ದಾಂಡೇಲಿ: ಸಂಸತ್ತಿನಲ್ಲಿ ಕೇಂದ್ರ ಗೃಹ ಸಚಿವರಾದ ಅಮಿತ್ ಷಾ ಅವರು ನೂತನವಾಗಿ ಭಾರತೀಯ ನ್ಯಾಯ ಸಂಹಿತೆಯಲ್ಲಿ ಪರಿಚಯಿಸಿರುವ “ಹಿಟ್ ಆ್ಯಂಡ್ ರನ್” ಪ್ರಕರಣಕ್ಕೆ 10 ವರ್ಷಗಳ ಶಿಕ್ಷೆ ಹಾಗೂ ಭಾರಿ ಪ್ರಮಾಣದಲ್ಲಿ ದಂಡ ವಿಧಿಸಲಾಗುವ ವಿಧೇಯಕವನ್ನು ಮಂಡಿಸಿರುವುದಕ್ಕೆ ವಿರೋಧ ವ್ಯಕ್ತಪಡಿಸಿ ದಾಂಡೇಲಪ್ಪ ಲಾರಿ ಚಾಲಕರ ಸಂಘದ ನೇತೃತ್ವದಡಿ ಹಳಿಯಾಳ ರಸ್ತೆಯಲ್ಲಿ ಭಾನುವಾರ ಸಾಂಕೇತಿಕವಾಗಿ ಲಾರಿ ಚಾಲಕರು ಪ್ರತಿಭಟನೆಯನ್ನು ನಡೆಸಿದರು.
ದಾಂಡೇಲಪ್ಪ ಲಾರಿ ಚಾಲಕರ ಸಂಘದ ಅಧ್ಯಕ್ಷ ರಮೇಶ ಭಂಡಾರಿ ಮಾತನಾಡಿ ಕೇಂದ್ರ ಸರ್ಕಾರವು ಜಾರಿಗೆ ತರುತ್ತಿರುವ ನೂತನ ಕಾನೂನು ಲಾರಿ ಚಾಲಕರಿಗೆ ಹಾಗೂ ಮಾಲೀಕರಿಗೆ ದೊಡ್ಡ ನಷ್ಟವನ್ನುಂಟು ಮಾಡಲಿದೆ. ಅಪಘಾತದ ಸಮಯದಲ್ಲಿ ತಪ್ಪಿತಸ್ಥ ಚಾಲಕನಿಗೆ 10 ವರ್ಷಗಳ ಶಿಕ್ಷೆ ಮತ್ತು ಭಾರಿ ಪ್ರಮಾಣದಲ್ಲಿ ದಂಡ ಹಾಕುವ ಕಾನೂನಿನಿಂದ ಲಾರಿ ಹಾಗೂ ಟ್ಯಾಕ್ಸಿ ಚಾಲಕರು ಸಂಕಷ್ಟಕ್ಕೆ ಸಿಲುಕುತ್ತಾರೆ. ಕನಿಷ್ಠ ದಿನಗೂಲಿಯಲ್ಲಿ ಕೆಲಸ ಮಾಡಿಕೊಂಡು ಬದುಕುವ ಲಾರಿ ಚಾಲಕರುಗಳಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಶಿಕ್ಷೆಯಾಗುವ ಕಾನೂನು ಜಾರಿ ಮಾಡುವುದು ಉತ್ತಮ ಬೆಳವಣಿವೆಯಲ್ಲ. ಟ್ಯಾಕ್ಸಿ, ಕಾರು, ಲಾರಿ ಎಲ್ಲಾ ಚಾಲಕರು ಈ ಕಾನೂನನ್ನು ವಿರೋಧಿಸುತ್ತೇವೆ. ಈ ಕಾನೂನನ್ನು ಹಿಂಪಡೆದು ಚಾಲಕರಿಗೆ ಸುಗಮವಾಗಿ ಜೀವನ ನಡೆಸಲು ಅವಕಾಶ ಮಾಡಬೇಕು ಎಂದು ಒತ್ತಾಯಿಸಿದರು ಇಲ್ಲದೆ ಹೋದರೆ ಮುಂದಿನ ದಿನಗಳಲ್ಲಿ ಲಾರಿ ಚಾಲಕರು ಮುಷ್ಕರಕ್ಕೆ ಮುಂದಾಗಲು ಸಿದ್ಧರಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮುನ್ನಾ ಭಾಯಿ, ಕಾರು ಚಾಲಕರ ಸಂಘದ ಸೈಯದ್, ದಿಲ್ದಾರ ಪಾಷ್, ರಶೀದ್ ಶೇಖ, ಅಪ್ಪಾಜಾನ್ ಸಾಕಿಬ್ ಸೇರಿದಂತೆ ಬೇರೆ ರಾಜ್ಯಗಳ ಹಾಗೂ ಜಿಲ್ಲೆಗಳ ಲಾರಿ, ಟ್ಯಾಕ್ಸಿ ಚಾಲಕರು ಇದ್ದರು.