ಸಂಪನ್ನಗೊಂಡ ಕುಮಟಾ ಮಂಡಲ ಮಟ್ಟದ ಪ್ರತಿಭಾ ಪ್ರದರ್ಶನ ಹಾಗೂ ಕ್ರೀಡೋತ್ಸವ

ಕುಮಟಾ ಮಂಡಲ ಮಟ್ಟದ ಪ್ರತಿಭಾ ಪ್ರದರ್ಶನ ಹಾಗೂ ಕ್ರೀಡೋತ್ಸವ ಮೂರೂರಿನ ಪ್ರಗತಿ ವಿದ್ಯಾಲಯದಲ್ಲಿ ಸಂಪನ್ನಗೊಂಡಿತು ಕಾರ್ಯಕ್ರಮ ಉದ್ಘಾಟಿಸಿದ ಮಹಾಮಂಡಲ ಅಧ್ಯಕ್ಷರಾದ ಶ್ರೀ ಮೋಹನ್ ಹೆಗಡೆ ಅವರು ಮಾತನಾಡಿ ” ಪ್ರತಿಯೊಬ್ಬರಲ್ಲೂ ಪ್ರತಿಭೆ ಎನ್ನುವುದು ಇರುತ್ತದೆ. ಆದರೆ ಪ್ರತಿಭೆಗೆ ತಕ್ಕ ಪ್ರೋತ್ಸಾಹ, ವೇದಿಕೆ ದೊರೆತಾಗ ಸುಪ್ತ ಪ್ರತಿಭೆಗಳು ವ್ಯಕ್ತವಾಗಲು ಕಾರಣವಾಗುತ್ತದೆ. ದೈಹಿಕ ಹಾಗೂ ಮಾನಸಿಕ ಕ್ಷಮತೆಯನ್ನು ಕಾಯ್ದುಕೊಳ್ಳಲು ವಿದ್ಯಾರ್ಥಿಗಳಿಗೆ ಹಾಗೂ ಯುವ ಜನಾಂಗಕ್ಕೆ ಪೂರಕವಾಗಲಿ ಎನ್ನುವ ಉದ್ದೇಶದಿಂದ ಪರಮ ಪೂಜ್ಯ ಶ್ರೀಗಳವರು ವಿದ್ಯಾರ್ಥಿ ಪ್ರತಿಭಾ ಪ್ರದರ್ಶನ ಹಾಗೂ ಯುವ ಕ್ರೀಡೋತ್ಸವ ಕಾರ್ಯಕ್ರಮವನ್ನು ನಡೆಸುವಂತೆ ಸೂಚಿಸಿದ್ದರು. ಆ ರೀತಿಯಲ್ಲಿ ಮಹಾಮಂಡಲ ವ್ಯಾಪ್ತಿಯ ಎಲ್ಲಾ ಮಂಡಲಗಳಲ್ಲಿ ಹಾಗೂ ವಲಯಗಳಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು ವಿದ್ಯಾರ್ಥಿಗಳು ಹಾಗೂ ಯುವಜನತೆ ಈ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಳ್ಳಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕವಾಗಿ ನಿಜ ಅರ್ಥದಲ್ಲಿ ಇದನ್ನು ಉತ್ಸವದಂತೆ ಆಚರಿಸಬೇಕು” ಎಂದು ನುಡಿದರು ಸಭಾಧ್ಯಕ್ಷತೆಯನ್ನು ಕುಮಟಾ ಮಂಡಲದ ಅಧ್ಯಕ್ಷರಾದ ಶ್ರೀ ಸುಬ್ರಾಯ ಭಟ್ ರವರು ವಹಿಸಿ ” “ಅಚ್ಚುಕಟ್ಟಾದ ವ್ಯವಸ್ಥಿತ ಸಂಘಟನೆಗೆ ಪೂರಕವಾಗಿ ಕಾರ್ಯನಿರ್ವಹಿಸಿದ ಮಂಡಲ ಹಾಗೂ ವಲಯಗಳ ಎಲ್ಲಾ ಸೇವಾ ಬಿಂದುಗಳನ್ನು ಸ್ಮರಿಸಿ ಕೃತಜ್ಞತೆಯನ್ನು ಸಲ್ಲಿಸಿದರು. ಕುಮಟಾ ಮಂಡಲ ಮಟ್ಟದಲ್ಲಿ ಸಂಘಟಿಸುವ ಎಲ್ಲಾ ಕಾರ್ಯಕ್ರಮಗಳಿಗೆ ಇದೇ ರೀತಿಯ ಸಹಕಾರವನ್ನು ನೀಡುವಂತೆ” ಕೋರಿದರು ಮುಖ್ಯ ಅತಿಥಿಗಳಾಗಿ ವಿದ್ಯಾನಿಕೇತನ ಮೂರೂರಿನ ಕಾರ್ಯಾಧ್ಯಕ್ಷರಾದ ಶ್ರೀ ಆರ್.ಜಿ. ಭಟ್ ಹಾಗೂ ಮೂರೂರು ಕಲ್ಲಬ್ಬೆ ವಲಯದ ಅಧ್ಯಕ್ಷರಾದ ಶ್ರೀ ದತ್ತು ಭಟ್ಟರವರು ಉಪಸ್ಥಿತರಿದ್ದರು. ಶಂಖನಾದ, ಧ್ವಜಾರೋಹಣ, ಫಲ ಸಮರ್ಪಣೆ, ಗುರುವಂದನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮವನ್ನು ಮಂಡಲ ವಿದ್ಯಾ ಪ್ರಧಾನರಾದ ಶ್ರೀ ಗಣೇಶ ಭಟ್ ಸ್ವಾಗತಿಸಿದರು. ಕುಮಟಾ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ರವೀಂದ್ರ ಭಟ್ ಸೂರಿ ನಿರೂಪಿಸಿ ವಂದಿಸಿದರು. ನಂತರ ನಡೆದ ಸ್ಪರ್ಧಾ ಕಾರ್ಯಕ್ರಮಗಳಲ್ಲಿ ಬೌದ್ಧಿಕ ಹಾಗೂ ಶಾರೀರಿಕ ವಿಭಾಗದಲ್ಲಿ ಇನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಪ್ರತಿಭೆ ಪ್ರದರ್ಶಿಸಿದರು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮಂಡಲ ಅಧ್ಯಕ್ಷರು ಹಾಗೂ ವಿವಿಧ ವಲಯಗಳ ಅಧ್ಯಕ್ಷರು ಉಪಸ್ಥಿತರಿದ್ದು ವಿಜೇತರಿಗೆ ಬಹುಮಾನ ಹಾಗೂ ಪ್ರಮಾಣ ಪತ್ರವನ್ನು ವಿತರಿಸಿದರು. ಕುಮಟಾ ಮಂಡಲ ವ್ಯಾಪ್ತಿಯ ವಿವಿಧ ವಲಯಗಳ ಸೇವಾ ಬಿಂದುಗಳು ಸಹಕರಿಸಿದರು.