ಭಟ್ಕಳ: ಭಾರತದ ಸ್ವಾತಂತ್ರ‍್ಯ ಚಳುವಳಿಯಲ್ಲಿ ಪತ್ರಿಕೆಗಳು ಪ್ರಮುಖ ಪಾತ್ರವಹಿಸಿದ್ದು, ವಿದ್ಯಾರ್ಥಿಗಳು ಅದನ್ನು ಅರಿತುಕೊಳ್ಳಬೇಕು ಎಂದು ಭಟ್ಕಳ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಆರ್.ಮಾನ್ವಿ ಹೇಳಿದರು.
ಕಾರ್ಯನಿರತ ಪತ್ರಕರ್ತರ ಸಂಘದಿಂದ ನಗರದ ಇಸ್ಲಾಮಿಯಾ ಆಂಗ್ಲೋ ಉರ್ದು ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಸ್ವಾತಂತ್ರ‍್ಯ ಚಳುವಳಿಯಲ್ಲಿ ಪತ್ರಿಕೆಗಳ ಪಾತ್ರ ವಿಷಯದ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ತಾಲೂಕಿನ ಪಿಯುಸಿ ಮತ್ತು ಪ್ರೌಢಶಾಲೆ ವಿದ್ಯಾರ್ಥಿಗಳಿಂದ ಪ್ರಬಂಧ ಸ್ಪರ್ಧೆಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಸುಮಾರು 200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದು ವಿದ್ಯಾರ್ಥಿಗಳ ಕಲಿಕೆಯಲ್ಲಿರುವ ಆಸಕ್ತಿಯನ್ನು ತೋರ್ಪಡಿಸುತ್ತದೆ. ಇದರಿಂದ ಭಾರತ ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ಪತ್ರಿಕೆಗಳು ಯಾವ ರೀತಿಯ ಪಾತ್ರ ವಹಿಸಿದ್ದವು ಎಂಬುದನ್ನು ಅರಿತುಕೊಳ್ಳಲು ಸಹಕಾರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕ.ಸಾ.ಪ ಅಧ್ಯಕ್ಷ ಗಂಗಾಧರ್ ನಾಯ್ಕ, ಜಿಲ್ಲಾ ಸಂಘದ ಉಪಾಧ್ಯಕ್ಷ ಭವಾನಿಶಂಕರ್, ತಾಲ್ಲೂಕು ಉಪಾಧ್ಯಕ್ಷ ಮೋಹನ್ ನಾಯ್ಕ, ರಿಜ್ವಾನ್ ಗಂಗೋಳಿ, ರಾಘವೇಂದ್ರ ಹೆಬ್ಬಾರ್ ಮತ್ತಿತರು ಉಪಸ್ಥಿತರಿದ್ದರು.