ನವದೆಹಲಿ, ಡಿಸೆಂಬರ್ 3: ರಾಜಸ್ಥಾನ ವಿಧಾನಸಭೆ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದ್ದು, ಬಿಜೆಪಿ ಬಹುಮತ ಗಳಿಸುವುದು ಬಹುತೇಕ ದೃಢಪಟ್ಟಿದೆ. ಆಡಳಿತಾರೂಢ ಕಾಂಗ್ರೆಸ್ ಸುಮಾರು 70 ಸ್ಥಾನಗಳಲ್ಲಷ್ಟೇ ಮುನ್ನಡೆ ಕಾಯ್ದುಕೊಂಡಿದೆ. ಈ ಮೂಲಕ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಜನ ಅಧಿಕಾರದಿಂದ ಕೆಳಗಳಿಸಿದ್ದಾರೆ. ಇದರೊಂದಿಗೆ, ರಾಜ್ಯದಲ್ಲಿ ಕಳೆದ 25 ವರ್ಷಗಳಿಂದ ನಡೆದುಕೊಂಡು ಬಂದ ಸಂಪ್ರದಾಯ ಮತ್ತೊಮ್ಮೆ ಮುಂದುವರೆದಿದೆ ಮತ್ತು ಕಾಂಗ್ರೆಸ್ ನಂತರ ಬಿಜೆಪಿ ಸರ್ಕಾರ ರಚನೆಯಾಗಲಿದೆ. ಆದರೆ ಈ ಬಾರಿ ಕಾಂಗ್ರೆಸ್ ತೀರಾ ಹಿಂದುಳಿದಿದೆ. ಸಿಎಂ ಅಶೋಕ್ ಗೆಹ್ಲೋಟ್ ಅವರ ಅವರ ಜನಪ್ರಿಯ ಭರವಸೆಗಳನ್ನು ನಿರ್ಲಕ್ಷಿಸಿ, ರಾಜಸ್ಥಾನದ ಜನರು ಬಿಜೆಪಿ ಪರ ಮತ ಹಾಕಿದ್ದಾರೆ ಮತ್ತು ಕೇಸರಿ ಪಡೆಯನ್ನು ಗೆಲ್ಲಿಸಿದ್ದಾರೆ. ಅಷ್ಟಕ್ಕೂ ಕಾಂಗ್ರೆಸ್ ಹೀನಾಯ ಸೋಲಿಗೆ ಕಾರಣವೇನು ಎಂಬ ಪ್ರಶ್ನೆಗೆ ರಾಜಕೀಯ ವಿಶ್ಲೇಷಕರು ಹಲವು ಉತ್ತರಗಳನ್ನು ನೀಡಿದ್ದಾರೆ.
ಕಾಂಗ್ರೆಸ್ ಆಂತರಿಕ ಕಲಹಗಳು
ರಾಜಸ್ಥಾನದಲ್ಲಿ ಕಾಂಗ್ರೆಸ್ ಸೋಲಿಗೆ ಪ್ರಮುಖ ಕಾರಣ ಪಕ್ಷದೊಳಗಿನ ಕಚ್ಚಾಟ. ಅನೇಕ ನಾಯಕರು ಬಂಡೆದ್ದಾಗ, ಭಿನ್ನಮತ ಪ್ರದರ್ಶಿಸಿದಾಗ ಗೆಹ್ಲೋಟ್ ಅವರನ್ನು ಸರಿಯಾಗಿ ನಿಭಾಯಿಸಲಿಲ್ಲ. ಪಕ್ಷದೊಳಗಿನ ಗುಂಪುಗಾರಿಕೆ ಮತ್ತು ಅನೇಕ ಬಂಡಾಯ ನಾಯಕರು ಪಕ್ಷದ ವರ್ಚಸ್ಸನ್ನು ಹಾಳು ಮಾಡಿದರು.
ಸಚಿನ್ ಪೈಲಟ್ ಮತ್ತು ಗೆಹ್ಲೋಟ್ ನಡುವಿನ ಕದನ
ಸಚಿನ್ ಪೈಲಟ್ ಮತ್ತು ಅಶೋಕ್ ಗೆಹ್ಲೋಟ್ ನಡುವಿನ ರಾಜಕೀಯ ಸಂಘರ್ಷವು ಇಡೀ ದೇಶದಲ್ಲಿ ಚರ್ಚೆಯ ವಿಷಯವಾಗಿತ್ತು. ಇಬ್ಬರೂ ನಾಯಕರು ಜವಾಬ್ದಾರಿ ಮರೆತು ಪರಸ್ಪರ ಹೋರಾಟದತ್ತ ಹೆಚ್ಚು ಗಮನಹರಿಸುತ್ತಿರುವುದು ಕಂಡುಬಂದಿತ್ತು. ಸರ್ಕಾರ ರಚನೆಯಾದ ತಕ್ಷಣ ಇಬ್ಬರ ನಡುವಿನ ಜಟಾಪಟಿ ಶುರುವಾಗಿದ್ದು ಮುಗಿಯುವ ಲಕ್ಷಣ ಕಾಣಿಸಲೇ ಇಲ್ಲ. ಹಲವು ಬಾರಿ ಹೈಕಮಾಂಡ್ ಇಬ್ಬರ ಮನವೊಲಿಸಲು ಪ್ರಯತ್ನಿಸಿದರೂ, ಸ್ವತಃ ರಾಹುಲ್ ಗಾಂಧಿ ಕೂಡ ಚುನಾವಣಾ ಪ್ರಚಾರದ ವೇಳೆ ಇಬ್ಬರನ್ನೂ ಒಟ್ಟಿಗೆ ಕರೆತಂದು ಪಕ್ಷದಲ್ಲಿ ಎಲ್ಲವೂ ಚೆನ್ನಾಗಿದೆ ಎಂಬ ಸಂದೇಶ ರವಾನಿಸಲು ಯತ್ನಿಸಿದರೂ ಅವರ ಮನಸು ಒಂದಾಗಲಿಲ್ಲ. ಇದು ಜನರಲ್ಲಿ ಪಕ್ಷದ ಬಗ್ಗೆ ಭರವಸೆ ಹೊರಟುಹೋಗಲು ಕಾರಣವಾಯಿತು.