WPL 2024: ಬರೋಬ್ಬರಿ 2 ಕೋಟಿಗೆ ಹರಾಜಾದ ಅನ್ನಾಬೆಲ್

ಆಸ್ಟ್ರೇಲಿಯಾ ತಂಡದ ಸ್ಟಾರ್ ಆಟಗಾರ್ತಿ ಅನ್ನಾಬೆಲ್ ಸದರ್​ಲ್ಯಾಂಡ್ ವುಮೆನ್ಸ್ ಪ್ರೀಮಿಯರ್ ಲೀಗ್ ಸೀಸನ್-2 ರ ಬಿಡ್ಡಿಂಗ್​ನಲ್ಲಿ ಬರೋಬ್ಬರಿ 2 ಕೋಟಿ ರೂ.ಗೆ ಹರಾಜಾಗಿದ್ದಾರೆ. 40 ಲಕ್ಷ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಅನ್ನಾಬೆಲ್ ಖರೀದಿಗೆ ಐದು ಫ್ರಾಂಚೈಸಿಗಳು ಆಸಕ್ತಿವಹಿಸಿದ್ದವು. ಇದರಿಂದ ಬಿಡ್ಡಿಂಗ್ ಪೈಪೋಟಿ ಏರ್ಪಟ್ಟಿತ್ತು.

ಪರಿಣಾಮ ಆರಂಭದಲ್ಲೇ 1 ಕೋಟಿ ರೂ. ದಾಟಿತು. ಇದಾಗ್ಯೂ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್​ ನಡುವೆ ಅನ್ನಾಬೆಲ್ ಖರೀದಿಗಾಗಿ ಭರ್ಜರಿ ಪೈಪೋಟಿ ಕಂಡು ಬಂತು. ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ಬರೋಬ್ಬರಿ 2 ಕೋಟಿ ರೂ. ನೀಡಿ ಅನ್ನಾಬೆಲ್ ಅವರನ್ನು ತನ್ನದಾಗಿಸಿಕೊಂಡಿದೆ.

22 ವರ್ಷದ ಆಲ್​ರೌಂಡರ್ ಆಗಿರುವ ಅನ್ನಾಬೆಲ್ ಸದರ್​ಲ್ಯಾಂಡ್ ಆಸ್ಟ್ರೇಲಿಯಾ ಪರ ಇದುವರೆಗೆ 22 ಟಿ20 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 97 ರನ್​ ಕಲೆಹಾಕಿದರೆ, 10 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡ ಉಳಿಸಿಕೊಂಡಿರುವ ಆಟಗಾರ್ತಿಯರು: ಆಲಿಸ್ ಕ್ಯಾಪ್ಸೆ, ಅರುಂಧತಿ ರೆಡ್ಡಿ, ಜೆಮಿಮಾ ರೊಡ್ರಿಗಸ್, ಜೆಸ್ ಜೊನಾಸೆನ್, ಲಾರಾ ಹ್ಯಾರಿಸ್, ಮರಿಜಾನ್ನೆ ಕಪ್, ಮೆಗ್ ಲ್ಯಾನಿಂಗ್, ಮಿನ್ನು ಮಣಿ, ಪೂನಮ್ ಯಾದವ್, ರಾಧಾ ಯಾದವ್, ಶಫಾಲಿ ವರ್ಮಾ, ಶಿಖಾ ಪಾಂಡೆ, ಸ್ನೇಹಾ ದೀಪ್ತಿ, ತನಿಯಾಸ್ ಭಾಟಿಯಾ.

ವೇದಾ ಕೃಷ್ಣಮೂರ್ತಿ ಅನ್​ಸೋಲ್ಡ್​:

ಭಾರತೀಯ ಆಟಗಾರ್ತಿ ವೇದಾ ಕೃಷ್ಣ ಮೂರ್ತಿ ಹಾಗೂ ಪೂನಂ ರೌತ್ ಈ ಬಾರಿಯ ವುಮೆನ್ಸ್ ಪ್ರೀಮಿಯರ್ ಲೀಗ್​ ಹರಾಜಿನಲ್ಲಿ ಅನ್​ಸೋಲ್ಡ್ ಆಗಿದ್ದಾರೆ. ಈ ಇಬ್ಬರನ್ನು ಖರೀದಿಸಲು ಯಾವುದೇ ಫ್ರಾಂಚೈಸಿ ಆಸಕ್ತಿ ತೋರಲಿಲ್ಲ. ಇದಾಗ್ಯೂ ಅಂತಿಮ ಸುತ್ತಿನಲ್ಲಿ ಹರಾಜಾಗಲಿದ್ದಾರಾ ಕಾದು ನೋಡಬೇಕಿದೆ.