ಕುಮಟಾ: ತಾಲೂಕಿನ ಕಲ್ಲಬ್ಬೆ ಗ್ರಾ.ಪಂ ವ್ಯಾಪ್ತಿಯ ಕೆಳಗಿನ ಕಂದವಳ್ಳಿ ಮತ್ತು ಮೇಲಿನ ಹೊಸಳ್ಳಿಯಲ್ಲಿ ಜನಸಂಪರ್ಕ ಸಭೆ ನಡೆಸಿ, ಸಾರ್ವಜನಿಕರಿಂದ ಶಾಸಕ ದಿನಕರ ಶೆಟ್ಟಿ ಅಹವಾಲು ಸ್ವೀಕರಿಸಿ, ಸಂಬಂಧಿತ ಇಲಾಖೆ ಅಧಿಕಾರಿಗಳಿಗೆ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದರು.
ಕೆಳಗಿನ ಕಂದವಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಶಿಥಿಲಾವಸ್ಥೆ ತಲುಪಿದೆ. ದುರಸ್ಥಿಗೆ ಹಣ ಬಿಡುಗಡೆಗೊಳಿಸಬೇಕು. ಕುಡಿಯುವ ನೀರಿನ ಸಮಸ್ಯೆಯಿದೆ. ಅಲ್ಲದೇ ಶಾಲೆಯ ಮೇಲ್ಭಾಗದಲ್ಲಿ ವಿದ್ಯುತ್ ಲೈನ್ ಹಾದು ಹೋಗಿದ್ದು, ಅದನ್ನು ಸ್ಥಳಾಂತರಿಸಬೇಕು ಮತ್ತು ರಸ್ತೆ ಅಭಿವೃದ್ಧಿಗೆ ಹಣ ಮಂಜೂರಿ ಮಾಡಬೇಕು ಎಂದು ಸಾರ್ವಜನಿಕರು ಶಾಸಕರನ್ನು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ದಿನಕರ ಶೆಟ್ಟಿ, ಶಾಲೆಯ ದುರಸ್ಥಿಗೆ ಅಗತ್ಯ ಕ್ರಮ ವಹಿಸಲಾಗಿ, ಸದ್ಯವೇ ಹಣ ಮಂಜೂರಿಯಾಗುತ್ತದೆ. ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಜಲಜೀವನ್ ಮಿಷನ್ ಯೋಜನೆಯ ಮಂಜೂರಿ ಮಾಡಲಾಗುತ್ತದೆ. ಅಲ್ಲದೇ ವಿದ್ಯುತ್ ಲೈನ್ ಸ್ಥಳಾಂತರಕ್ಕೆ ಹೆಸ್ಕಾಂ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಮೇಲಿನ ಹೊಸಳ್ಳಿ ಶಂಭುಲಿಂಗೇಶ್ವರ ದೇವಸ್ಥಾನದ ಸಭಾಭವನವನ್ನು ಪೂರ್ಣಗೊಳಿಸಲು ಸುಮಾರು ೫ ಲಕ್ಷ ರೂ. ಅವಶ್ಯವಿದೆ. ಸಭಾಭವನ ಪೂರ್ಣಗೊಂಡರೆ ಈ ಭಾಗದ ಸಾರ್ವಜನಿಕರಿಗೆ ಬಹಳ ಅನುಕೂಲವಾಗುತ್ತದೆ. ಈ ಬಗ್ಗೆ ಶಾಸಕರು ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ವಿನಂತಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಹಿಂದಿನ ಅವಧಿಯಲ್ಲಿ ಶಾಸಕನಾಗಿದ್ದ ಸಂದರ್ಭದಲ್ಲಿ ದೇವಸ್ಥಾನಕ್ಕೆ ೧೦ ಲಕ್ಷ ರೂ. ಸರ್ಕಾರದಿಂದ ಬಿಡುಗಡೆ ಮಾಡಿದ್ದೆ. ವೈಯಕ್ತಿಕವಾಗಿ ೭೫ ಸಾವಿರ ರೂ. ದೇಣಿಗೆ ನೀಡಿದ್ದೆ. ಈ ಬಾರಿಯೂ ೫ ಲಕ್ಷ ರೂ. ನೀಡುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕೆ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಗಜಾನನ ಪೈ, ತಾ.ಪಂ ಪ್ರಭಾರಿ ಕಾರ್ಯನಿರ್ವಹಣಾಧಿಕಾರಿ ನಾಗರತ್ನಾ ನಾಯಕ, ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಂದ್ರ ಭಟ್ಟ, ಬಿಜೆಪಿ ಮಂಡಲಾಧ್ಯಕ್ಷ ಹೇಮಂತಕುಮಾರ ಗಾಂವಕರ, ಕಲ್ಲಬ್ಬೆ ಗ್ರಾ.ಪಂ ಅಧ್ಯಕ್ಷ ಗಿರಿಯಾ ಗೌಡ, ಪ್ರಮುಖರಾದ ವಿನಾಯಕ ಭಟ್ಟ ಸಂತೆಗುಳಿ, ರವಿ ಭಟ್ಟ, ಜಿ.ಐ.ಹೆಗಡೆ ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು, ಗ್ರಾಮಸ್ಥರು ಇದ್ದರು.