ದಾಂಡೇಲಿ : ನಗರದ ಸೋಮಾನಿ ವೃತ್ತದ ಹತ್ತಿರದಲ್ಲಿರುವ ಶ್ರೀ.ಸಂತ ಜ್ಞಾನೇಶ್ವರ ಮಂದಿರದಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮವು ಸಂಭ್ರಮ ತಡಗರ ಹಾಗೂ ಶ್ರದ್ಧಾಭಕ್ತಿಯಿಂದ ಸೋಮವಾರ ಸಂಪನ್ನಗೊಂಡಿತು.
ಭಾನುವಾರದಿಂದ ಆರಂಭಗೊಂಡಿದ್ದ ಜಾತ್ರಾ ಮಹೋತ್ಸವವು ಸೋಮವಾರ ಸಂಜೆ ಸಂಪನ್ನಗೊಂಡಿತು. ಬೆಳಗ್ಗೆಯಿಂದಲೇ ವಿವಿಧ ಪೂಜಾರಾಧನೆಗಳು ಆರಂಭಗೊಂಡಿತ್ತು. ಬೆಳಿಗ್ಗೆ ಪಲ್ಲಕ್ಕಿ ಉತ್ಸವವು ಶ್ರೀ ಸ್ವಾಮಿಯ ಸನ್ನಿಧಿಯಿಂದ ಆರಂಭಗೊಂಡು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಕೊನೆಯಲ್ಲಿ ಶ್ರೀ ಸ್ವಾಮಿ ಸನ್ನಿಧಿಯಲ್ಲಿ ಸಂಪನ್ನಗೊಂಡಿತು. ಇದರ ಜೊತೆ ಜೊತೆಯಲಿ ಭಜನಾ ಸಂಕೀರ್ತನೆ ಕಾರ್ಯಕ್ರಮ ಜರುಗಿತು.
ಮಧ್ಯಾಹ್ನ ಮಹಾಪೂಜೆಯಾದ ಬಳಿಕ ಸಾರ್ವಜನಿಕ ಅನ್ನ ಸಂತರ್ಪಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಭಿಮಾನಿಗಳು ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಶ್ರೀ ಸ್ವಾಮಿಯ ಪ್ರಸಾದವನ್ನು ಸ್ವೀಕರಿಸಿದರು. ಭಾನುವಾರ ಶಾಸಕರಾದ ಆರ್.ವಿ. ದೇಶಪಾಂಡೆ ಅವರು ಶ್ರೀ. ಸ್ವಾಮಿ ಸನ್ನಿಧಿಗೆ ಆಗಮಿಸಿ ಶ್ರೀ ಸ್ವಾಮಿಯ ದರ್ಶನವನ್ನು ಪಡೆದು ಕಾರ್ಯಕ್ರಮದ ಯಶಸ್ಸಿಗೆ ಶುಭವನ್ನು ಕೋರಿದ್ದರು.
ಜಾತ್ರಾ ಮಹೋತ್ಸವದ ಯಶಸ್ವಿಗೆ ಶ್ರೀ.ಸಂತ ಜ್ಞಾನೇಶ್ವರ ಮಂದಿರದ ಆಡಳಿತ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಹಾಗೂ ಭಕ್ತಾಭಿಮಾನಿಗಳು ಶ್ರಮಿಸಿದ್ದರು.