ವಿಜಯಪುರ ಡಿ.02: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಮತ್ತೆ ಬುಸುಗೂಡಿದ್ದಾರೆ. ಬಿವೈ ವಿಜಯೇಂದ್ರ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರಾದ ಬಳಿಕ ಬಸನಗೌಡ ಪಾಟೀಲ್ ಯತ್ನಾಳ್ ನಿಗಿ ನಿಗಿ ಕೆಂಡದಂತಾಗಿದ್ದು, ನಮ್ಮ ಮನೆಗೆ ಬರಬೇಡ ಎಂದು ಬಹಿರಂಗವಾಗಿಯೇ ಹೇಳಿದ್ದರು. ಇದೀಗ ಮಗ ಬಿವೈ ವಿಜಯೇಂದ್ರ ಅವರಿಗೆ ಅಧ್ಯಕ್ಷ ಪಟ್ಟ ಸಿಕ್ಕಿದ್ದಕ್ಕೆ ಬಿಎಸ್ ಯಡಿಯೂರಪ್ಪ ವಿರುದ್ಧ ಯತ್ನಾಳ್ ಕಿಡಿಕಾರಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಮೊದಲು ಮಾಜಿ ಮುಖ್ಯಮಂತ್ರಿ ಅಂತಿದ್ದರು. ಮುಖಭಂಗ ಆಗುತ್ತೆ ಅಂತಾ ಈಗ ನಿಕಟಪೂರ್ವ ಎಂದು ಹೇಳುತ್ತಾರೆ. ಅಪ್ಪ, ಮಗ ನಾಟಕ ಮಾಡಬೇಡಿ ಅಂತಾ ಈ ಹಿಂದೆ ನಾನು ಹೇಳಿದ್ದೆ. ಎಲ್ಲಾ ನಾಟಕ ಮಾಡೋದು, ಎಲ್ಲಾ ಹುದ್ದೆ ತಮ್ಮ ಮಕ್ಕಳಿಗೆ ಬೇಕು. ಯಾಕಂದ್ರೆ ಆ ಖುರ್ಚಿ ಬಿಡಬಾರದು ಅಂತ. ರೈತರ ಬಗ್ಗೆ ಕಣ್ಣೀರು ಹಾಕೋದು ನೋಡಿದರೇ ಎಲ್ಲಾ ನಾಟಕ ಮಾಡೋದು, ಎಲ್ಲಾ ಹುದ್ದೆ ತಮ್ಮ ಮಕ್ಕಳಿಗೆ ಬೇಕು. ಇನ್ನು ಏನಾದರೂ ಉಳಿದಿದ್ದರೇ ಮನೆಯ ಬೆಕ್ಕುಗಳಿಗೆ ಕೊಟ್ಟು ಬಿಡಿ ಅಂತ ಹೇಳಿದ್ದೇನೆ. ಪ್ರಧಾನ ಕಾರ್ಯದರ್ಶಿ, ಉಪ ಕಾರ್ಯದರ್ಶಿ ಅಂತ ಮಾಡಿಕೊಳ್ಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಜಯಪುರದ ಆನಂದ ನಗರದಲ್ಲಿ ಶುಕ್ರವಾರ (ಡಿ.01)ರ ರಾತ್ರಿ ನಡೆದ ದಾನಮ್ಮದೇವಿ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನನ್ನನ್ನು ಹೆದರಿಸಬೇಕು ಅಂತಾ ಬ್ಲ್ಯಾಕ್ಮೇಲ್ ಮಾಡ್ತಾರೆ. ನನಗೆ ಬ್ಲ್ಯಾಕ್ಮೇಲ್ ಮಾಡಲು ಬಂದರೂ ನಿಮ್ಮದು ನನ್ನ ಬಳಿ ಇದೆ. ಈಗ ಡಿ.ಕೆ.ಶಿವಕುಮಾರ್ ಅವರದ್ದು ತೆಗೆದಿದ್ದೇನೆ. ರಾಜ್ಯವನ್ನು ಲೂಟಿ ಮಾಡಿ 10 ರಿಂದ 20ಸಾವಿರ ಕೋಟಿ ರೂ. ಲೂಟಿ ಮಾಡಿದ್ದರೂ ಇನ್ನೂ ಸಮಾಧಾನ ಇಲ್ಲ. ಡಿ.ಕೆ.ಶಿವಕುಮಾರ್ ವಿರುದ್ಧ ಮತ್ತೊಂದು ಕೇಸ್ ದಾಖಲಿಸುತ್ತಿದ್ದೇವೆ ಎಂದು ಹೇಳಿದರು.