ವುಮೆನ್ಸ್ ಪ್ರೀಮಿಯರ್ ಲೀಗ್ ಸೀಸನ್-2 ಮಿನಿ ಹರಾಜಿನ ಮೊದಲ ಬಿಡ್ಡಿಂಗ್ ಅನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆದ್ದಿದೆ. ಆಸ್ಟ್ರೇಲಿಯಾದ ಜಾರ್ಜಿಯಾ ವೇರ್ಹ್ಯಾಮ್ ಅವರನ್ನು 40 ಲಕ್ಷ ರೂ.ಗೆ ಆರ್ಸಿಬಿ ಬಿಡ್ ಮಾಡಿದೆ. ಇದರೊಂದಿಗೆ ಆರ್ಸಿಬಿ ತಂಡದ ಆಟಗಾರ್ತಿಯರ ಸಂಖ್ಯೆ 12 ಕ್ಕೇರಿದೆ.
24 ವರ್ಷದ ಜಾರ್ಜಿಯಾ ವೇರ್ಹ್ಯಾಮ್ ಸ್ಪಿನ್ ಬೌಲರ್. ಆಸ್ಟ್ರೇಲಿಯಾ ಪರ 46 ಟಿ20 ಪಂದ್ಯಗಳನ್ನಾಡಿರುವ ಜಾರ್ಜಿಯಾ 44 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ ಕಳೆದ ಸೀಸನ್ನಲ್ಲಿ ಗುಜರಾತ್ ಜೈಂಟ್ಸ್ ತಂಡದಲ್ಲಿದ್ದರು. ಇದೀಗ ಹರಾಜಿನಲ್ಲಿ ಕಾಣಿಸಿಕೊಂಡಿರುವ ಆಸೀಸ್ ಸ್ಪಿನ್ನರ್ ಅನ್ನು ತನ್ನದಾಗಿಸಿಕೊಳ್ಳುವಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಯಶಸ್ವಿಯಾಗಿದೆ.
ಇದಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಒಟ್ಟು 11 ಆಟಗಾರ್ತಿಯರನ್ನು ಉಳಿಸಿಕೊಂಡಿತ್ತು. ಇದೀಗ ಖಾಲಿಯಿರುವ ಸ್ಥಾನಗಳಿಗೆ ಹರಾಜು ಪ್ರಕ್ರಿಯೆ ನಡೆಯುತ್ತಿದೆ.
RCB ಉಳಿಸಿಕೊಂಡಿರುವ ಆಟಗಾರ್ತಿಯರು: ಆಶಾ ಶೋಬನಾ, ದಿಶಾ ಕಸತ್, ಎಲ್ಲಿಸ್ ಪೆರ್ರಿ, ಹೀದರ್ ನೈಟ್, ಇಂದ್ರಾಣಿ ರಾಯ್, ಕನಿಕಾ ಅಹುಜಾ, ರೇಣುಕಾ ಸಿಂಗ್, ರಿಚಾ ಘೋಷ್, ಶ್ರೇಯಾಂಕಾ ಪಾಟೀಲ್, ಸ್ಮೃತಿ ಮಂಧಾನ, ಸೋಫಿ ಡಿವೈನ್.
ವುಮೆನ್ಸ್ ಪ್ರೀಮಿಯರ್ ಲೀಗ್ ನಿಯಮಗಳ ಅಡಿಯಲ್ಲಿ, ಪ್ರತಿ ಫ್ರಾಂಚೈಸಿಯು ತನ್ನ ತಂಡದಲ್ಲಿ ಕನಿಷ್ಠ 15 ಮತ್ತು ಗರಿಷ್ಠ 18 ಆಟಗಾರರ್ತಿಯರನ್ನು ಹೊಂದಿರಬೇಕು. ಇದರಲ್ಲಿ 6 ವಿದೇಶಿ ಆಟಗಾರ್ತಿಯರಿಗೆ ಮಾತ್ರ ಅವಕಾಶ.
ಅದರಂತೆ ಸದ್ಯ, ಹರಾಜಿನಲ್ಲಿ ಒಟ್ಟು 30 ಆಟಗಾರ್ತಿಯರಿಗೆ ಸ್ಲಾಟ್‌ಗಳು ಖಾಲಿಯಾಗಿವೆ. ಇದರಲ್ಲಿ 9 ವಿದೇಶಿ ಆಟಗಾರ್ತಿಯರನ್ನು ಮಾತ್ರ ಮಾತ್ರ ಖರೀದಿಸಬಹುದು.