ದೆಹಲಿ, ಡಿ.22: ದೆಹಲಿ ಮದ್ಯ ನೀತಿಗೆ ಸಂಬಂಧಿಸಿದಂತೆ ಎಎಪಿ ನಾಯಕ ಸಂಜಯ್ ಸಿಂಗ್ ಅವರ ಜಾಮೀನು ಅರ್ಜಿಯನ್ನು ದೆಹಲಿ ಕೋರ್ಟ್ ಇಂದು ವಜಾಗೊಳಿಸಿದೆ. ಮದ್ಯ ನೀತಿಯಲ್ಲಿ ಅಕ್ರಮ ಹಣ ವರ್ಗಾವಣೆ ಮಾಡಿದ್ದಾರೆ ಎಂದು ಅವರನ್ನು ಬಂಧಿಸಲಾಗಿತ್ತು. ವಿಶೇಷ ನ್ಯಾಯಾಧೀಶ ಎಂಕೆ ನಾಗ್ಪಾಲ್ ಅವರು ರಾಜ್ಯಸಭಾ ಸಂಸದ ಸಿಂಗ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದಾರೆ.
ಸಂಜಯ್ ಸಿಂಗ್ ಅವರ ಜಾಮೀನು ಅರ್ಜಿಯನ್ನು ಗುರುವಾರ ನ್ಯಾಯಾಲಯವು ವಿಚಾರಣೆಯನ್ನು ಮುಂದೂಡಿತ್ತು. ಡಿಸೆಂಬರ್ 22ರಂದು ಅರ್ಜಿಯನ್ನು ವಿಚಾರ ಮಾಡುವುದಾಗಿ ಹೇಳಿತ್ತು. ಇನ್ನು ಈ ಪ್ರಕರಣದ ವಿಚಾರಣೆ ವೇಳೆ ಸಂಜಯ್ ಸಿಂಗ್ ಅವರ ವಕೀಲರು ವಾದ ಮಂಡಿಸುವ ವೇಳೆ ಸಂಜಯ್ ಸಿಂಗ್ ಅವರಿಗೆ ಲಂಚ ನೀಡುವ ಕುರಿತು ಆರೋಪಿ ದಿನೇಶ್ ಅರೋರಾ ಮತ್ತು ಇತರ ಸಾಕ್ಷಿಗಳ ಹೇಳಿಕೆಗಳಲ್ಲಿ ವಿರೋಧಾಭಾಸಗಳಿವೆ ಎಂದು ಹೇಳಿದರು.
ಇನ್ನು ಸಂಜಯ್ ಸಿಂಗ್ ಅವರ ಜಾಮೀನಿ ಅರ್ಜಿಯನ್ನು ಇಡಿ ವಿರೋಧಿಸಿತ್ತು. ಈ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದರೆ ತನಿಖೆಗೆ ಅಡ್ಡಿಯಾಗಬಹುದು. ಸಾಕ್ಷಿಗಳನ್ನು ನಾಶ ಮಾಡಬಹುದು ಎಂದು ಇಡಿ ಹೇಳಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 4 ರಂದು ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಅವರನ್ನು ಬಂಧಿಸಲಾಗಿತ್ತು.
ಮದ್ಯ ತಯಾರಕರು, ಸಗಟು ವ್ಯಾಪಾರಿಗಳು ಮತ್ತು ಚಿಲ್ಲರೆ ವ್ಯಾಪಾರಿಗಳಿಗೆ ಲಾಭದಾಯಕವಾಗಿರುವ 2021-2022 ರ ಅಬಕಾರಿ ನೀತಿಯ ರಚನೆ ಮತ್ತು ಅನುಷ್ಠಾನದಲ್ಲಿ ಪ್ರಮುಖ ಪಾತ್ರವಹಿಸಿದರು. ಆದರೆ ಈ ಬಗ್ಗೆ ಸಂಜಯ್ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.