RCB ಅಭಿಮಾನಿಗಳಿಗೆ ದುಡ್ಡು ನೀಡಿದ್ರೆ, ಅವರೇ ಉತ್ತಮ ಆಟಗಾರರನ್ನು ಆಯ್ಕೆ ಮಾಡ್ತಾರೆ..!

ಈ ಬಾರಿಯ ಐಪಿಎಲ್ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಖರೀದಿಸಿದ ಆಟಗಾರರ ಕುರಿತು ಪರ-ವಿರೋಧ ಚರ್ಚೆಗಳು ಮುಂದುವರೆದಿದೆ. 17ನೇ ಆವೃತ್ತಿಯ ಹರಾಜಿನ ಮೂಲಕ ಆರ್​ಸಿಬಿ ಒಟ್ಟು 6 ಆಟಗಾರರನ್ನು ಆಯ್ಕೆ ಮಾಡಿಕೊಂಡಿದೆ. ಆದರೆ ಇವರಲ್ಲಿ ಬೆಸ್ಟ್ ಎನಿಸಿಕೊಳ್ಳುವಂತಹ ಯಾವುದೇ ಆಟಗಾರನಿಲ್ಲ ಎಂಬುದು ಇದೀಗ ಆರ್​ಸಿಬಿ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.

ಅತ್ತ ಕರ್ನಾಟಕದ ಮಾಜಿ ಆಟಗಾರ ದೊಡ್ಡ ಗಣೇಶ್ ಕೂಡ ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಆರ್​ಸಿಬಿ ಫ್ರಾಂಚೈಸಿಯು ತನ್ನ ಹರಾಜು ಮೊತ್ತದಲ್ಲಿ ಅರ್ಧದಷ್ಟು ಹಣವನ್ನು ಅಭಿಮಾನಿಗಳಿಗೆ ನೀಡಿ, ಅವರಿಗೆ ಮುಕ್ತವಾಗಿ ನಿರ್ಧಾರ ತೆಗೆದುಕೊಳ್ಳುವ ಅವಕಾಶ ನೀಡಿದ್ದರೆ, ಹರಾಜಿನಲ್ಲಿ ಈಗಿರುವುದಕ್ಕಿಂತ ಹೆಚ್ಚು ಸಮತೋಲನದಿಂದ ಕೂಡಿರುವ ತಂಡವನ್ನು ಆಯ್ಕೆ ಮಾಡುತ್ತಿದ್ದರು ಎಂದು ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ.

ಅಷ್ಟೇ ಅಲ್ಲದೆ ಜೊತೆಗೆ ಒಂದಷ್ಟು ಪರ್ಸ್​ ಮೊತ್ತವನ್ನು ಕೂಡ ಉಳಿಸುತ್ತಿದ್ದರು. ಆರ್​ಸಿಬಿ ಅಭಿಮಾನಿಗಳ ಈ ವಿಷಯದಲ್ಲಿ ಬೇಕಿದ್ದರೆ ನಾನು ಚಾಲೆಂಜ್​ ಹಾಕಬಲ್ಲೆ. ಆದರೆ ಒಂದು ವೃತ್ತಿಪರ ಕ್ರಿಕೆಟ್ ತಂಡವಾಗಿ ಇಂತಹ ತಪ್ಪುಗಳನ್ನು ಮಾಡಿರುವುದನ್ನೂ ನಿಜಕ್ಕೂ ನಂಬಲಾಗುತ್ತಿಲ್ಲ ಎಂದು ದೊಡ್ಡ ಗಣೇಶ್ ತಿಳಿಸಿದ್ದಾರೆ.

ದೊಡ್ಡ ಗಣೇಶ್ ಅವರ ಈ ಅಭಿಪ್ರಾಯಕ್ಕೆ ಆರ್​ಸಿಬಿ ಅಭಿಮಾನಿಗಳು ಕೂಡ ಸಹಮತ ವ್ಯಕ್ತಪಡಿಸಿದ್ದಾರೆ. ಪ್ರತಿ ಬಾರಿಯೂ ಆರ್​ಸಿಬಿ ಅತ್ಯುತ್ತಮ ಆಟಗಾರರ ನಿರೀಕ್ಷೆಯಲ್ಲಿದ್ದರೆ, ಫ್ರಾಂಚೈಸಿ ಮಾತ್ರ ಕಳಪೆ ಆಟಗಾರರಿಗೆ ಮಣೆಹಾಕುತ್ತಾ ಬರುತ್ತಿದೆ. ಇದೇ ಕಾರಣದಿಂದಾಗಿ ಆರ್​ಸಿಬಿಗೆ ಕಪ್ ಗೆಲ್ಲಲು ಸಾಧ್ಯವಾಗುತ್ತಿಲ್ಲ ಎಂದು ಅನೇಕ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

6 ಆಟಗಾರರನ್ನು ಆಯ್ಕೆ ಮಾಡಿದ RCB:

ಈ ಬಾರಿಯ ಐಪಿಎಲ್ ಮಿನಿ ಹರಾಜಿನ ಮೂಲಕ ಆರ್​ಸಿಬಿ ಒಟ್ಟು ಆರು ಆಟಗಾರರನ್ನು ಆಯ್ಕೆ ಮಾಡಿಕೊಂಡಿದೆ. ಇವರಲ್ಲಿ ಇಬ್ಬರು ಆಟಗಾರರಿಗೆ 16.50 ಕೋಟಿ ರೂ. ಖರ್ಚು ಮಾಡಿ ಅಚ್ಚರಿ ಮೂಡಿಸಿದ್ದಾರೆ. ಅಂದರೆ ಕಳೆದ ಸೀಸನ್​ನಲ್ಲಿ ಗುಜರಾತ್ ಟೈಟಾನ್ಸ್​ ಪರ ಆಡಿದ್ದ ಅಲ್ಝಾರಿ ಜೋಸೆಫ್ ಅವರನ್ನು ಆರ್​ಸಿಬಿ ಈ ಬಾರಿ ಬರೋಬ್ಬರಿ 11.50 ಕೋಟಿ ರೂ.ಗೆ ಖರೀದಿಸಿದೆ. ವಿಶೇಷ ಎಂದರೆ ಇದೇ ಅಲ್ಝಾರಿ ಜೋಸೆಫ್ ಗುಜರಾತ್ ಟೈಟಾನ್ಸ್ ಪರ ಕಳೆದ 2 ಸೀಸನ್​ ಆಡಿದ್ದು ಕೇವಲ 2.40 ಕೋಟಿ ರೂ.ಗೆ ಎಂಬುದು ಇಲ್ಲಿ ಉಲ್ಲೇಖಾರ್ಹ.

ಇನ್ನು ಗುಜರಾತ್ ಟೈಟಾನ್ಸ್ ಪರ 14 ಪಂದ್ಯಗಳನ್ನಾಡಿರುವ ಯಶ್ ದಯಾಳ್ ಕೇವಲ 13 ವಿಕೆಟ್ ಪಡೆಯಲಷ್ಟೇ ಶಕ್ತರಾಗಿದ್ದಾರೆ. ಇದಾಗ್ಯೂ ಆರ್​ಸಿಬಿ ಅವರನ್ನು ಬರೋಬ್ಬರಿ 5 ಕೋಟಿ ರೂ.ಗೆ ಖರೀದಿಸಿದೆ. ಅಂದರೆ ಚಾಂಪಿಯನ್​ ತಂಡ ಗುಜರಾತ್ ಟೈಟಾನ್ಸ್ ಕೈ ಬಿಟ್ಟಿದ್ದ ಆಟಗಾರರನ್ನು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಫ್ರಾಂಚೈಸಿ ಕೋಟಿ ಕೋಟಿ ನೀಡಿ ಖರೀದಿಸಿ ಅಚ್ಚರಿ ಮೂಡಿಸಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಾಫ್ ಡು ಪ್ಲೆಸಿಸ್, ರಜತ್ ಪಾಟಿದಾರ್, ವಿರಾಟ್ ಕೊಹ್ಲಿ, ಅನೂಜ್ ರಾವತ್, ದಿನೇಶ್ ಕಾರ್ತಿಕ್, ಸುಯಶ್ ಪ್ರಭುದೇಸಾಯಿ, ವಿಲ್ ಜಾಕ್ವೆಸ್, ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೊಮ್ರೋರ್, ಕರ್ಣ್ ಶರ್ಮಾ, ಮನೋಜ್ ಭಾಂಡಗೆ, ಆಕಾಶದೀಪ್, ಮೊಹಮ್ಮದ್ ಸಿರಾಜ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ವಿಜಯಕುಮಾರ್ ವೈಶಾಕ್, ರಜನ್ ಕುಮಾರ್, ಕ್ಯಾಮರೋನ್ ಗ್ರೀನ್ ಮತ್ತು ಮಯಾಂಕ್ ದಾಗರ್.

ಹರಾಜಿನಲ್ಲಿ ಖರೀದಿಸಿದ ಆಟಗಾರರು:

  • ಅಲ್ಝಾರಿ ಜೋಸೆಫ್- 11.50 ಕೋಟಿ (ಮೂಲ ಬೆಲೆ 1 ಕೋಟಿ ರೂ.)
  • ಯಶ್ ದಯಾಳ್ – 5 ಕೋಟಿ (ಮೂಲ ಬೆಲೆ 20 ಲಕ್ಷ ರೂ.)
  • ಟಾಮ್ ಕರನ್- 1.5 ಕೋಟಿ (ಮೂಲ ಬೆಲೆ 1.5 ಕೋಟಿ ರೂ.)
  • ಲಾಕಿ ಫರ್ಗುಸನ್- 2 ಕೋಟಿ (ಮೂಲ ಬೆಲೆ 2 ಕೋಟಿ ರೂ.)
  • ಸ್ವಪ್ನಿಲ್ ಸಿಂಗ್- 20 ಲಕ್ಷ (ಮೂಲ ಬೆಲೆ 20 ಲಕ್ಷ ರೂ.)
  • ಸೌರವ್ ಚೌಹಾಣ್- 20 ಲಕ್ಷ (ಮೂಲ ಬೆಲೆ 20 ಲಕ್ಷ ರೂ.)