IPL 2024: RCB ಟಾಪ್-5 ಆಟಗಾರರು ಕನ್​ಫರ್ಮ್​

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 17 ರಲ್ಲಿ ಆರ್​ಸಿಬಿ ಪರ ಕಣಕ್ಕಿಳಿಯಲಿರುವ ಟಾಪ್-5 ಆಟಗಾರರು ಯಾರೆಂಬುದು ಬಹಿರಂಗವಾಗಿದೆ. ಅದು ಕೂಡ ಐಪಿಎಲ್ ಹರಾಜಿಗೂ ಮುನ್ನ ಎಂಬುದು ವಿಶೇಷ.

ಆರ್​ಸಿಬಿ ಯೂಟ್ಯೂಬ್ ಚಾನೆಲ್​ನಲ್ಲಿ ಮಾತನಾಡಿದ ನೂತನ ಕೋಚ್ ಆ್ಯಂಡಿ ಫ್ಲವರ್ ಈ ಬಾರಿ ಕೂಡ ಫಾಫ್ ಡುಪ್ಲೆಸಿಸ್ ಹಾಗೂ ವಿರಾಟ್ ಕೊಹ್ಲಿ ಇನಿಂಗ್ಸ್ ಆರಂಭಿಸಲಿದ್ದಾರೆ ಎಂದು ತಿಳಿಸಿದ್ದಾರೆ. ಈ ಮೂಲಕ ಕಳೆದ ಸೀಸನ್​ನಲ್ಲಿನ ಆರಂಭಿಕರನ್ನೇ ಮುಂದುವರೆಸಲು ನಿರ್ಧರಿಸಿದ್ದಾರೆ.

ಹಾಗೆಯೇ ಮೂರನೇ ಕ್ರಮಾಂಕದಲ್ಲಿ ಯುವ ಬಲಗೈ ದಾಂಡಿಗ ರಜತ್ ಪಾಟಿದಾರ್ ಕಣಕ್ಕಿಳಿಯಲಿದ್ದಾರೆ. ಪಾಟಿದಾರ್ 2022 ರಲ್ಲಿ ಆರ್​ಸಿಬಿ ಪರ 3ನೇ ಕ್ರಮಾಂಕದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಹೀಗಾಗಿ ಅವರನೇ ಮುಂದುವರೆಸಲು ಕೋಚ್ ಆ್ಯಂಡಿ ಫ್ಲವರ್​ ಬಯಸಿದ್ದಾರೆ.

ಇನ್ನು ನಾಲ್ಕನೇ ಕ್ರಮಾಂಕ ಗ್ಲೆನ್ ಮ್ಯಾಕ್ಸ್​​ವೆಲ್​ಗೆ ಖಾಯಂ. ಹೊಡಿಬಡಿ ಬ್ಯಾಟಿಂಗ್ ಮೂಲಕ ಇಡೀ ಪಂದ್ಯದ ಚಿತ್ರಣವನ್ನೇ ಬದಲಿಸಬಲ್ಲ ಸಾಮರ್ಥ್ಯ ಹೊಂದಿರುವ ಮ್ಯಾಕ್ಸಿಯನ್ನು ಈ ಬಾರಿ ಕೂಡ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿಸುವುದಾಗಿ ಫ್ಲವರ್ ತಿಳಿಸಿದ್ದಾರೆ.

ಹಾಗೆಯೇ 5ನೇ ಕ್ರಮಾಂಕದಲ್ಲಿ ಆಲ್​ರೌಂಡರ್ ಆಟಗಾರ ಕ್ಯಾಮರೋನ್ ಗ್ರೀನ್ ಕಣಕ್ಕಿಳಿಯಲಿದ್ದಾರೆ. ಆರ್​ಸಿಬಿ ತಂಡಕ್ಕೆ ಹೊಸದಾಗಿ ಸೇರ್ಪಡೆಯಾಗಿರುವ ಗ್ರೀನ್ ವೇಗದ ಬೌಲಿಂಗ್ ಮಾಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಇದರ ಜೊತೆಗೆ ಸ್ಪೋಟಕ ಇನಿಂಗ್ಸ್ ಆಡಬಲ್ಲ ಆಟಗಾರ.

ಹೀಗಾಗಿ ಕ್ಯಾಮರೋನ್ ಗ್ರೀಕ್ ಕೂಡ ಆರ್​ಸಿಬಿ ತಂಡದ ಟಾಪ್-5ಕಾಣಿಸಿಕೊಳ್ಳಲಿದ್ದಾರೆ ಎಂದು ಆ್ಯಂಡಿ ಫ್ಲವರ್ ತಿಳಿಸಿದ್ದಾರೆ.

ಈ ಬಾರಿಯ ಐಪಿಎಲ್ ಹರಾಜಿಗೂ ಮುನ್ನ ಆರ್​ಸಿಬಿ ಒಟ್ಟು 19 ಆಟಗಾರರನ್ನು ಉಳಿಸಿಕೊಂಡಿದೆ. ಇದೀಗ ಹರಾಜಿನ ಮೂಲಕ ಆರ್​ಸಿಬಿಗೆ 6 ಆಟಗಾರರನ್ನು ಖರೀದಿಸುವ ಅವಕಾಶವಿದೆ. ಅದರಂತೆ ಐಪಿಎಲ್​ ಸೀಸನ್ 17 ರಲ್ಲಿ ಆರ್​ಸಿಬಿ ಪರ ಕಣಕ್ಕಿಳಿಯುವ ಹೊಸ ಆಟಗಾರರು ಯಾರು ಎಂಬುದು ಇಂದು (ಡಿ.19) ನಿರ್ಧಾರವಾಗಲಿದೆ.

ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ: ಫಾಫ್ ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಅನೂಜ್ ರಾವತ್, ದಿನೇಶ್ ಕಾರ್ತಿಕ್, ಸುಯಶ್ ಪ್ರಭುದೇಸಾಯಿ, ವಿಲ್ ಜಾಕ್ಸ್, ಮಹಿಪಾಲ್ ಲೊಮ್ರೋರ್, ಕರ್ಣ್ ಶರ್ಮಾ, ಮನೋಜ್ ಭಾಂಡಗೆ, ಮಯಾಂಕ್ ದಾಗರ್, ವೈಶಾಕ್ ವಿಜಯ್‌ಕುಮಾರ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ರಜನ್ ಕುಮಾರ್, ಕ್ಯಾಮರೋನ್ ಗ್ರೀನ್.