ವಿವ್ ರಿಚರ್ಡ್ಸ್ ಮತ್ತು ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಶಾಯ್ ಹೋಪ್

ಆಂಟಿಗುವಾದಲ್ಲಿ ನಡೆದ ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ 4 ವಿಕೆಟ್​ಗಳಿಂದ ಇಂಗ್ಲೆಂಡ್ ತಂಡವನ್ನು ಸೋಲಿಸಿದೆ. ವಿಂಡೀಸ್ ಪರ ನಾಯಕನ ಇನ್ನಿಂಗ್ಸ್ ಆಡಿದ ಶಾಯ್ ಹೋಪ್ ಶತಕ ಬಾರಿಸಿದಲ್ಲದೆ, ಹಲವು ದಾಖಲೆಗಳನ್ನು ನಿರ್ಮಿಸಿದರು.

ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಗೆಲುವಿನ ಶತಕ ಬಾರಿಸಿದ ಶಾಯ್ ಹೋಪ್ 83 ಎಸೆತಗಳಲ್ಲಿ 4 ಬೌಂಡರಿ ಹಾಗೂ 7 ಸಿಕ್ಸರ್ ನೆರವಿನಿಂದ ಅಜೇಯ 109 ರನ್​ಗಳ ಇನ್ನಿಂಗ್ಸ್ ಆಡಿದರು. ಈ ಇನ್ನಿಂಗ್ಸ್‌ನೊಂದಿಗೆ ತಮ್ಮ ಏಕದಿನ ವೃತ್ತಿಜೀವನದಲ್ಲಿ 5000 ರನ್‌ಗಳ ಗಡಿ ಕೂಡ ದಾಟಿದರು.

ಇದರೊಂದಿಗೆ ಏಕದಿನದಲ್ಲಿ ವೇಗವಾಗಿ 5 ಸಾವಿರ ರನ್ ಪೂರೈಸಿದ ವಿವ್ ರಿಚರ್ಡ್ಸ್ ಮತ್ತು ವಿರಾಟ್ ಕೊಹ್ಲಿ ಅವರ ಪಟ್ಟಿಗೂ ಶಾಯ್ ಹೋಪ್ ಸೇರ್ಪಡೆಗೊಂಡರು. ಈ ಇಬ್ಬರು ಬ್ಯಾಟ್ಸ್‌ಮನ್‌ಗಳ ಜೊತೆಗೆ, ವೇಗವಾಗಿ 5 ಸಾವಿರ ಏಕದಿನ ರನ್ ಪೂರೈಸಿದ ಮೂರನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಹೋಪ್ ಪಾತ್ರರಾದರು.

ಇನ್ನು ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಪಾಕಿಸ್ತಾನ ತಂಡದ ಮಾಜಿ ನಾಯಕ ಬಾಬರ್ ಆಝಂ 97 ಇನ್ನಿಂಗ್ಸ್​ಗಳಲ್ಲಿ 5000 ರನ್ ಪೂರೈಸಿದ್ದರು. ಎರಡನೇ ಸ್ಥಾನದಲ್ಲಿರುವ ಹಾಶಿಮ್ ಆಮ್ಲ 101 ಇನ್ನಿಂಗ್ಸ್​ಗಳಲ್ಲಿ 5 ಸಾವಿರ ರನ್ ಗಡಿ ದಾಟಿದ್ದರು.

ಮೂರನೇ ಸ್ಥಾನದಲ್ಲಿರುವ ವಿವ್ ರಿಚರ್ಡ್ಸ್ ಮತ್ತು ವಿರಾಟ್ ಕೊಹ್ಲಿ ತಲಾ 114 ಇನ್ನಿಂಗ್ಸ್​ಗಳಲ್ಲಿ ಈ ಸಾಧನೆ ಮಾಡಿದ್ದರು. ಇದೀಗ ಈ ಪಟ್ಟಿಗೆ ಸೇರ್ಪಡೆಗೊಂಡಿರುವ ಶಾಯ್ ಹೋಪ್ ಕೂಡ 114 ಇನ್ನಿಂಗ್ಸ್​ಗಲ್ಲಿ 5 ಸಾವಿರ ರನ್ ಪೂರೈಸಿದ್ದಾರೆ.

ಇದರೊಂದಿಗೆ ಈ ಪಂದ್ಯದಲ್ಲಿ ತಮ್ಮ 16ನೇ ಏಕದಿನ ಶತಕವನ್ನು ಪೂರೈಸಿದ ಹೋಪ್, ಏಕದಿನದಲ್ಲಿ ವೇಗವಾಗಿ 16 ಶತಕ ಸಿಡಿಸಿದ 5ನೇ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಭಾರತದ ವಿರಾಟ್ ಕೊಹ್ಲಿ ಕೇವಲ 100 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದರು.