ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆದ ಮೂರು ಪಂದ್ಯಗಳ ಏಕದಿನ ಸರಣಿ ಕೊನೆಯ ಪಂದ್ಯವನ್ನು ಗೆಲ್ಲುವ ಮೂಲಕ ಟೀಂ ಇಂಡಿಯಾ 2-1 ರಿಂದ ಏಕದಿನ ಸರಣಿಯನ್ನು ಕೈವಶ ಮಾಡಿಕೊಂಡಿದೆ. ಈ ಮೂಲಕ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾವನ್ನು ಅವರ ತವರಿನಲ್ಲಿ ಎರಡನೇ ಬಾರಿಗೆ ಸೋಲಿಸಿದ ದಾಖಲೆ ಬರೆದಿದೆ.
ಕೆಎಲ್ ರಾಹುಲ್ ನಾಯಕತ್ವದಲ್ಲಿ ಯುವ ಟೀಂ ಇಂಡಿಯಾ ಈ ಸರಣಿಯನ್ನು ಆಡಿತ್ತು. ವಿರಾಟ್ ಕೊಹ್ಲಿ ನಂತರ, ತಮ್ಮ ನಾಯಕತ್ವದಲ್ಲಿ ದಕ್ಷಿಣ ಆಫ್ರಿಕಾವನ್ನು ಅವರ ತವರಿನಲ್ಲಿ ಸೋಲಿಸಿದ ಎರಡನೇ ನಾಯಕ ಎಂಬ ಹೆಗ್ಗಳಿಕೆಗೆ ರಾಹುಲ್ ಪಾತ್ರರಾದರು.
ಮೇಲೆ ಹೇಳಿದಂತೆ ಕೆಎಲ್ ರಾಹುಲ್ ನಾಯಕತ್ವದಲ್ಲಿ ಯುವ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ ಕಣಕ್ಕಿಳಿದಿತ್ತು. ಅವಕಾಶ ಪಡೆದ ಎಲ್ಲಾ ಆಟಗರರು ತಮ್ಮ ಪ್ರತಿಭೆ ಪ್ರದರ್ಶಿಸುವಲ್ಲಿ ಯಶಸ್ವಿ ಕೂಡ ಆದರು. ಅದರಲ್ಲೂ ಭಾರತದ ಯುವ ವೇಗದ ಬೌಲರ್ ಅರ್ಷದೀಪ್ ಸಿಂಗ್ ಅದ್ಭುತ ಪ್ರದರ್ಶನ ನೀಡಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಅಲ್ಲದೆ ತಮ್ಮ ಹೆಸರಿನಲ್ಲಿ ಹಲವು ದಾಖಲೆ ಕೂಡ ನಿರ್ಮಿಸಿದರು.
ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಅರ್ಷದೀಪ್ ಸಿಂಗ್ 30 ರನ್ ನೀಡಿ 4 ವಿಕೆಟ್ ಪಡೆದರು. ಈ ಪ್ರದರ್ಶನದೊಂದಿಗೆ ಅವರು ಅನೇಕ ದಾಖಲೆಗಳನ್ನು ಮಾಡಿದಲ್ಲದೆ ಟೂರ್ನಿಯಲ್ಲಿ ನೀಡಿದ ಅದ್ಭೂತ ಪ್ರದರ್ಶನಕ್ಕೆ ಸರಣಿ ಶ್ರೇಷ್ಠ ಪ್ರಶಸ್ತಿ ಕೂಡ ಪಡೆದರು.
ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನದಲ್ಲಿ 10 ವಿಕೆಟ್ ಪಡೆದ ಬೌಲರ್ಗಳ ಪಟ್ಟಿಯಲ್ಲಿ ಅರ್ಷದೀಪ್ ಸಿಂಗ್ ಹೆಸರು ಮೊದಲ ಸ್ಥಾನದಲ್ಲಿದೆ. ಕೊನೆಯ ಪಂದ್ಯದಲ್ಲಿ 4 ವಿಕೆಟ್ ಪಡೆದ ಅರ್ಷದೀಪ್ ಸರಣಿಯ ಮೊದಲ ಪಂದ್ಯದಲ್ಲಿ 37 ರನ್ ನೀಡಿ 5 ವಿಕೆಟ್ ಕಬಳಿಸಿದ್ದರು.
ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಅರ್ಷದೀಪ್ ಸಿಂಗ್ ಎರಡನೇ ಬಾರಿಗೆ 4 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದರು. ಈ ಮೂಲಕ ಭಾರತ ಮತ್ತು ದಕ್ಷಿಣ ಆಫ್ರಿಕಾ ಏಕದಿನ ಪಂದ್ಯದಲ್ಲಿ ಈ ಸಾಧನೆ ಮಾಡಿದ ಐದನೇ ಬೌಲರ್ ಎನಿಸಿಕೊಂಡಿದ್ದಾರೆ.
ಹಾಗೆಯೇ ದಕ್ಷಿಣ ಆಫ್ರಿಕಾ ತಂಡವನ್ನು ಹೊರತುಪಡಿಸಿ ಭೇಟಿ ನೀಡುವ ತಂಡದ ಬೌಲರ್ ಒಂದೇ ಏಕದಿನ ಸರಣಿಯಲ್ಲಿ ಎರಡು ಬಾರಿ 4 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್‌ಗಳನ್ನು ಪಡೆದ ಸಾಧನೆ ಮಾಡಿದ ಐದನೇ ಬೌಲರ್ ಎಂಬ ಖ್ಯಾತಿಗೆ ಅರ್ಷದೀಪ್ ಭಾಜನರಾಗಿದ್ದಾರೆ.