ಹಾಸನ, (ಡಿಸೆಂಬರ್ 05): ಮೈಸೂರು ದಸರಾ ಉತ್ಸವದಲ್ಲಿ 8 ಬಾರಿ ಅಂಬಾರಿ ಹೊತ್ತಿದ್ದ ಸಾಕಾನೆ ‘ಅರ್ಜುನ’ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಮೃತಪಟ್ಟಿದೆ. ಸಕಲೇಶಪುರ ತಾಲ್ಲೂಕಿನ ಯಸಳೂರು ಬಳಿಯ ದಬ್ಬಳಿಕಟ್ಟೆ ಅರಣ್ಯದಲ್ಲಿ ಸೋಮವಾರ ಸಾವನ್ನಪ್ಪಿದ್ದು, ಇಡೀ ಕರ್ನಾಟಕವೇ ಮಮ್ಮಲ ಮರುಗಿದೆ. ಇನ್ನು ಅರ್ಜುನನ್ನು ನೋಡಿಕೊಳ್ಳುತ್ತಿದ್ದ ಮಾವುತ ವಿನು ಆಕ್ರಂದನ ಮುಗಿಲು ಮುಟ್ಟಿದೆ. ನನ್ನ ಆನೆಯನ್ನು ಬದುಕಿಸಿಕೊಡಿ, ನನ್ನ ಆನೆಯನ್ನು ಮೈಸೂರಿಗೆ ಕಳುಸಹಿಸಿಕೊಡಿ. ಇಲ್ಲಾ ನನ್ನನ್ನು, ನನ್ನನ್ನೂ ಅರ್ಜುನನ ಜೊತೆ ಮಣ್ಣು ಮಾಡಿ ಎಂದು ಅಂಗಲಾಚಿ ಬೇಡಿಕೊಳ್ಳುತ್ತಿದ್ದಾರೆ.
ನನ್ನ ಆನೆಗೆ ಆಕಸ್ಮಿಕವಾಗಿ ಕಾಲಿಗೆ ಗುಂಡು ಬಿತ್ತು. ಅವರೇನು ಬೇಕಂತ ಫೈರ್ ಮಾಡಿಲ್ಲ. ಆಕಸ್ಮಿಕವಾಗಿ ಗುಂಡೇಟು ಬಿದ್ದಿದೆ. ಗುಂಡೇಟು ತಗುಲಿದ ಬಳಿಕ ಆನೆ ಕುಂಟಲು ಶುರುವಾಯ್ತು. ಅವನು ಕುಂಟುತ್ತಾ ಎಷ್ಟು ಹೋರಾಟ ಮಾಡ್ತಾನೆ ಸಾರ್, ಆಗದೇ ಅಲ್ಲೇ ಕುಸಿದು ಬಿದ್ದ. ಪ್ರಶಾಂತ ಆನೆಗೆ ಮಿಸ್ಸಾಗಿ ಅರವಳಿಕೆ ಮದ್ದಿನ ಫೈರ್ ಆಗಿತ್ತು. ಆ ಆನೆಯನ್ನು ಸಂತೈಸಲು ಹೋದಾಗ ಸಲಗ ಅರ್ಜುನನ ಮೇಲೆ ದಾಳಿ ಮಾಡಿದೆ. ನಾನು ಇದ್ದಿದ್ದರೆ ಹೀಗೆ ಆಗಲು ಬಿಡುತ್ತಿರಲಿಲ್ಲ ಸಾರ್. ನಾನು ನನ್ನ ಆನೆ ಬಿಟ್ಟು ಹೋಗಲ್ಲ. ಸಾರ್ ನನ್ ರಾಜಾ ಮಲಗಿದಾನೆ ಸಾರ್ ಎದ್ದೇಳಿಸಿ. ಅರ್ಜುನ ಸತ್ತಿಲ್ಲ ಎಂದು ನನ್ನ ಹೆಂಡತಿ ಮಕ್ಕಳಿಗೆ ಹೇಳಿದ್ದೇನೆ. ಅರ್ಜುನನನ್ನು ನನ್ನ ಜೊತೆ ಕಳುಹಿಸಿಕೊಡಿ ಸಾರ್ ಎಂದು ಕಣ್ಣೀಡುತ್ತಿದ್ದಾರೆ.
ಇನ್ನು ಸಕಲೇಶಪುರ ತಾಲ್ಲೂಕಿನ ಯಸಳೂರು ಬಳಿಯ ದಬ್ಬಳಿಕಟ್ಟೆ ಅರಣ್ಯದಲ್ಲಿ ಅರ್ಜುನ ಮೃತ ಪಟ್ಟಿದ್ದು, ಅಲ್ಲೇ ಅಂತ್ಯಕ್ರಿಯೆ ನಡೆಸಲು ಅರಣ್ಯ ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ಆದ್ರೆ, ಜನರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಸ್ಮಾರಕ ಕಟ್ಟುವ ಸಲುವಾಗಿ ಬೇರೆಡೆ ಅಂತ್ಯಕ್ರಿಯೆ ಮಾಡುವಂತೆ ಆಗ್ರಹಿಸಿದ್ದಾರೆ. ಇನ್ನು ಪ್ರೀತಿ ಆನೆ ಅರ್ಜುನಮ ಅಂತಿಮದರ್ಶನಕ್ಕೆ ಜನರ ದಂಡು ಬರುತ್ತಿದೆ. ಮೈಸೂರು ಹಾಗೂ ಸುತ್ತಮುತ್ತಲಿನ ಗ್ರಾಮದ ಜನರು ಬಂದು ಅಂತಿಮ ನಮನ ಸಲ್ಲಿಸುತ್ತಿದ್ದಾರೆ. ಮೃತ ಅರ್ಜುನನ ಕಳೇಬರಕ್ಕೆ ಹಾರ ಹಾಕಿ ನಮನ ಸಲ್ಲಿಸಿ ಗೌರವ ಸೂಚಿಸುತ್ತಿದ್ದಾರೆ.
ಇನ್ನು ಇದರ ಮಧ್ಯೆ ಪ್ರವೇಶಿಸಿದ ಅರಮನೆ ಪುರೋಹಿತ ಪ್ರಾಹ್ಲಾದ್, ಆನೆ ಮೃತಪಟ್ಟ ಸ್ಥಳದಲ್ಲಿ ಅಂತ್ಯಕ್ರಿಯೆ ಆಗಬೇಕು. ಈಗಾಗಲೇ ಅರ್ಜನನಿಗೆ ನೀವಾಗಿದೆ. ಮತ್ತೆ ನೋವಾಗುವುದು ಬೇಡ ಎಂದು ಜನರಿಗೆ ಕೈಮುಗಿದು ಮನವಿ ಮಾಡಿದರು.