ಆಸೀಸ್ ವಿರುದ್ಧ ಅಬ್ಬರಿಸಿ ಪಂತ್ ದಾಖಲೆ ಮುರಿದು ಧೋನಿ ದಾಖಲೆ ಸರಿಗಟ್ಟಿದ ಕಿಶನ್..!

2023ರ ಏಕದಿನ ವಿಶ್ವಕಪ್‌ನಲ್ಲಿ ಕೇವಲ 2 ಪಂದ್ಯಗಳನ್ನು ಆಡುವ ಅವಕಾಶ ಪಡೆದಿದ್ದ ಇಶಾನ್ ಕಿಶನ್, ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ತಮ್ಮ ಪ್ರದರ್ಶನದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಈ ಪಂದ್ಯದಲ್ಲಿ, ನಿರ್ಣಾಯಕ ಸಮಯದಲ್ಲಿ ನಾಯಕ ಸೂರ್ಯಕುಮಾರ್ ಯಾದವ್ ಅವರೊಂದಿಗೆ ಇಶಾನ್ ಮೂರನೇ ವಿಕೆಟ್‌ಗೆ 112 ರನ್‌ಗಳ ಮ್ಯಾಚ್ ವಿನ್ನಿಂಗ್ ಜೊತೆಯಾಟವನ್ನು ಮಾಡುವ ಮೂಲಕ ತಂಡಕ್ಕೆ ಸರಣಿಯಲ್ಲಿ 1-0 ಮುನ್ನಡೆ ನೀಡುವಲ್ಲಿ ಪ್ರಮುಖ ಕೊಡುಗೆ ನೀಡಿದರು.

ಈ ಪಂದ್ಯದಲ್ಲಿ, ಇಶಾನ್ 39 ಎಸೆತಗಳಲ್ಲಿ 2 ಬೌಂಡರಿ ಮತ್ತು 5 ಸಿಕ್ಸರ್ ಒಳಗೊಂಡ 58 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಈ ಇನ್ನಿಂಗ್ಸ್ ಆಧಾರದ ಮೇಲೆ, ಇಶಾನ್ ರಿಷಬ್ ಪಂತ್ ಅವರ ವಿಶೇಷ ದಾಖಲೆಯನ್ನು ಮುರಿದರು ಮತ್ತು ಭಾರತೀಯ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿ ಹೊಸ ದಾಖಲೆಯನ್ನು ಸಹ ರಚಿಸಿದರು.

ಇಶಾನ್ ಈಗ ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತೀಯ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಈ ಹಿಂದೆ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ನಾಲ್ಕು ಸಿಕ್ಸರ್‌ಗಳನ್ನು ಬಾರಿಸಿದ್ದ ರಿಷಬ್ ಪಂತ್ ಅವರ ಹೆಸರಿನಲ್ಲಿ ಈ ದಾಖಲೆ ಇತ್ತು.

ಅಂತಾರಾಷ್ಟ್ರೀಯ ಟಿ20ಯಲ್ಲಿ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಆಗಿ ಇಶಾನ್ ಗಳಿಸಿದ ಎರಡನೇ ಅರ್ಧಶತಕ ಇದಾಗಿದೆ. ಇದರೊಂದಿಗೆ ಇದೀಗ ಧೋನಿ ಮತ್ತು ಪಂತ್ ಜೊತೆಗೆ 2 ಅರ್ಧಶತಕ ಬಾರಿಸಿದ ಭಾರತದ ಮೂರನೇ ವಿಕೆಟ್ ಕೀಪರ್ ಎನಿಸಿಕೊಂಡಿದ್ದಾರೆ.

ಈ ವಿಚಾರದಲ್ಲಿ ವಿಕೆಟ್‌ಕೀಪರ್‌ನ ಪಾತ್ರವನ್ನು ನಿರ್ವಹಿಸುತ್ತಲೇ ಇದುವರೆಗೆ ಮೂರು ಅರ್ಧಶತಕಗಳ ಇನ್ನಿಂಗ್ಸ್‌ಗಳನ್ನು ಆಡಿರುವ ಕೆಎಲ್ ರಾಹುಲ್ ಮೊದಲ ಸ್ಥಾನದಲ್ಲಿದ್ದಾರೆ.

ಅಂತಾರಾಷ್ಟ್ರೀಯ ಟಿ20ಯಲ್ಲಿ 16 ಇನ್ನಿಂಗ್ಸ್‌ಗಳ ನಂತರ ಇಶಾನ್ ಅರ್ಧಶತಕ ದಾಖಲಿಸಿದ್ದು, ಈ ಅವಧಿಯಲ್ಲಿ ಅವರು 7 ಬಾರಿ ಮಾತ್ರ ಎರಡಂಕಿ ತಲುಪಿದ್ದರು. ಇಂತಹ ಪರಿಸ್ಥಿತಿಯಲ್ಲಿ ಈ ಪಂದ್ಯದಲ್ಲಿ 58 ರನ್​ಗಳ ಈ ಇನ್ನಿಂಗ್ಸ್ ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುವಲ್ಲಿ ಖಂಡಿತವಾಗಿಯೂ ನೆರವಾಗಲಿದೆ.