ವಿರಾಟ್ ಕೊಹ್ಲಿ, ಬುಮ್ರಾಗೆ ಅನ್ಯಾಯ: ಬದಲಾಗಲಿದೆಯಾ ಐಪಿಎಲ್​ ಹರಾಜು ನಿಯಮ?

ದುಬೈನಲ್ಲಿ ನಡೆದ ಐಪಿಎಲ್ (IPL 2024) ಮಿನಿ ಹರಾಜು ಹಲವು ಅಚ್ಚರಿಗಳಿಗೆ ಕಾರಣವಾಗಿತ್ತು. ಈ ಅಚ್ಚರಿಗಳೇ ಈಗ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಏಕೆಂದರೆ ಈ ಬಾರಿಯ ಆಕ್ಷನ್​ನಲ್ಲಿ ಆಸ್ಟ್ರೇಲಿಯಾ ಆಟಗಾರ ಮಿಚೆಲ್ ಸ್ಟಾರ್ಕ್ ಬರೋಬ್ಬರಿ 24.75 ಕೋಟಿಗೆ ಕೆಕೆಆರ್ ತಂಡಕ್ಕೆ ಹರಾಜಾಗಿದ್ದಾರೆ. ಇದರೊಂದಿಗೆ ಐಪಿಎಲ್​ ಇತಿಹಾಸದಲ್ಲೇ ಅತ್ಯಧಿಕ ಮೊತ್ತ ಪಡೆದ ಆಟಗಾರ ಎಂಬ ಹೆಗ್ಗಳಿಕೆಗೆ ಸ್ಟಾರ್ಕ್​ ಪಾತ್ರರಾಗಿದ್ದಾರೆ. ಮತ್ತೊಂದೆಡೆ ಪ್ಯಾಟ್ ಕಮಿನ್ಸ್ ಅವರನ್ನು ಸನ್​ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ 20.50 ಕೋಟಿ ರೂ.ಗೆ ಖರೀದಿಸಿದೆ. ಇದು ಐಪಿಎಲ್​ ಇತಿಹಾಸದ 2ನೇ ದುಬಾರಿ ಬಿಡ್ಡಿಂಗ್. ಈ ಎರಡು ದುಬಾರಿ ಹರಾಜಿನ ಬೆನ್ನಲ್ಲೇ ಐಪಿಎಲ್ ನಿಯಮಗಳ ಬಗ್ಗೆ ಅಪಸ್ವರಗಳು ಕೇಳಿ ಬಂದಿವೆ.

ಏಕೆಂದರೆ ಕೆಲ ಆಟಗಾರರನ್ನು ನಿರ್ದಿಷ್ಟ ಮೊತ್ತ ನೀಡಿ ಫ್ರಾಂಚೈಸಿಗಳು ಉಳಿಸಿಕೊಳ್ಳುತ್ತಾ ಬಂದಿವೆ. ಈ ಆಟಗಾರರು ಬಿಡ್ಡಿಂಗ್​ನಲ್ಲಿ ಕಾಣಿಸಿಕೊಂಡರೆ ಬೃಹತ್ ಮೊತ್ತ ಪಡೆಯುವುದಂತು ಖಚಿತ. ಆದರೆ ಫ್ರಾಂಚೈಸಿಗಳ ನಿಯಮಗಳಿಗೆ ಅನುಗುಣವಾಗಿ ರಿಟೈನ್ ಆಗುತ್ತಾ ಬರುತ್ತಿದ್ದಾರೆ. ಆದರೆ ಇತ್ತ ಹರಾಜಿನಲ್ಲಿ ಕಾಣಿಸಿಕೊಳ್ಳುವ ಆಟಗಾರರು ಮಾತ್ರ ಅವರಿಗಿಂತ ಹೆಚ್ಚಿನ ಮೊತ್ತಕ್ಕೆ ಬಿಡ್ ಆಗುತ್ತಿದ್ದಾರೆ.

ಉದಾಹರಣೆಗೆ, ಆರ್​ಸಿಬಿ ಫ್ರಾಂಚೈಸಿ ಈ ಬಾರಿ ಕೂಡ ವಿರಾಟ್ ಕೊಹ್ಲಿಯನ್ನು 15 ಕೋಟಿ ರೂ.ಗೆ ರಿಟೈನ್ ಮಾಡಿಕೊಂಡಿದೆ. ಒಂದು ವೇಳೆ ಕಿಂಗ್ ಕೊಹ್ಲಿ ಹರಾಜಿನಲ್ಲಿ ಕಾಣಿಸಿಕೊಂಡರೆ ಅವರ ಮೊತ್ತ 25 ಕೋಟಿ ರೂ. ದಾಟುವುದಂತು ನಿಶ್ಚಿತ.

ಹಾಗೆಯೇ ಜಸ್​ಪ್ರೀತ್ ಬುಮ್ರಾ ಮುಂಬೈ ಇಂಡಿಯನ್ಸ್ ಪರ ಆಡುತ್ತಿರುವುದು ಕೇವಲ 12 ಕೋಟಿ ರೂ.ಗೆ. ಆದರೆ ಇಲ್ಲಿ ಹರಾಜಿನಲ್ಲಿ ಕಾಣಿಸಿಕೊಂಡಿರುವ ಮಿಚೆಲ್ ಸ್ಟಾರ್ಕ್​ಗೆ ಸಿಕ್ಕಿರುವುದು 24.75 ಕೋಟಿ ರೂ.ಗಳು. ಅಂದರೆ ಬುಮ್ರಾ ಹರಾಜಿಗೆ ಬಂದರೆ ಸ್ಟಾರ್ಕ್​ಗಿಂತ ಹೆಚ್ಚಿನ ಮೊತ್ತ ಪಡೆಯುವುದರಲ್ಲಿ ಅನುಮಾನವೇ ಇಲ್ಲ. ಆದರೆ ಐಪಿಎಲ್ ರಿಟೈನ್ ನಿಯಮದಿಂದಾಗಿ ಇದೀಗ ಭಾರತದ ಸ್ಟಾರ್ ಆಟಗಾರರು ಕಡಿಮೆ ವೇತನ ಪಡೆಯುವಂತಾಗಿದೆ. ಅತ್ತ ಹರಾಜಿನಲ್ಲಿ ಕಾಣಿಸಿಕೊಳ್ಳುವ ವಿದೇಶಿ ಆಟಗಾರರು ಮಾತ್ರ ಬೃಹತ್ ಮೊತ್ತಕ್ಕೆ ಬಿಡ್ ಆಗುತ್ತಿದ್ದಾರೆ.

ಇದು ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್​​ಪ್ರೀತ್ ಬುಮ್ರಾ ಅಥವಾ ಧೋನಿಯಂತಹ ಆಟಗಾರರಿಗೆ ಮಾಡುವ ಅನ್ಯಾಯ ಎಂದು ಅನೇಕರು ವಿಶ್ಲೇಷಿಸಿದ್ದಾರೆ. ಏಕೆಂದರೆ ಈ ಆಟಗಾರರು ಒಂದೇ ಫ್ರಾಂಚೈಸಿ ಪರ ನಿಯತ್ತಾಗಿದ್ದರೂ ಹೆಚ್ಚಿನ ಸಂಭಾವನೆ ಪಡೆಯುತ್ತಿಲ್ಲ. ಇದೇ ವೇಳೆ ಹರಾಜಿನಲ್ಲಿ ಕಾಣಿಸಿಕೊಳ್ಳುವ ಆಟಗಾರರಿಗೆ ಫ್ರಾಂಚೈಸಿಗಳು ಹೆಚ್ಚಿನ ಮೊತ್ತ ನೀಡುತ್ತಿದ್ದಾರೆ ಎಂಬ ಅಭಿಪ್ರಾಯಗಳು ಕೇಳಿ ಬಂದಿವೆ.

ವಿದೇಶಿಯರಿಗೆ ವಿಶೇಷ ಪರ್ಸ್​:

ಈ ಬಗ್ಗೆ ಮಾತನಾಡಿರುವ ಟೀಮ್ ಇಂಡಿಯಾ ಮಾಜಿ ನಾಯಕ ಅನಿಲ್ ಕುಂಬ್ಳೆ ಐಪಿಎಲ್ ಹರಾಜಿನಲ್ಲಿ ವಿದೇಶಿಯರಿಗೆ ಬೇರೆ ಪರ್ಸ್ ಮೊತ್ತವನ್ನು ನಿಗದಿ ಮಾಡಬೇಕೆಂದು ಸಲಹೆ ನೀಡಿದ್ದಾರೆ. ಇದರಿಂದ ಭಾರತ ಮತ್ತು ವಿದೇಶಿ ಆಟಗಾರರ ನಡುವಿನ ವೇತನ ವ್ಯತ್ಯಾಸವನ್ನು ಕಡಿಮೆ ಮಾಡಬಹುದು.

ಇಲ್ಲಿ ವಿದೇಶಿ ಆಟಗಾರರಿಗೆ ಇಂತಿಷ್ಟು ಪರ್ಸ್ ಮೊತ್ತ ನಿಗದಿ ಮಾಡುವುದರಿಂದ ಆ ಮೊತ್ತದೊಳಗೆ ಅವರು 8 ಆಟಗಾರರನ್ನು ಖರೀದಿಸಬೇಕಾಗುತ್ತದೆ. ಇದರಿಂದ ಪ್ರಸ್ತುತ ಕಂಡು ಬರುತ್ತಿರುವಂತಹ ವೇತನ ತಾರತಮ್ಯವನ್ನು ದೂರ ಮಾಡಬಹುದು ಎಂದು ಅನಿಲ್ ಕುಂಬ್ಳೆ ಅಭಿಪ್ರಾಯಪಟ್ಟಿದ್ದಾರೆ.

ಇದೇ ವಿಷಯವನ್ನು ಆಕಾಶ್ ಚೋಪ್ರಾ ಕೂಡ ಪ್ರಸ್ತಾಪಿಸಿದ್ದಾರೆ. ಮಿನಿ ಹರಾಜು ಮುಗಿದ ನಂತರ, ವಿದೇಶಿ ಆಟಗಾರರಿಗೆ ಯಾವಾಗಲೂ ಪ್ರತ್ಯೇಕ ಹರಾಜು ಪರ್ಸ್ ನೀಡಬೇಕೆಂದು ತಿಳಿಸಿದ್ದಾರೆ. ಬುಮ್ರಾ ಹಾಗೂ ಸ್ಟಾರ್ಕ್​ ಅವರ ನಡುವಿನ ವೇತನ ವ್ಯತ್ಯಾಸ ನೋಡಿ, ಇಲ್ಲಿ ಯಾರು ಉತ್ತಮ ಬೌಲರ್​ ಎಂದು ಕೇಳಿದರೆ ಎಲ್ಲರ ಉತ್ತರ ಜಸ್​ಪ್ರೀತ್ ಬುಮ್ರಾ ಆಗಿರಲಿದೆ.

ಆದರೆ ಅವರು ಕೇವಲ 12 ಕೋಟಿ ರೂ. ಪಡೆಯುತ್ತಾರೆ. ಆದರೆ ಸ್ಟಾರ್ಕ್ ಸುಮಾರು 25 ಕೋಟಿ ರೂಪಾಯಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂಬುದೇ ಅಚ್ಚರಿ. ಆಟಗಾರರು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಉತ್ತಮ ಮೊತ್ತವನ್ನು ಪಡೆಯದಿದ್ದರೆ, ಅದು ಸರಿಯಾದ ಕ್ರಮವಲ್ಲ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.

ಹಳೆಯ ನಿಯಮದಲ್ಲೇ ಉಳಿದ ಐಪಿಎಲ್:

ಐಪಿಎಲ್​ನ ರಿಟೈನ್ ನಿಯಮ ರೂಪಿಸಿರುವುದು 2008 ರಲ್ಲಿ. ಅಂದು ಎಲ್ಲಾ ತಂಡಗಳ ಪರ್ಸ್ ಮೊತ್ತ ಕಡಿಮೆಯಿತ್ತು. ಆದರೀಗ ಹರಾಜು ಮೊತ್ತವನ್ನು 100 ಕೋಟಿಗೆ ಏರಿಸಲಾಗಿದೆ. ಈಗ ಫ್ರಾಂಚೈಸಿಗಳು ಶೇ. 70 ರಷ್ಟು ಹಣವನ್ನು ಆಟಗಾರರನ್ನು ಉಳಿಸಿಕೊಳ್ಳುವಲ್ಲಿ ಖರ್ಚು ಮಾಡುತ್ತಿದೆ. ಇನ್ನುಳಿದ ಮೊತ್ತವನ್ನು ವಿದೇಶಿ ಆಟಗಾರರ ಖರೀದಿಗೆ ಬಳಸಲಾಗುತ್ತಿದೆ. ಇದರಿಂದ ಭಾರತದ ಸ್ಟಾರ್ ಆಟಗಾರರಿಗಿಂತ ವಿದೇಶಿ ಪ್ಲೇಯರ್ಸ್ ಹೆಚ್ಚಿನ ಮೊತ್ತ ಪಡೆಯುತ್ತಿದ್ದಾರೆ. ಹೀಗಾಗಿ ಮುಂಬರುವ ಸೀಸನ್​ಗಳಲ್ಲಿ ವಿದೇಶಿ ಆಟಗಾರರಿಗೆ ವಿಶೇಷ ಪರ್ಸ್​ ಮೊತ್ತ ರೂಪಿಸುವುದು ಉತ್ತಮ. ಇಲ್ಲದಿದ್ದರೆ ಸ್ಟಾರ್ ಆಟಗಾರರು ಖಾಯಂ ತಂಡಗಳಿಂದ ಹೊರಬರುವುದಂತು ಖಚಿತ.