IND vs SA: ಸೌತ್ ಆಫ್ರಿಕಾ ತಂಡಕ್ಕೆ ಬುಮ್ರಾ ಭಯ..!

ಸೌತ್ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಟೀಮ್ ಇಂಡಿಯಾ ಸಜ್ಜಾಗಿದೆ. ಸೆಂಚುರಿಯನ್​ನಲ್ಲಿನ ಸೂಪರ್​ಸ್ಪೋರ್ಟ್ ಪಾರ್ಕ್​ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದ ಮೂಲಕ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಜಸ್​ಪ್ರೀತ್ ಬುಮ್ರಾ ಮತ್ತೆ ಸ್ಪರ್ಧಾತ್ಮಕ ಕ್ರಿಕೆಟ್​ಗೆ ಮರಳಲಿದ್ದಾರೆ. ಈ ಮೂವರು ದಿಗ್ಗಜರು ಏಕದಿನ ವಿಶ್ವಕಪ್ ಫೈನಲ್ ಸೋಲಿನ ಬಳಿಕ​ ಯಾವುದೇ ಪಂದ್ಯವಾಡಿಲ್ಲ. ಇದೀಗ ಮೂವರು ಆಟಗಾರರು ಹರಿಣರ ನಾಡಿನಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.

ವಿಶೇಷ ಎಂದರೆ ಈ ಮೂವರು ಆಟಗಾರರು ಸೌತ್ ಆಫ್ರಿಕಾದಲ್ಲಿ ಉತ್ತಮ ಪ್ರದರ್ಶನ ನೀಡಿದ ನಿದರ್ಶನಗಳಿವೆ. ಇದಾಗ್ಯೂ ತವರಿನಲ್ಲಿ ಟೀಮ್ ಇಂಡಿಯಾ ವಿರುದ್ಧ ಸೌತ್ ಆಫ್ರಿಕಾ ಮೇಲುಗೈ ಸಾಧಿಸುತ್ತಾ ಬಂದಿದೆ. ಆದರೆ ಈ ಬಾರಿ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ನಡೆಯುತ್ತಿರುವುದರಿಂದ ಫಲಿತಾಂಶದಲ್ಲಿ ಬದಲಾವಣೆ ನಿರೀಕ್ಷಿಸಬಹುದು.

ಏಕೆಂದರೆ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಗಳ ಕಿಂಗ್ ಎಂದೇ ಗುರುತಿಸಿಕೊಂಡಿರುವ ಜಸ್​ಪ್ರೀತ್ ಬುಮ್ರಾ ಟೀಮ್ ಇಂಡಿಯಾಗೆ ಮರಳಿದ್ದಾರೆ. ಬುಮ್ರಾ ಇದುವರೆಗೆ 3 ಬಾಕ್ಸಿಂಗ್ ಡೇ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಬರೋಬ್ಬರಿ 20 ವಿಕೆಟ್​ಗಳನ್ನು ಕಬಳಿಸಿರುವುದು ವಿಶೇಷ.

ಅದರಲ್ಲೂ 2018 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್​ನಲ್ಲಿ ಜಸ್​ಪ್ರೀತ್ ಬುಮ್ರಾ ಕೇವಲ 33 ರನ್​ ನೀಡಿ 6 ವಿಕೆಟ್ ಕಬಳಿಸಿದ್ದರು. ಅಷ್ಟೇ ಅಲ್ಲದೆ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಕೂಡ ಪಡೆದಿದ್ದರು.

ಹಾಗೆಯೇ ಸೌತ್ ಆಫ್ರಿಕಾ ವಿರುದ್ಧ ಆಡಿದ 6 ಟೆಸ್ಟ್ ಪಂದ್ಯಗಳಿಂದ ಬುಮ್ರಾ ಒಟ್ಟು 26 ವಿಕೆಟ್ ಉರುಳಿಸಿದ್ದಾರೆ. ಈ ಎಲ್ಲಾ ಕಾರಣಹಳಿಂದಾಗಿ ಇದೀಗ ಸೌತ್ ಆಫ್ರಿಕಾ ತಂಡಕ್ಕೆ ಬೂಮ್ ಬೂಮ್ ಬುಮ್ರಾ ಚಿಂತೆ ಶುರುವಾಗಿದೆ.

ಬಾಕ್ಸಿಂಗ್​ ಡೇ ಟೆಸ್ಟ್​ನಲ್ಲಿ ಟೀಮ್ ಇಂಡಿಯಾ ಪ್ರದರ್ಶನ:

ಭಾರತ ತಂಡವು ಇದುವರೆಗೆ 17 ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಗಳನ್ನಾಡಿದೆ. ಈ ವೇಳೆ ಗೆದ್ದಿರುವುದು ಕೇವಲ 4 ಬಾರಿ ಮಾತ್ರ. ಇನ್ನುಳಿದ 10 ಪಂದ್ಯಗಳಲ್ಲಿ ಸೋಲನುಭವಿಸಿದ್ದರೆ, 3 ಮ್ಯಾಚ್ ಡ್ರಾನಲ್ಲಿ ಅಂತ್ಯ ಕಂಡಿತ್ತು.

ಇದಾಗ್ಯೂ 2021 ರಲ್ಲಿ ಸೆಂಚುರಿಯನ್​ನಲ್ಲಿ ಸೌತ್ ಆಫ್ರಿಕಾ ವಿರುದ್ಧ ನಡೆದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ 113 ರನ್​ಗಳ ಭರ್ಜರಿ ಜಯ ಸಾಧಿಸಿತ್ತು. ಹೀಗಾಗಿ ಈ ಬಾರಿ ಕೂಡ ಇತಿಹಾಸ ಪುನರಾವರ್ತನೆಯಾಗುವ ನಿರೀಕ್ಷೆಯಿದೆ.

ಬಾಕ್ಸಿಂಗ್ ಡೇ ಟೆಸ್ಟ್​ನಲ್ಲಿ ಭಾರತ ತಂಡ ಫಲಿತಾಂಶ:

  • 1985 vs ಆಸ್ಟ್ರೇಲಿಯಾ – ಪಂದ್ಯ ಡ್ರಾ (ಮೆಲ್ಬೋರ್ನ್)
  • 1987 vs ವೆಸ್ಟ್ ಇಂಡೀಸ್ – ಪಂದ್ಯ ಡ್ರಾ (ಈಡನ್ ಗಾರ್ಡನ್ಸ್)
  • 1991 vs ಆಸ್ಟ್ರೇಲಿಯಾ – 8 ವಿಕೆಟ್‌ಗಳ ಸೋಲು (ಮೆಲ್ಬೋರ್ನ್)
  • 1992 vs ಸೌತ್ ಆಫ್ರಿಕಾ – 9 ವಿಕೆಟ್‌ಗಳ ಸೋಲು (ಗ್ಕೆಬರ್ಹಾ)
  • 1996 vs ದಕ್ಷಿಣ ಆಫ್ರಿಕಾ – 328 ರನ್‌ಗಳ ಸೋಲು (ಡರ್ಬನ್)
  • 1998 vs ನ್ಯೂಝಿಲೆಂಡ್ – 4 ವಿಕೆಟ್‌ಗಳ ಸೋಲು (ವೆಲ್ಲಿಂಗ್ಟನ್)
  • 1999 ವಿರುದ್ಧ ಆಸ್ಟ್ರೇಲಿಯಾ – 180 ರನ್‌ಗಳ ಸೋಲು (ಮೆಲ್ಬೋರ್ನ್)
  • 2003 vs ಆಸ್ಟ್ರೇಲಿಯಾ – 9 ವಿಕೆಟ್‌ಗಳ ಸೋಲು (ಮೆಲ್ಬೋರ್ನ್)
  • 2006 vs ಸೌತ್ ಆಫ್ರಿಕಾ – 174 ರನ್‌ಗಳ ಸೋಲು (ಡರ್ಬನ್)
  • 2007 ವಿರುದ್ಧ ಆಸ್ಟ್ರೇಲಿಯಾ – 337 ರನ್‌ಗಳಿಂದ ಸೋಲು (ಮೆಲ್ಬೋರ್ನ್)
  • 2009 vs ಸೌತ್ ಆಫ್ರಿಕಾ – 87 ರನ್‌ಗಳಿಂದ ಗೆಲುವು (ಡರ್ಬನ್)
  • 2011 vs ಆಸ್ಟ್ರೇಲಿಯಾ – 122 ರನ್‌ಗಳ ಸೋಲು (ಮೆಲ್ಬೋರ್ನ್)
  • 2013 vs ಸೌತ್ ಆಫ್ರಿಕಾ – 10 ವಿಕೆಟ್‌ಗಳ ಸೋಲು (ಡರ್ಬನ್)
  • 2014 vs ಆಸ್ಟ್ರೇಲಿಯಾ – ಪಂದ್ಯ ಡ್ರಾ (ಮೆಲ್ಬೋರ್ನ್)
  • 2018 vs ಆಸ್ಟ್ರೇಲಿಯಾ – 137 ರನ್‌ಗಳಿಂದ ಗೆಲುವು (ಮೆಲ್ಬೋರ್ನ್)
  • 2020 vs ಆಸ್ಟ್ರೇಲಿಯಾ – 8 ವಿಕೆಟ್‌ಗಳ ಗೆಲುವು (ಮೆಲ್ಬೋರ್ನ್)
  • 2021 vs ಸೌತ್ ಆಫ್ರಿಕಾ – 113 ರನ್‌ಗಳ ಗೆಲುವು (ಸೆಂಚುರಿಯನ್)