ಭಟ್ಕಳ: ಇಲ್ಲಿನ ತಾಲೂಕು ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಬೇಕೆಂದು ಭಟ್ಕಳ ಎಜುಕೇಶನ್ ಟ್ರಸ್ಟ್ ಹಾಗೂ ಶಿಕ್ಷಣ ಸಂಸ್ಥೆಗಳ, ಸಿಬ್ಬಂದಿಗಳ, ಪಾಲಕರ ಮತ್ತು ಸಮಸ್ತ ಭಟ್ಕಳ ನಾಗರಿಕರ ಪರವಾಗಿ ಟ್ರಸ್ಟ್’ನ ಅಧ್ಯಕ್ಷ ಡಾ. ಸುರೇಶ ನಾಯಕ ಮನವಿ ಸಲ್ಲಿಸಿದರು. ಮನವಿಯನ್ನು ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ ಹಾಗೂ ಭಟ್ಕಳದ ಸಹಾಯಕ ಆಯುಕ್ತ ಮಮತಾ ದೇವಿ ಅವರ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಹಾಗೂ ಆರೋಗ್ಯ ಸಚಿವರಿಗೆ ಒತ್ತಾಯಿಸಿದರು.
ಭಟ್ಕಳ ಎಜುಕೇಶನ್ ಟ್ರಸ್ಟ್’ನ ಅಧ್ಯಕ್ಷ ಡಾ. ಸುರೇಶ ನಾಯಕ ಹಾಗೂ ಟ್ರಸ್ಟೀ ಮ್ಯಾನೇಜರ್ ರಾಜೇಶ ನಾಯಕ ಅವರು ಭಟ್ಕಳದಲ್ಲಿರುವ ತಾಲೂಕು ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವ ಅಗತ್ಯತೆಯನ್ನು ಸವಿಸ್ತಾರವಾಗಿ ವಿವರಿಸಿ ಮನವರಿಕೆ ಮಾಡಿಕೊಟ್ಟರು. ಜೊತೆಗೆ ಭಟ್ಕಳದ ತಾಲೂಕು ಆಸ್ಪತ್ರೆಯ ಒಳರೋಗಿಗಳ ಈಗಿರುವ ಹಾಸಿಗೆಯ ಮಿತಿಯನ್ನು 100 ರಿಂದ ಕನಿಷ್ಠ 250 ಕ್ಕೆ ಹೆಚ್ಚಿಸಬೇಕೆಂದು ಆಗ್ರಹಿಸಿದರು. ಹಾಗೂ ಟ್ರಾಮಾ ಸೆಂಟರನ್ನು ಆರಂಭಿಸುವ ಮೂಲಕ ಈ ಭಾಗದ ಜನರ ಬಹುದಿನದ ಬೇಡಿಕೆಯನ್ನು ಅತೀ ಶೀಘ್ರದಲ್ಲಿ ನೆರವೇರಿಸಿ ಬಡಜನರ ಪಾಲಿಗೆ ನೆರವಾಗಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಭಟ್ಕಳ ಎಜುಕೇಶನ್ ಟ್ರಸ್ಟ್’ನ ಅಂಗಸಂಸ್ಥೆಗಳ ಪ್ರಾಂಶುಪಾಲರು, ಉಪ ಪ್ರಾಂಶುಪಾಲರು ಹಾಜರಿದ್ದರು.