IND vs SA: ಅರ್ಷದೀಪ್​ಗೆ 5, ಆವೇಶ್​ಗೆ 4 ವಿಕೆಟ್; ಭಾರತಕ್ಕೆ 117 ರನ್​ ಟಾರ್ಗೆಟ್

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ T20 ಸರಣಿ ಡ್ರಾ ಆದ ಬಳಿಕ ಇದೀಗ ಏಕದಿನ ಸರಣಿ ಆರಂಭವಾಗಿದೆ. ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯ ಜೋಹಾನ್ಸ್‌ಬರ್ಗ್‌ನಲ್ಲಿ ನಡೆಯುತ್ತಿದೆ. ದಕ್ಷಿಣ ಆಫ್ರಿಕಾದ ನಾಯಕ ಏಡೆನ್ ಮಾರ್ಕ್ರಾಮ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಹೀಗಾಗಿ ಭಾರತ ತಂಡ ಮೊದಲು ಬೌಲಿಂಗ್ ಮಾಡಿ ಆತಿಥೇಯ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿ ಕೇವಲ 116 ರನ್‌ಗಳಿಗೆ ಆಲೌಟ್ ಮಾಡಿದೆ. ಆಫ್ರಿಕಾ ಪರ ಆಲ್​​ರೌಂಡರ್ ಆಂಡಿಲೆ ಫೆಹ್ಲುಕ್ವಾಯೊ ಗರಿಷ್ಠ 33 ರನ್ ಸಿಡಿಸಿದರೆ, ಭಾರತದ ಪರ ಮಿಂಚಿದ ವೇಗಿ ಅರ್ಷದೀಪ್ ಸಿಂಗ್ ವಿಕೆಟ್ ಪಡೆದರು. ಹಾಗೆಯೇ ಇವರಿಗೆ ಸಾಥ್ ನೀಡಿದ ಮತ್ತೊಬ್ಬ ವೇಗಿ ಆವೇಶ್ ಖಾನ್ 4 ವಿಕೆಟ್​ ಪಡೆದು ಮಿಂಚಿದರು.

ಆಫ್ರಿಕಾ ತಂಡದ ಕಳಪೆ ಆರಂಭ

ಭಾರತದ ಬೌಲರ್‌ಗಳು ಆರಂಭದಿಂದಲೂ ಅದ್ಭುತ ಪ್ರದರ್ಶನ ನೀಡಿದರು. ಅರ್ಷದೀಪ್ ಸಿಂಗ್ ಮತ್ತು ಆವೇಶ್ ಖಾನ್ ದಾಳಿಗೆ ನಲುಗಿದ ದಕ್ಷಿಣ ಆಫ್ರಿಕಾ ಬ್ಯಾಟರ್​ಗಳು ಪೆವಿಲಿಯನ್ ಪರೇಡ್ ಆರಂಭಿಸಿದರು. ಹೀಗಾಗಿ ಆತಿಥೇಯ ತಂಡ 58 ರನ್ ಗಳಿಸುವಷ್ಟರಲ್ಲಿ 7 ವಿಕೆಟ್ ಕಳೆದುಕೊಂಡಿತು. ಪಂದ್ಯದಲ್ಲಿ ಅರ್ಷದೀಪ್ ಸಿಂಗ್ ತಮ್ಮ ಮೊದಲ ಓವರ್‌ಗಳಲ್ಲಿ 2 ಪ್ರಮುಖ ವಿಕೆಟ್‌ಗಳನ್ನು ಪಡೆದರು.

ಆರಂಭಿಕ ಆಟಗಾರ ರಿಜಾ ಹೆಂಡ್ರಿಕ್ಸ್ ಅವರನ್ನು ಅರ್ಷದೀಪ್ ಬೇಟೆಯಾಡುವ ಮೂಲಕ ತಂಡಕ್ಕೆ ಮೊದಲ ಯಶಸ್ಸನು ತಂದುಕೊಟ್ಟರು. ಹೆಡ್ರಿಕ್ಸ್ ಶೂನ್ಯ ರನ್‌ಗಳಿಗೆ ವಿಕೆಟ್ ಕಳೆದುಕೊಂಡರು. ಮುಂದಿನ ಎಸೆತದಲ್ಲಿ ಡುಸೆನ್ ಗೋಲ್ಡನ್ ಡಕ್‌ ಆಗಿ ಪೆವಿಲಿಯನ್​ಗೆ ಮರಳಿದರು. ಹೀಗೆ ಅರ್ಷದೀಪ್ ಸತತ ಎರಡು ಎಸೆತಗಳಲ್ಲಿ ಎರಡು ವಿಕೆಟ್ ಪಡೆದರು. ಹೀಗಾಗಿ 3 ರನ್ ಗಳಿಸುವಷ್ಟರಲ್ಲಿ ಆತಿಥೇಯ ತಂಡ ಪಂದ್ಯದ ಎರಡನೇ ಓವರ್​ನಲ್ಲಿ 2 ವಿಕೆಟ್ ಕಳೆದುಕೊಂಡಿತು.

ಆಫ್ರಿಕಾ ತಂಡದ ಪೆವಿಲಿಯನ್‌ ಪರೇಡ್

ದಕ್ಷಿಣ ಆಫ್ರಿಕಾ 42 ರನ್‌ಗಳಿದ್ದಾಗ ಮೂರನೇ ವಿಕೆಟ್‌ ರೂಪದಲ್ಲಿ ಟೋನಿ ಅವರನ್ನು ಕಳೆದುಕೊಂಡಿತು. ಇವರನ್ನು ಸಹ ಅರ್ಷದೀಪ್ ಔಟ್ ಮಾಡಿದರು. ತಂಡದ ಪರ ಆರಂಭಿಕ ಹೋರಾಟ ನೀಡಿದ ಟೋನಿ 22 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 2 ಬೌಂಡರಿಗಳ ನೆರವಿನಿಂದ 28 ರನ್ ಗಳಿಸಿದರು. ಟೋನಿ ಬಳಿಕ ಆಫ್ರಿಕಾ ತಂಡದ ಪೆವಿಲಿಯನ್‌ ಪರೇಡ್ ಆರಂಭವಾಯಿತು. ಹೆನ್ರಿಕ್ ಕ್ಲಾಸೆನ್ 6 ರನ್​ಗಳಿಗೆ ನಾಲ್ಕನೇ ವಿಕೆಟ್ ಆಗಿ ವಿಕೆಟ್ ಒಪ್ಪಿಸಿದರೆ, ನಾಯಕ ಏಡನ್ ಮಾರ್ಕ್ರಾಮ್ 12 ರನ್​ಗಳಿಗೆ ಸುಸ್ತಾದರು. ವಿಯಾನ್​ಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. 7ನೇ ವಿಕೆಟ್ ಆಗಿ ಡೇವಿಡ್ ಮಿಲ್ಲರ್ ಕೇವಲ 2 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ, ಕೇಶವ್ ಮಹಾರಾಜ್ 8ನೇ ವಿಕೆಟ್ ಆಗಿ ಆವೇಶ್​ ಖಾನ್​ಗೆ ಬಲಿಯಾದರು.

ಅರ್ಷದೀಪ್- ಆವೇಶ್ ಶೈನ್

ಈ ಪಂದ್ಯದಲ್ಲಿ ಅರ್ಷದೀಪ್ ಆರಂಭದಲ್ಲಿ ಒಂದರ ಹಿಂದೆ ಒಂದರಂತೆ 4 ವಿಕೆಟ್ ಕಬಳಿಸಿದರು. ಹೀಗಾಗಿ ಅಗ್ರ ಕ್ರಮಾಂಕವನ್ನು ಹೊರ ಹಾಕುವ ಮೂಲಕ ಭಾರತ ತಂಡದ ಕೆಲಸವನ್ನು ಸುಲಭಗೊಳಿಸಿದರು. ಬಳಿಕ ಆವೇಶ್ ಖಾನ್ ಬೆನ್ನೆಲುಬಾಗಿ ಬೌಲಿಂಗ್ ಮಾಡಿ 4 ವಿಕೆಟ್ ಪಡೆದರು. ಅಂದಹಾಗೆ, ಇಬ್ಬರು ಬೌಲರ್‌ಗಳು ಮಾತ್ರ ದಕ್ಷಿಣ ಆಫ್ರಿಕಾದ ಎಲ್ಲಾ ಬ್ಯಾಟರ್​ಗಳನ್ನು ಪೆವಿಲಿಯನ್​ನಲ್ಲಿ ಕೂರುವಂತೆ ಮಾಡಿದರು. ಕೊನೆಯಲ್ಲಿ ಕುಲ್ದೀಪ್ ಯಾದವ್ 1 ವಿಕೆಟ್ ಪಡೆದರು.