ಮೈಸೂರು, ಡಿ.20: ದೆಹಲಿ ಸಂಸತ್ ಭವನ ಮೇಲಿನ ದಾಳಿ ಪ್ರಕರಣದಲ್ಲಿ ಭಾಗಿಯಾಗಿದ್ದ ಮೈಸೂರಿನ ಮನೋರಂಜನ್ ನಿವಾಸದಲ್ಲಿ ದೆಹಲಿ ಪೊಲೀಸರ ತಲಾಶ್ ಮುಂದುವರೆದಿದೆ. ನಿನ್ನೆ ಮನೋರಂಜನ್ ನಿವಾಸಕ್ಕೆ ಭೇಟಿ ನೀಡಿ ಮನೋರಂಜನ್ ತಾಯಿ ಮತ್ತು ಸಹೋದರಿಯನ್ನ ಸತತ ಎರಡು ಗಂಟೆಗಳ ಕಾಲ ವಿಚಾರಣೆ ನಡೆಸಿ ಹೇಳಿಕೆಯನ್ನ ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದ ದೆಹಲಿ ಪೊಲೀಸರು ಇಂದು ಕೂಡ ಮೈಸೂರಿನಲ್ಲೇ ವಾಸ್ತವ್ಯ ಹೂಡಿದ್ದಾರೆ. ಜೊತೆಗೆ ಇಂದು ಕೂಡ ಮನೋರಂಜನ್ ಕುಟುಂಬಸ್ಥರನ್ನ ವಿಚಾರಣೆ ನಡೆಸಲಿದ್ದಾರೆ.
ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಸಂಸತ್ ಮೇಲಿನ ಸ್ಮೋಕ್ ಬಾಂಬ್ ಪ್ರಕರಣದ ತನಿಖೆ ತೀವ್ರಗೊಂಡಿದೆ. ಪ್ರಕರಣದ ಎ1 ಆರೋಪಿ ಮೈಸೂರಿನ ಮನೋರಂಜನ ಪೋಷಕರನ್ನ ದೆಹಲಿಯ ತನಿಖಾ ತಂಡ ತೀವ್ರ ವಿಚಾರಣೆಗೊಳಪಡಿಸಿದೆ. ನಿನ್ನೆ ದೆಹಲಿ ಪೊಲೀಸರು ಮನೋರಂಜನ್ ಮನೆಗೆ ಭೇಟಿ ನೀಡಿ ವಿಚಾರಣೆ ನಡೆಸಿದ್ದರು. ಇಂದು ಕೂಡ ವಿಚಾರಣೆ ಮುಂದುವರೆಯುವ ಸಾಧ್ಯತೆ ಇದೆ. ಸದ್ಯ ದೆಹಲಿ ಪೊಲೀಸರು ಮೈಸೂರಿನಲ್ಲೇ ವಾಸ್ತವ್ಯ ಹೂಡಿದ್ದು ತಾವು ಇರುವಲ್ಲಿಗೆಯೇ ಮನೋರಂಜನ್ ತಂದೆ ದೇವಾರಾಜೇಗೌಡರನ್ನು ಕರೆಸಿಕೊಳ್ಳುವ ಸಾಧ್ಯತೆ ಇದೆ. ಇನ್ನು ದೇವಾರಾಜೇಗೌಡರಿಗೆ ಬ್ಯಾಂಕ್ ಸ್ಟೇಟ್ ಮೆಂಟ್ ತೆಗದುಕೊಂಡು ಬರುವಂತೆ ಸೂಚಿಸಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಮನೋರಂಜನ್ ಹಣದ ಮೂಲದ ಬಗ್ಗೆ ದೆಹಲಿ ಪೊಲೀಸರು ಸಾಕಷ್ಟು ತನಿಖೆ ನಡೆಸುತ್ತಿದ್ದಾರೆ. ಈಗಾಗಲೇ ಮನೋರಂಜನ್ಗೆ ಸಂಬಂಧ ಪಟ್ಟ ಪಾಸ್ ಪೋರ್ಟ್, ಬ್ಯಾಂಕ್ ಪಾಸ್ ಬುಕ್ ಹಾಗೂ ಕೆಲವು ನೋಟ್ ಪುಸ್ತಕಗಳನ್ನ ವಶಕ್ಕೆ ಪಡೆಯಲಾಗಿದೆ.
ದೆಹಲಿ ಪೊಲೀಸರ ಮುಂದೆ ಮನೋರಂಜನ್ ಕೊಟ್ಟಿರುವ ಹೇಳಿಕೆ ಹಾಗೂ ಪೋಷಕರು ಕೊಡುತ್ತಿರುವ ಹೇಳಿಕೆಗೂ ಸಾಕಷ್ಟು ವ್ಯತ್ಯಾಸಗಳು ಕಂಡು ಬರುತ್ತಿದೆ. ಪ್ರಕರಣದ ಮತ್ತೊಬ್ಬ ಆರೋಪಿ ಸಾಗರಶ ರ್ಮಾ ಎರಡು ಬಾರಿ ಮನೋರಂಜನ್ ನಿವಾಸಕ್ಕೆ ಬಂದಿರುವ ಬಗ್ಗೆ ಪೋಷಕರು ದೆಹಲಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ ಮನೋರಂಜನ್ ಮೈಸೂರಿಗೆ ಬಂದೇ ಇಲ್ಲ ಎಂದು ವಿಚಾರಣ ವೇಳೆ ಹೇಳಿದ್ದಾನೆ. ಜೊತೆಗೆ ಮನೋರಂಜನಗೆ ಯಾರು ಹಣದ ಸಹಾಯ ಮಾಡುತ್ತಿದ್ದರು ಎಂಬ ಬಗ್ಗೆಯೂ ದೆಹಲಿ ಪೊಲೀಸರಿಗೆ ಸರಿಯಾದ ಮಾಹಿತಿಗಳು ಲಭ್ಯವಾಗಿಲ್ಲ. ಹೀಗಾಗಿ ಬ್ಯಾಂಕ್ ಸ್ಟೇಂಟ್ ಮೆಂಟ್ ಪರಿಶೀಲನೆಗೆ ದೆಹಲಿ ಪೊಲೀಸರು ಮುಂದಾಗಿದ್ದಾರೆ.