ಕುಮಟಾದ ವನ್ನಳ್ಳಿ ಹೆಡ್‌ಬಂದರ್‌ನಲ್ಲಿ ಮಹಿಳೆಯೊಬ್ಬಳು ತನ್ನಿಬ್ಬರು ಮಕ್ಕಳನ್ನು ಬಸ್ ನಿಲ್ದಾಣದಲ್ಲಿ ಬಿಟ್ಟು ಬಳಿ ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದ್ದು. ಮಹಿಳೆ ಆತ್ಮಹತ್ಯೆಯ ನಾಟಕವಾಡಿ ಪೋಲಿಸರ ಅತಿಥಿಯಾದ ಘಟನೆ ಬೆಳಕಿಗೆ ಬಂದಿದೆ..
ನಿವೇದಿತಾ ಭಂಡಾರಿ ಎಂಬ ಮಹಿಳೆ ಈ ರೀತಿ ನಾಟಕ ಮಾಡಲು ಹೋಗಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾಳೆ. ಹೊನ್ನಾವರದ ಸಾಂತಗಲ್ ಗ್ರಾಮದ ನಿವಾಸಿಯಾಗಿರುವ ನಿವೇದಿತಾ ತಮ್ಮ ಇಬ್ಬರು ಮಕ್ಕಳನ್ನು ಕರೆದುಕೊಂಡು ಸ್ಕೂಟಿಯಲ್ಲಿ ಮನೆ ಬಿಟ್ಟಿದ್ದರು. ನ. 25ರಂದು ಒಮ್ಮಿಂದೊಮ್ಮೆಗೆ ನಾಪತ್ತೆಯಾಗಿದ್ರು..ತಮ್ಮಿಬ್ಬರು ಮಕ್ಕಳನ್ನು ಕುಮಟಾದ ಪಿಕ್‌ಅಪ್ ಬಸ್ ನಿಲ್ದಾಣದಲ್ಲಿ ಬಿಟ್ಟು ತೆರಳಿದ್ರು. ಅವರ ಸ್ಕೂಟಿ ಸಮುದ್ರದ ಬಳಿ ಪತ್ತೆಯಾಗಿತ್ತು. ಮಾಂಗಲ್ಯ, ಮೊಬೈಲ್ ಕೂಡಾ ಸಮುದ್ರದ ಪಕ್ಕದಲ್ಲೇ ಇತ್ತು. ಅವರ ವೇಲ್ ಸಮುದ್ರದ ಕಲ್ಲುಗಳ ಬಳಿ ಪತ್ತೆಯಾಗಿತ್ತು.
ಇದನ್ನೆಲ್ಲ ಗಮನಿಸಿದಾಗ ನಿವೇದಿತಾ ಭಂಡಾರಿ ಅವರು ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವುದು ಸಹಜವಾದ ಸಂಶಯ ಉಂಟಾಗಿತ್ತು. ಈ ನಡುವೆ, ಕಳೆದ ನಾಲ್ಕು ದಿನಗಳಿಂದ ಅವರಿಗಾಗಿ ಹುಡುಕಾಟ ನಡೆಸಲಾಗಿತ್ತು. ಪೊಲೀಸರು ಮತ್ತು ಸ್ಥಳೀಯ ಜೀವರಕ್ಷಕರು ಹುಡುಕಾಡಿದ್ದರು. ಹೆಣ ಮೇಲೆ ಬರಬಹುದು ಎಂಬ ಕಾರಣದಿಂದ ಸಮುದ್ರ ತೀರದ ಉದ್ದಕ್ಕೂ ಹುಡುಕಾಟ ನಡೆದಿತ್ತು. ಆದರೆ, ಎಲ್ಲೂ ಶವ ಕೂಡಾ ಸಿಗದೆ ಇದ್ದಾಗ ಪೊಲೀಸರಿಗೆ ಸಂಶಯ ಬಂದಿದೆ.
ಮನೆಯವರನ್ನು ವಿಚಾರಿಸಿದ ಬಳಿಕ ಮನೆಯಲ್ಲಿ ಸಣ್ಣ ಪುಟ್ಟ ಸಮಸ್ಯೆ, ವೈಮನಸ್ಸು ಇದ್ದಿದ್ದು ಗೊತ್ತಾಗಿದೆ. ಹೀಗಾಗಿ ಗಂಡ ಮತ್ತು ಮನೆಯವರನ್ನು ಹೆದರಿಸುವ ಉದ್ದೇಶದಿಂದ ಅವರು ಆತ್ಮಹತ್ಯೆ ನಾಟಕವಾಡಿರಬಹುದು ಎಂಬ ಸಂಶಯ ಬಂದಿದೆ. ಸಮುದ್ರಕ್ಕೆ ಹಾರಿಲ್ಲ ಎಂದರೆ ಎಲ್ಲಿ ಹೋಗಿರಬಹುದು ಎಂಬ ಸಾಧ್ಯಾಸಾಧ್ಯತೆಗಳನ್ನು ಪರಿಶೀಲಿಸಿದಾಗ ಹಲವು ಕಡೆ ಹುಡುಕಲಾಯ್ತು. ಕೊನೆಗೂ ಆಕೆ ಎಲ್ಲಾದ್ರೂ ಇರಬಹುದು ಅನ್ನೋ ಪೊಲೀಸರ ಸಂಶಯ ನಿಜವಾಯ್ತು. ನಿವೇದಿತಾ ಹೊನ್ನಾವರದ ಬಾಡಿಗೆ ಮನೆಯೊಂದರಲ್ಲಿ ಅವಿತು ಕುಳಿತಿದ್ದರು.
ಮನೆಯವರಿಗೆ ಪಾಠ ಕಲಿಸುವ ಉದ್ದೇಶದಿಂದ ನಿವೇದಿತಾ ಈ ರೀತಿ ಮಾಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಆದರೆ, ಪುಟ್ಟ ಮಕ್ಕಳನ್ನು ರಸ್ತೆಯಲ್ಲಿ ಬಿಟ್ಟು ಹೋದ ಉದ್ದೇಶವೇನು ಎನ್ನುವುದು ಸ್ಪಷ್ಟವಿಲ್ಲ. ಕುಮಟಾ ಸಿಪಿಐ ತಿಮ್ಮಪ್ಪ ನೇತೃತ್ವದ ಪೊಲೀಸ್ ತಂಡದಿಂದ ಮಹಿಳೆಯನ್ನು ಬಂಧಿಸಿದ್ದು, ಈ ಕುರಿತು ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.