ಯಲ್ಲಾಪುರ: ಶಾಸಕ ಶಿವರಾಮ ಹೆಬ್ಬಾರ ಅವರು ಬಿಜೆಪಿ ತೊರೆದು, ಕಾಂಗ್ರೆಸ್ ಸೇರುತ್ತಾರೆ ಎಂಬ ವದಂತಿ ಕಳೆದ ಐದಾರು ತಿಂಗಳುಗಳಿಂದ ಕ್ಷೇತ್ರದಾದ್ಯಂತ ಹಬ್ಬಿದೆ. ಕೆಲವೊಮ್ಮೆ ಹೆಬ್ಬಾರ್ ಅವರ ನಡೆಯೂ ಅದಕ್ಕೆ ಪುಷ್ಠಿ ನೀಡುವಂತೆ ಮಾಡುತ್ತಿದೆ.
ಕಾಂಗ್ರೆಸ್ ನ ಹಿರಿಯ ನಾಯಕ, ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ ಅವರು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಯಲ್ಲಾಪುರಕ್ಕೆ ಬಂದ ಸಂದರ್ಭದಲ್ಲಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಅವರನ್ನು ಹೆಬ್ಬಾರ್ ಭೇಟಿಯಾಗಿದ್ದಾರೆ.
ಹರಿಪ್ರಸಾದ ಅವರನ್ನು ಭೇಟಿಯಾದ ಹೆಬ್ಬಾರ್, ಅವರಿಗೆ ಶಾಲು ಹೊದೆಸಿ ಗೌರವಿಸಿದ್ದಾರೆ. ನಂತರ ಕೆಲ ಕಾಲ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಹೆಬ್ಬಾರ್ ಅವರ ಈ ನಡೆ, ಕಾಂಗ್ರೆಸ್ ಸೇರ್ಪಡೆ ಕುರಿತಾದ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬರಲು ಕಾರಣವಾಗಿದೆ.
ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕರ ಔತಣಕೂಟದಲ್ಲಿ ಶಾಸಕ ಹೆಬ್ಬಾರ್ ಹಾಗೂ ಎಸ್.ಟಿ.ಸೋಮಶೇಖರ್ ಭಾಗವಹಿಸಿದ್ದು, ರಾಜ್ಯಾದ್ಯಂತ ಚರ್ಚೆಯಾಗಿತ್ತು. ನಂತರ ಔತಣಕೂಟಕ್ಕೆ ಆಹ್ವಾನವಿತ್ತು, ಹೋಗಿ ಆತ್ಮೀಯತೆಯಿಂದ ಊಟ ಮಾಡಿ ಬಂದೆವು ಎಂಬ ಸಮಜಾಯಿಷಿ ನೀಡಿದ್ದರಾದರೂ, ಅದರ ಹಿಂದಿನ ಉದ್ದೇಶ ಬೇರೆ ಇತ್ತೆಂಬ ವಿಷಯ ಗುಟ್ಟಾಗಿ ಉಳಿದಿಲ್ಲ.
ಇದಾಗಿ ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಮುಖಂಡ ಹರಿಪ್ರಸಾದ ಅವರನ್ನು ಭೇಟಿಯಾಗಿದ್ದಾರೆ. ನಮ್ಮ ಊರಿಗೆ ಹಿರಿಯ ಮುಖಂಡರು ಬಂದಾಗ, ಕ್ಷೇತ್ರದ ಶಾಸಕನಾಗಿ ಅವರನ್ನು ಸ್ವಾಗತಿಸುವುದು, ಗೌರವಿಸಿವುದು ನನ್ನ ಹೊಣೆ ಎಂಬ ಸ್ಪಷ್ಟನೆಯನ್ನು ಹೆಬ್ಬಾರ್ ನೀಡುತ್ತಾರೆ. ಆದರೆ ಭೇಟಿಯ ಹಿಂದೆ ಅದೊಂದೇ ಉದ್ದೇಶವೇ ಎಂಬ ಪ್ರಶ್ಯ ಸಹಜವಾಗಿ ಮೂಡುತ್ತದೆ..
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಯಲ್ಲಾಪುರಕ್ಕೆ 3-4 ಸಚಿವರು ಭೇಟಿ ನೀಡಿದ್ದಾರೆ. ಆಗೆಲ್ಲ ಹೆಬ್ಬಾರ್ ಅವರು ಪ್ರವಾಸಿ ಮಂದಿರದಲ್ಲಿ ಭೇಟಿಯಾಗಿ, ಅವರನ್ನು ಸ್ವಾಗತಿಸಿ, ಗೌರವಿಸುವ ಕಾರ್ಯ ಮಾಡಿದ್ದಾರೆ. ಆದರೆ, ಕೇಂದ್ರ ಸಚಿವ, ಬಿಜೆಪಿ ಮುಖಂಡ ಪ್ರಹ್ಲಾದ ಜೋಶಿ ಯಲ್ಲಾಪುರಕ್ಕೆ ಬಂದಾಗ, ಊರಿನಲ್ಲೇ ಇದ್ದರೂ ಅತ್ತ ಮುಖ ಹಾಕಿರಲಿಲ್ಲ. ಕಾಂಗ್ರೆಸ್ ಮುಖಂಡರು ಊರಿಗೆ ಬಂದಾಗ ಭೇಟಿಯಾಗುವ ಶಾಸಕರು, ತಮ್ಮದೇ ಪಕ್ಷದ ಮುಖಂಡರು ಬಂದಾಗ ಏಕೆ ಭೇಟಿಯಾಗುವುದಿಲ್ಲ ಎಂಬುದು ಕುತೂಹಲದ ಸಂಗತಿ.
ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದ ನಂತರ ಹೆಬ್ಬಾರ್ ಕಾಂಗ್ರೆಸ್ ಸೇರ್ಪಡೆಗೆ ಮುಂದಾಗುವುದಿಲ್ಲ ಎಂದು ಹೇಳಲಾಗಿತ್ತು. ಆದರೆ ಇತ್ತೀಚಿನ ಅವರ ನಡೆಗಳು ಅದನ್ನು ಸುಳ್ಳು ಎನ್ನುತ್ತಿವೆ.