ಅಯೋಧ್ಯೆಯಲ್ಲಿ ಪ್ರತಿಷ್ಠಾಪಿಸಲಿರುವ ರಾಮಲಲ್ಲಾ ವಿಗ್ರಹವನ್ನು ನಿರ್ಧರಿಸಲು ಮತದಾನ ಇಂದು

ಅಯೋಧ್ಯೆ ಡಿಸೆಂಬರ್ 29: ಅಯೋಧ್ಯೆಯಲ್ಲಿ ಭವ್ಯವಾದ ರಾಮ ಜನ್ಮಭೂಮಿಯಲ್ಲಿರುವ  ರಾಮಮಂದಿರದಲ್ಲಿ ಪ್ರತಿಷ್ಠಾಪಿಸುವ ರಾಮಲಲ್ಲಾ ವಿಗ್ರಹವನ್ನು ನಿರ್ಧರಿಸಲು ಇಂದು (ಶುಕ್ರವಾರ) ಮತದಾನ ನಡೆಯಲಿದೆ. ಜನವರಿ 22 ರಂದು ಪ್ರಾಣಪ್ರತಿಷ್ಠೆಯಾಗಲಿರುವ ವಿಗ್ರಹ ಯಾವುದು ಎಂಬುದನ್ನು ಮತದಾನ ಮೂಲಕ ನಿರ್ಧರಿಸಲಾಗುತ್ತದೆ. ದೇವಾಲಯದ ನಿರ್ಮಾಣ ಮತ್ತು ನಿರ್ವಹಣೆಯ ಮೇಲ್ವಿಚಾರಣೆಯನ್ನು ವಹಿಸಿಕೊಂಡಿರುವ ಟ್ರಸ್ಟ್‌ನ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಸಭೆಯಲ್ಲಿ ಮತದಾನವನ್ನು ನಡೆಸಲಾಗುತ್ತದೆ. ಪ್ರತ್ಯೇಕ ಶಿಲ್ಪಿಗಳಿಂದ ರಚಿಸಲಾದ ಮೂರು ವಿಭಿನ್ನ ವಿನ್ಯಾಸಗಳನ್ನು ಪ್ರಸ್ತುತಪಡಿಸಲಾಗುತ್ತದೆ. ಹೆಚ್ಚಿನ ಸಂಖ್ಯೆಯ ಮತಗಳನ್ನು ಪಡೆದ ವಿಗ್ರಹವನ್ನು ಪ್ರತಿಷ್ಠಾಪನಾ ಸಮಾರಂಭದ ಸಮಯದಲ್ಲಿ ಗರ್ಭಗುಡಿಯೊಳಗೆ ಪ್ರತಿಪ್ಠಾಪನೆ ಮಾಡಲಾಗುತ್ತದೆ.

ಐದು ವರ್ಷದ ರಾಮ ಲಲ್ಲಾನನ್ನು ಚಿತ್ರಿಸುವ 51 ಇಂಚು ಎತ್ತರದ ರಾಮನ ವಿಗ್ರಹವನ್ನು ಮೂರು ವಿನ್ಯಾಸಗಳಲ್ಲಿ ಆಯ್ಕೆ ಮಾಡಲಾಗುವುದು ಎಂದು ಟ್ರಸ್ಟ್ ಕಾರ್ಯದರ್ಶಿ ಚಂಪತ್ ರಾಯ್ ಬುಧವಾರ ತಿಳಿಸಿದ್ದಾರೆ. ಅತ್ಯುತ್ತಮ ದೈವಿಕತೆಯನ್ನು ಹೊಂದಿರುವ, ಮಗುವಿನಂತೆ ಕಾಣುವ ವಿಗ್ರಹವನ್ನು ಆಯ್ಕೆ ಮಾಡಲಾಗುತ್ತದೆ ಎಂದು ಅವರು ಹೇಳಿದರು.

ಪ್ರಾಣ ಪ್ರತಿಷ್ಠೆ ದಿನಾಂಕ ಸಮೀಪಿಸುತ್ತಿದ್ದಂತೆ, ಶ್ರೀರಾಮ ಮಂದಿರ ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ ಅವರು ರಾಮ ಜನ್ಮಭೂಮಿ ಪಥ ಮತ್ತು ದೇವಾಲಯ ಸಂಕೀರ್ಣದಲ್ಲಿ ನಡೆಯುತ್ತಿರುವ ನಿರ್ಮಾಣ ಕಾಮಗಾರಿಯನ್ನು ಪರಿಶೀಲಿಸಿದರು. ಸಂಪೂರ್ಣ ಯೋಜನೆಯನ್ನು ಪೂರ್ಣಗೊಳಿಸಲು ಮೂರು-ಹಂತದ ಯೋಜನೆಯೊಂದಿಗೆ ನಿರ್ಮಾಣವು ತರಾತುರಿಗಿಂತ ಗುಣಮಟ್ಟವನ್ನು ಗಮನದಲ್ಲಿಟ್ಟುಕೊಂಡು ಮುಂದುವರಿಯುತ್ತಿದೆ ಎಂದು ಮಿಶ್ರಾ ಭರವಸೆ ನೀಡಿದರು.