ಐಸಿಸ್ ನಂಟು ಹೊಂದಿರುವನ ಜತೆ ವೇದಿಕೆ ಹಂಚಿಕೊಂಡ ಸಿಎಂ: ಫೋಟೋ ಬಿಡುಗಡೆ ಮಾಡಿದ ಯತ್ನಾಳ್​

ಬೆಂಗಳೂರು ಡಿಸೆಂಬರ್​ 06: ಹುಬ್ಬಳ್ಳಿ ಮುಸ್ಲಿಂ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಭಾಗಿಯಾಗಿದ್ದ ವ್ಯಕ್ತಿಗೆ ಐಸಿಸ್ ಜೊತೆ ಸಂಪರ್ಕ ಇದೆ ಎಂದು ಆರೋಪ ಮಾಡಿದ್ದ ವಿಚಾರವಾಗಿ, ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ಫೋಟೋ ಬಿಡುಗಡೆ ಮಾಡಿದ್ದಾರೆ. ಈ ಕುರಿತು ಎಕ್ಸ್​ (ಟ್ವಿಟರ್​) ನಲ್ಲಿ ಪೋಸ್ಟ್​ ಮಾಡಿದ ಅವರು “ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹುಬ್ಬಳ್ಳಿಯಲ್ಲಿ ಐಸಿಸ್ ಬೆಂಬಲಿಗರು ಮತ್ತು ಭಯೋತ್ಪಾದಕರ ಮೇಲೆ ಸಹಾನುಭೂತಿ ಹೊಂದಿರುವವರ ಜೊತೆ ವೇದಿಕೆ ಹಂಚಿಕೊಂಡಿದ್ದಾರೆ ಎಂದು ಯತ್ನಾಳ್​ ಆರೋಪ ಮಾಡಿದ್ದಾರೆ.

ಮುಂದುವರೆದು “ಫೋಟೋದಲ್ಲಿರುವ ವ್ಯಕ್ತಿ ತನ್ವೀರ್ ಪೀರಾ ಅವರು ಭಯೋತ್ಪಾದಕ ಸಹಾನುಭೂತಿ ಹೊಂದಿದ್ದು, ಅವರು ಮಧ್ಯಪ್ರಾಚ್ಯದಾದ್ಯಂತ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದಾರೆ. ಈ ಕೆಳೆಗೆ ಹಂಚಿಕೊಂಡ ಫೋಟೋಗಳು ತನ್ವೀರ್ ಪೀರಾ ಭಯೋತ್ಪಾದಕರ ಮೇಲೆ ಸಹಾನುಭೂತಿ ಮತ್ತು ರಾಡಿಕಲ್ ಇಸ್ಲಾಮಿಕ್ ಆಪರೇಟಿವ್‌ಗಳನ್ನು ಭೇಟಿಯಾಗಲು ಮಧ್ಯಪ್ರಾಚ್ಯಕ್ಕೆ ಇತ್ತೀಚಿಗೆ ಭೇಟಿ ನೀಡಿದ ಸನ್ನಿವೇಶಗಳಾಗಿವೆ” ಎಂದು ಬರೆದುಕೊಂಡಿದ್ದಾರೆ.

ಈ ಭಯೋತ್ಪಾದಕ ಬೆಂಬಲಿಗೆ ಹಿಂದೆಯೂ ಹಲವಾರು ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿಯಾಗಿದ್ದೆ. ಕೆಲವೇ ದಿನಗಳಲ್ಲಿ ತನ್ವಿರ್ ಪೀರಾ ಎಂಬ ಭಯೋತ್ಪಾದಕ ಬೆಂಬಲಿಗನ ಇನ್ನಷ್ಟು ವಿವರಗಳನ್ನು ಬಹಿರಂಗಗೊಳಿಸುತ್ತೇನೆ. ಈತನು ಮಧ್ಯಪ್ರಾಚ್ಯ ದೇಶಗಳಿಂದ ಹಣವನ್ನು ಭಾರತಕ್ಕೆ ತರುವ ಹಾಗೂ ಭಾರತದ ಚಟುವಟಿಕಗಳ ಮಾಹಿತಿಯನ್ನು ಅರಬ್ ದೇಶಗಳಿಗೆ ರವಾನಿಸುವ ಕೆಲಸ ಮಾಡುತ್ತಿದ್ದಾನೆ. ಇಂದು (ಡಿ.06) ಬೆಳಗಾವಿಯಲ್ಲಿ ಮುಂಜಾನೆ ನಾನು ಮುಖ್ಯಮಂತ್ರಿಗಳು ಐಸಿಸ್ ಬೆಂಬಲಿಗನ ಜೊತೆ ವೇದಿಕೆ ಹಂಚಿಕೊಂಡಿದ್ದಾರೆ ಎಂದು ಹೇಳಿದ್ದೆ. ರಾಜ್ಯ ಪೊಲೀಸ್, ಕೇಂದ್ರೀಯ ತನಿಖಾ ಸಂಸ್ಥೆಗಳು ಈ ಕುರಿತು ವಿಚಾರಣೆ ಮಾಡಬೇಕು ಎಂದು ಆಗ್ರಹಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಸದ್ಯ ಈ ವಿಚಾರ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಬಿಜೆಪಿ ನಾಯಕರಿಗೆ ಹೊಸ ಅಸ್ತ್ರ ಸಿಕ್ಕಂತಾಗಿದ್ದು, ಅಧಿವೇಶನದಲ್ಲಿ ಪ್ರಸ್ತಾಪಿಸಲು ಸಿದ್ದರಾಗಿದ್ದಾರೆ. ಇನ್ನು ರಾಜ್ಯ ಕಾಂಗ್ರೆಸ್​ಗೆ ಇದು ತಲೆ ನೋವಾಗುವ ಸಾಧ್ಯತೆ ಇದೆ.

ಸಿದ್ದರಾಮಯ್ಯ ಪ್ರಕರಣವನ್ನು ಸಿಐಡಿ ತನಿಖೆಗೆ ಕೊಡಲಿ

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಕರಣವನ್ನು ಸಿಐಡಿ ತನಿಖೆಗೆ ಕೊಡಲಿ. ಸತ್ಯಾ ಸತ್ಯತೆ ಗೊತ್ತಾಗಲಿದೆ. ಸುಮಾರು 20 ವರ್ಷಗಳಿಂದ ಇದೇ ಕೆಲಸ ಮಾಡುತ್ತಿದ್ದಾರೆ. ದರ್ಗಾದಲ್ಲಿ ದೇಶ ವಿರೋಧಿ ಚಟುವಟಿಗಳು ಮಾಡುತ್ತಿದ್ದಾರೆ. ನಮ್ಮ ಸರ್ಕಾರದಲ್ಲೇ ಅನೇಕ ತಪ್ಪುಗಳು ಆಗಿವೆ. ನಮ್ಮ ಸರ್ಕಾರ ಕ್ರಮ ಕೈಗೊಂಡಿದ್ದರೇ ನಾವು 136 ಸ್ಥಾಳಗಳಲ್ಲಿ ಗೆಲ್ಲುತ್ತಿದ್ದೇವು. ಕ್ರಮ ಕೈಗೊಳ್ಳಿಲ್ಲ ಅದಕ್ಕೆ 66 ಸೀಟ್ ಬಂದಿವೆ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಳ್ ಹೇಳಿದರು.

ಯಾರು ಈ ತನ್ವೀರ್ ಪೀರಾ

ಪೂರ್ಣ ಹೆಸರು: ಸಯ್ಯದ್ ಮೊಹಮ್ಮದ್ ತನ್ವೀರಾ ಪೀರಾ ಹಾಸ್ಮೀಂ. ವಿಜಯಪುರ ಹಾಸೀಂಪೀರಾ ದರ್ಗಾದ ಧರ್ಮ ಗುರುಗಳು.

ಧರ್ಮಗುರುಗಳಾದ ಸಯ್ಯದ್ ಮೊಹಮ್ಮದ್ ತನ್ವೀರ್ ಪೀರಾ ಹಾಸ್ಮಿ ಅವರನ್ನು ಕಳೆದ ನವಂಬರ್ 20 ರಂದು ವಿಜಯಪುರದಲ್ಲಿ ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿದ್ದರು. ಸಚಿವರಾದ ಎಂ ಬಿ ಪಾಟೀಲ್, ರಾಜಣ್ಣ, ಕಾಂಗ್ರೆಸ್ ನಾಯಕಿ ಕಾಂತಾ ನಾಯಕ್ ಜೊತೆ ಭೇಟಿಯಾಗಿದ್ದರು. ನಗರದಲ್ಲಿ ನಡೆದಿದ್ದ 70 ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರೋಪ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಿಎಂ ಸಿದ್ದರಾಮಯ್ಯ ತೆರಳಿದ್ದರು. ಕಾರ್ಯಕ್ರಮದ ಬಳಿಕ ಧರ್ಮಗುರುಗಳಾದ ಸಯ್ಯದ್ ಮೊಹಮ್ಮದ್ ತನ್ವೀರ್ ಪೀರಾ ಹಾಸ್ಮಿ ನಿವಾಸಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿದ್ದರು.