ಹಾಸನ, ಡಿಸೆಂಬರ್ 1: ಕಳೆದ ಲೋಕಸಭೆ ಚುನಾವಣೆಯಲ್ಲಿ ನಾವು ಬಿಜೆಪಿಯನ್ನು ಎದುರಿಸಿದ್ದೆವು. ಆದರೆ ಈಗ ಅದನ್ನೆಲ್ಲ ಮರೆಯಬೇಕು. ಈಗಿನ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕೈಯನ್ನು ನಾವು ಬಲಪಡಿಸಬೇಕಿದೆ ಎಂದು ಜೆಡಿಎಸ್ ವರಿಷ್ಠ ಹೆಚ್ಡಿ ದೇವೇಗೌಡ ಕರೆ ನೀಡಿದರು. ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಶ್ರೀರಾಮದೇವರ ಕಟ್ಟೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಜೊತೆ ಒಗ್ಗಟ್ಟಾಗಿ ಕೆಲಸ ಮಾಡಿ ಜಿಲ್ಲೆಯ ಕೀರ್ತಿ ಹೆಚ್ಚಿಸೋಣ. ಬಿಜೆಪಿ ಜೊತೆ ಸೇರಿ ಕಾಂಗ್ರೆಸ್ ವಿರುದ್ಧ ಹೋರಾಡಲು ತೀರ್ಮಾನಿಸಿದ್ದೇವೆ ಎಂದರು.
ಪಂಚ ರಾಜ್ಯಗಳ ಚುನಾವಣೆಯ ಎಕ್ಸಿಟ್ ಪೋಲ್ ರಿಪೋರ್ಟ್ ಬಂದಿದೆ. ಒಂದೆರಡು ಕಡೆ ಕಾಂಗ್ರೆಸ್, ಒಂದೆರಡು ಕಡೆ ಬಿಜೆಪಿ ಎಂದು ಸಮೀಕ್ಷೆ ಫಲಿತಾಂಶ ತಿಳಿಸಿದೆ. ವಿಧಾನಸಭಾ ಚುನಾವಣೆ ಲೋಕಸಭೆ ಮೇಲೆ ಪರಿಣಾಮ ಬೀರುವುದಿಲ್ಲ. ಇದು ನನ್ನ ರಾಜಕೀಯ ಅನುಭವದಲ್ಲಿ ಹೇಳುತ್ತಿದ್ದೇನೆ ಎಂದು ದೇವೇಗೌಡ ಹೇಳಿದರು.
ಕೊನೆ ಕ್ಷಣದಲ್ಲಿ ಗ್ಯಾರಂಟಿ ಯೋಜನೆ ಕಾಂಗ್ರೆಸ್ ಅಧಿಕಾರ ಹಿಡಿಯಿತು. ಈಗ ದೇಶದ ಎಲ್ಲಾ ಕಡೆಯೂ ಗ್ಯಾರಂಟಿ ಶುರುವಾಗಿದೆ. ಗ್ಯಾರಂಟಿ ಯೋಜನೆಗಳ ಬಗ್ಗೆ ನಾನು ಈಗ ಹೆಚ್ಚು ಮಾತನಾಡುವುದಿಲ್ಲ. ನನಗೆ ರಾಜ್ಯಸಭೆ ಸದಸ್ಯನಾಗಿ ಇನ್ನೂ ಎರಡೂವರೆ ವರ್ಷ ಅವಕಾಶವಿದೆ. ಮಂಡಿ ನೋವು ಬಿಟ್ಟರೆ ಎಲ್ಲಾ ಕಡೆ ಕೆಲಸ ಮಾಡುವ ಸಾಮರ್ಥ್ಯವಿದೆ. ಲೋಕಸಭೆ ಚುನಾವಣಾ ಸಂದರ್ಭ ಹೆಚ್ಡಿ ಕುಮಾರಸ್ವಾಮಿ ಕೂಡ ಬರುತ್ತಾರೆ ಎಂದು ಅವರು ಹೇಳಿದರು.
ಮುಂದಿನ ಲೋಕಸಭೆಯಲ್ಲಿ ನಮಗೆ ಎಷ್ಟು ಸೀಟು ಹಂಚಿಕೆಯಾಗಲಿದೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಈ ಬಗ್ಗೆ ಪ್ರಧಾನಿ, ಬಿಜೆಪಿ ಅಧ್ಯಕ್ಷಕರು, ಹೆಚ್ಡಿಕೆ ತೀರ್ಮಾನ ಮಾಡಲಿದ್ದಾರೆ ಎಂದು ದೇವೇಗೌಡರು ಹೇಳಿದ್ದಾರೆ.
ಜೆಡಿಎಸ್ ಶಾಸಕರು, ಮಾಜಿ ಶಾಸಕರು, ಚುನಾಯಿತ ಜನಪ್ರತಿನಿಧಿಗಳು ದೇವೇಗೌಡರ ಸಭೆಯಲ್ಲಿ ಭಾಗಿಯಾಗಿದ್ದರು. ಲೋಕಸಭಾ ಚುನಾವಣೆ ಸಂಬಂಧ ಸಲಹೆ ಪಡೆಯಲು ದೇವೇಗೌಡ ಅವರು ಈ ಸಭೆ ನಡೆಸಿದ್ದಾರೆ. ಸಂಸದ ಪ್ರಜ್ವಲ್ ರೇವಣ್ಣ, ಶಾಸಕರಾದ ಹೆಚ್ ಡಿ ರೇವಣ್ಣ, ಸಿ.ಎನ್.ಬಾಲಕೃಷ್ಣ, ಸ್ವರೂಪ್, ಸೂರಜ್ ರೇವಣ್ಣ ಉಪಸ್ಥಿತರಿದ್ದರು.