಕೋಣೆ ಅವರಿಂದ ಮೊದಲ್ಗೊಂಡು ಪಿ.ವಿ.ಸಿಂಧು ಅವರ ತನಕ ನಮ್ಮ ನಾಡು ಹಲವಾರು ವಿಶ್ವ ದರ್ಜೆಯ ಬ್ಯಾಡ್ಮಿಂಟನ್ ಆಟಗಾರರನ್ನು ಕಂಡಿದೆ. ಅಂತೆಯೇ ತಕ್ಕ ಮಟ್ಟಿಗಿನ ಜನಪ್ರೀಯತೆಯನ್ನೂ ಗಳಿಸಿಕೊಂಡಿದೆ. ಈ ಕ್ರೀಡಾ ಕ್ಷೇತ್ರದಲ್ಲಿ ಉಜ್ವಲ ಭವಿಷ್ಯದ ನಿರೀಕ್ಷೆಯನ್ನು ನಾಡಿನ ಕ್ರೀಡಾಭಿಮಾನಿಗಳು ಹೊಂದಿದ್ದಾರೆ.
ಕ್ರೀಡೆಗಳಲ್ಲಿ ಹಲವು ವಿಧ.
ಧೈಹಿಕ ಸಾಮರ್ಥ್ಯ ಅವಲಂಬಿತ ಕ್ರೀಡೆಗಳು – ಕುಸ್ತಿ , ಬಾಕ್ಸಿಂಗ್, ಜಿಮ್ನಾಸ್ಟಿಕ್, ಸ್ವಿಮ್ಮಿಂಗ್ ಮುಂತಾದವುಗಳು. ಬುದ್ಧಿಮತ್ತೆ ಯ ಅಗ್ನಿಪರೀಕ್ಷೆ ನಡೆಯುವಂತ ಕ್ರೀಡೆ – ಚದುರಂಗ .
ಏಕಾಗ್ರತೆ ಹಾಗೂ ನೈಪುಣ್ಯತೆಯನ್ನು ಹೊಂದಿರುವ ಕ್ರೀಡೆಗಳು – ಶೂಟಿಂಗ್ ,ಬಿಲ್ಲುಗಾರಿಕೆ, ಬಿಲಿಯರ್ಡ್ಸ್, ಕತ್ತಿ ವರಸೆ, ಸ್ನೂಕರ್, ಗಾಲ್ಫ್ ಮುಂತಾದವುಗಳು.
ಕ್ರೀಡಾ ಕ್ಷಮತೆಯೊಂದಿಗೆ ಗ್ಲಾಮರ್ ಹೊಂದಿರುವ ಕ್ರೀಡೆಗಳು – ಕ್ರಿಕೆಟ್, ಕಬಡ್ಡಿ, ಪುಟ್ಬಾಲ್, ವ್ಹಾಲಿಬಾಲ್, ಹಾಕಿ ಮುಂತಾದವು.
ವಿಶ್ವನಾಥನ್ ಆನಂದ್ ಐದು ಬಾರಿ ಚದುರಂಗದ ವಿಶ್ವ ಚಾಂಪಿಯನ್ ಪ್ರಶಸ್ತಿ ಎತ್ತಿದ್ದರಿಂದ ಆ ಕ್ರೀಡೆಯತ್ತ ಆಕರ್ಷಿತರಾದ ಪ್ರಗ್ಯಾನಂದ ಆದಿಯಾಗಿ ಹಲವಾರು ಯುವ ಪ್ರತಿಭಾನ್ವಿತ ಚದುರಂಗ ಪಟುಗಳು ಇಂದು ವಿಶ್ವ ಮಟ್ಟದಲ್ಲಿ ತಮ್ಮ ಛಾಪು ಮೂಡಿಸುವಲ್ಲಿ ಸಫಲರಾಗುತ್ತಿದ್ದಾರೆ.
ಹಾಗೆಯೇ ಮೈಕೆಲ್ ಪೆರಿರಾ, ಗೀತ್ ಸೇಠಿ, ಪಂಕಜ ಅಧ್ವಾನಿ ಮುಂತಾದವರು ಸ್ನೂಕರ್ ಹಾಗೂ ಬಿಲಿಯರ್ಡ್ಸ್ ಕ್ರೀಡೆಯಲ್ಲಿ , ಅಭಿನವ ಬಿಂದ್ರಾ ,ಗಗನ್ ನಾರಂಗ ಶೂಟಿಂಗ್ ನಲ್ಲಿ , ಮೇರಿ ಕೋಂ, ವಿಜೆಯೇಂದ್ರ ಬಾಕ್ಸಿಂಗ್ನಲ್ಲಿ ಬಜರಂಗ್ ಪುನಿಯಾ, ಸುಶಿಲ್ ಕುಮಾರ್, ವಿನೀಶಾ ಪೋಗಟ್, ಯೋಗೇಶ್ವರ್ ದತ್ತ್ ಕುಸ್ತಿಯಲ್ಲಿ ಜಾಗತಿಕ ಮಟ್ಟದಲ್ಲಿ ಅಪ್ರತಿಮ ಸಾಧನೆಗೈದಿದ್ದರೂ ಕೂಡಾ ಈ ಎಲ್ಲಾ ಕ್ರೀಡೆಗಳು ಶ್ರೀಮಂತರ ಕ್ರೀಡೆ , ಕಡಿಮೆ ಗ್ಲಾಮರ್ ಹೊಂದಿರುವ ಕ್ರೀಡೆ ಹಾಗೂ ಜನಸಾಮಾನ್ಯರಿಗೆ ಎಟುಕದ ಕ್ರೀಡೆ ಎಂಬ ಹಣೆಪಟ್ಟಿಯೊಂದಿಗೆ ಜನಪ್ರೀಯತೆ ಗಳಿಸುವಲ್ಲಿ ಅಷ್ಟಾಗಿ ಯಶಸ್ಸುಗಳಿಸಲಿಲ್ಲ.
ಈ ಎಲ್ಲಾ ಕ್ರೀಡೆಗಳಿಗೆ ಹೋಲಿಸಿ ನೋಡಿದಲ್ಲಿ ಕ್ರಿಕೆಟ್‌ನ ಯಶೋಗಾಥೆ ತುಂಬ ವಿಭಿನ್ನ ಹಾಗೂ ವರ್ಣರಂಜಿತ. ಹೆಚ್ಚು ಕಡಿಮೆ ಎಂಬತ್ತರ ದಶಕದವರೆಗೆ ಕ್ರಿಕೆಟ್ ಎಂಬ ಕ್ರೀಡೆ ನಮ್ಮ ನಾಡಿನಲ್ಲಿ ಗಳಿಸಿಕೊಂಡಿದ್ದು ಕೇವಲ ಸಾದಾರಣಮಟ್ಟದ ಜನಪ್ರೀಯತೆ ಮಾತ್ರ.
ಆದರೆ ಎಂದು ಕಪಿಲ್ ದೇವ್ ಸಾರಥ್ಯದ ಭಾರತ ಕ್ರಿಕೆಟ್ ತಂಡ 1983 ರಲ್ಲಿ ಜಗತ್ತೇ ಬೆಕ್ಕಸ ಬೆರಗಾಗುವಂತ ಸಾಧನೆಯೊಂದಿಗೆ ವಿಶ್ವ ಕಪ್ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿತೊ, ಅಲ್ಲಿಂದ ಭಾರತದಲ್ಲಿ ಕ್ರಿಕೆಟ್ನ ಸುವರ್ಣ ಯುಗ ಆರಂಭವಾಯಿತು. ಇದಾದ ಎರಡೇ ವರ್ಷಗಳೊಳಗಾಗಿ ಆಸ್ಟ್ರೇಲಿಯಾದಲ್ಲಿ ನಡೆದ ಬೆನ್ಸನ್ ಎಂಡ್ ಹೆಡ್ಜಸ್ ವಿಶ್ವ ಸರಣಿಯ ಪ್ರಶಸ್ತಿಯನ್ನೂ ಭಾರತ ತನ್ನ ಕಬ್ಜಾ ಮಾಡಿಕೊಂಡಿತು. ಇದಾದ ನಂತರ ನಮ್ಮ ದೇಶದ ಕ್ರಿಕೆಟ್ ತಂಡ ಹಿಂತಿರುಗಿ ನೋಡಲೇ ಇಲ್ಲ. ಕೆಲವು ಏಳು ಬೀಳುಗಳನ್ನು ಕಂಡರೂ ಕೂಡಾ ಸದಾ ವಿಶ್ವದ ಅಗ್ರ ಕ್ರಮಾಂಕದ ತಂಡಗಳ ಯಾದಿಯಲ್ಲಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳಲಿಲ್ಲ.
ಇದೆಲ್ಲದರ ಜೊತೆಗೆ ನಮ್ಮ ನೆಲದ ಮಹಾನ್ ಪ್ರತಿಭಾನ್ವಿತ ಆಟಗಾರರಾದ ಗವಾಸ್ಕರ್, ಕಪಿಲ್, ಸಚಿನ್, ದ್ರಾವಿಡ್, ಕುಂಬ್ಳೆ, ಸೇಹ್ವಾಗ್, ವಿರಾಟ್, ಲಕ್ಷ್ಮಣ, ಗಂಗೂಲಿ, ಹರಭಜನ್, ಯುವರಾಜ್ ಮುಂತಾದವರು ಯಾರೂ ಕಲ್ಪಿಸಲಾರದ ಧಾಖಲೆಗಳನ್ನು ಸಾಧಿಸುತ್ತ, ಅವಿಸ್ಮರಣೀಯ ಆಟಗಾರಿಕೆಯಿಂದ ಕೇವಲ ನಮ್ಮ ನಾಡಿನ ಕ್ರಿಕೆಟ್ ಅಭಿಮಾನಿಗಳ ಹೃದಯದಲ್ಲಿ ಮಾತ್ರವಲ್ಲದೇ ವಿಶ್ವದಾದ್ಯಂತ ಕ್ರಿಕೆಟ್ ಅಭಿಮಾನಿಗಳ ಹೃದಯದಲ್ಲೂ ಶಾಶ್ವತ ಸ್ಥಾನ ಕಲ್ಪಿಸಿಕೊಂಡರು. ಇಂದು ಅಂತರ್ರಾಷ್ಟ್ರೀಯ ಕ್ರಿಕೆಟ್ ಮಂಡಳಿ ಕೂಡಾ ಭಾರತ ಕ್ರಿಕೆಟ್ ಮಂಡಳಿಯ ಆಶೋತ್ತರಕ್ಕೆ ಪೂರಕವಾಗಿಯೇ ನಿರ್ಣಯಗಳನ್ನು ತೆಗೆದುಕೊಳ್ಳುವ ಮಟ್ಟಿಗೆ ನಮ್ಮ ನಾಡಿನ ಕ್ರಿಕೆಟ್ ವಿಶ್ವವ್ಯಾಪಿ ತನ್ನ ಪ್ರಭಾವ ಹಾಗೂ ಛಾಪನ್ನು ಮೂಡಿಸಿದೆ.
ಈ ಎಲ್ಲಾ ಸಂಗತಿಗಳನ್ನು ಅವಲೋಕಿಸಿದಾಗ ನಮ್ಮ ನಾಡಿನಲ್ಲಿ ಕ್ರಿಕೆಟ್ ಜನಪ್ರಿಯತೆಯ ಉತ್ತುಂಗ ಸ್ಥಿತಿಯಲ್ಲಿರುವುದು ತೀರಾ ಸಹಜ ಎನಿಸುತ್ತದೆ. ನಿರಂತರ ಯಶಸ್ಸು ಜನಪ್ರೀಯತೆಯ ಮೂಲಮಂತ್ರ ಅಲ್ಲವೇ..?