ಜಗತ್ತಿಗೆ ಕೋವಿಡ್ 19 ಸೋಂಕು ನೀಡಿ ಎಲ್ಲವನ್ನೂ ಅಲ್ಲೋಲ ಕಲ್ಲೋಲ ಮಾಡಿದ್ದ ಚೀನಾದಲ್ಲಿ, ಈಗ ಮತ್ತೊಂದು ಸಾಂಕ್ರಾಮಿಕದ ಬಿರುಗಾಳಿ ಎದ್ದಿದೆ. ಕೊವಿಡ್‌ನಿಂದ ಜಗತ್ತು ಚೇತರಿಸುಕೊಳ್ಳುವ ಮುನ್ನವೇ ಚೀನಾದಲ್ಲಿ ಇನ್ನೊಂದು ಆರೋಗ್ಯ ತುರ್ತು ಪರಿಸ್ಥಿತಿ ಭೀತಿ ಉಂಟಾಗಿದೆ. ನಿಗೂಢ ನ್ಯುಮೋನಿಯಾ ಸಾಂಕ್ರಾಮಿಕ ಚೀನಾ ಶಾಲೆಗಳನ್ನು ಆವರಿಸಿದೆ. ಇದರಿಂದ ಅನಾರೋಗ್ಯಕ್ಕೆ ತುತ್ತಾದ ಮಕ್ಕಳಿಂದ ಅಸ್ಪತ್ರೆಗಳು ತುಂಬಿಹೋಗಿವೆ. ಇದು ಜಾಗತಿಕ ಆರೋಗ್ಯ ತಜ್ಞರಲ್ಲಿ ಕಳವಳ ಮೂಡಿಸಿದೆ…
ಬೀಜಿಂಗ್ ಮತ್ತು ಲಿಯಾನಿಂಗ್ ಪ್ರಾಂತ್ಯಗಳು ಸಾಂಕ್ರಾಮಿಕ ರೋಗದ ಮೂಲ ಕೇಂದ್ರಗಳಾಗಿವೆ. ಇಲ್ಲಿನ ಶಿಶು ವೈದ್ಯ ಆಸ್ಪತ್ರೆಗಳಲ್ಲಿ ಲೆಕ್ಕವಿಲ್ಲದಷ್ಟು ಅಸ್ವಸ್ಥ ಮಕ್ಕಳು ದಾಖಲಾಗಿದ್ದಾರೆ. ಸಮಸ್ಯೆಯ ಗಂಭೀರತೆಯನ್ನು ಅರಿತ ಅನೇಕ ಶಾಲೆಗಳು ತರಗತಿಗಳನ್ನು ರದ್ದುಗೊಳಿಸಿವೆ. ವಿದ್ಯಾರ್ಥಿಗಳಲ್ಲದೆ, ಶಿಕ್ಷಕರು ಕೂಡ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಇದು ಕೋವಿಡ್ 19 ವೈರಸ್ ಹರಡಲು ಆರಂಭಿಸಿದ ದಿನಗಳನ್ನು ನೆನಪಿಸುತ್ತಿದೆ.
ಸೋಂಕು ತಗುಲಿರುವ ಮಕ್ಕಳಲ್ಲಿ ವಿಪರೀತ ಜ್ವರ ಹಾಗೂ ಶ್ವಾಸಕೋಶದ ಉರಿಯೂತ ಪ್ರಮುಖ ಲಕ್ಷಣವಾಗಿದೆ. ಆದರೆ ಫ್ಲೂ ಅಥವಾ ಆರ್‌ಎಸ್‌ವಿಯಂತಹ ಉಸಿರಾಟ ಸಂಬಂಧಿ ವೈರಸ್ ಕಾಯಿಲೆಗಳಲ್ಲಿ ಸಾಮಾನ್ಯವಾಗಿ ಉಂಟಾಗುವ ಕೆಮ್ಮು ಅವರಲ್ಲಿ ಕಾಣಿಸಿಕೊಂಡಿಲ್ಲ. ಇದರ ತೀವ್ರತೆಯಲ್ಲಿ ವ್ಯತ್ಯಾಸವಿದ್ದು, ಕೆಲವರು ಆಸ್ಪತ್ರೆಗೆ ದಾಖಲಾಗುವಂತಾಗಿದೆ…
ಸೋಂಕಿನ ಅಪಾಯವನ್ನು ತಗ್ಗಿಸಲು ಕೂಡಲೇ ಕ್ರಮ ಕೈಗೊಳ್ಳುವಂತೆ ಚೀನಾಕ್ಕೆ ಮನವಿ ಮಾಡಿರುವ ವಿಶ್ವ ಆರೋಗ್ಯ ಸಂಸ್ಥೆ ಉಸಿರಾಟ ಸಂಬಂಧಿ ಸಮಸ್ಯೆಯ ಕುರಿತು ಹೆಚ್ಚಿನ ಮಾಹಿತಿ ನೀಡುವಂತೆ ಸೂಚಿಸಿದೆ. ಸಾಂಕ್ರಾಮಿಕ ಕಾಣಿಸಿಕೊಂಡ ಪ್ರದೇಶಗಳಲ್ಲಿ ಜನರು ಮುಂಜಾಗ್ರತಾ ಕ್ರಮ ವಹಿಸುವಂತೆ ಜನರಿಗೆ ಸಲಹೆ ನೀಡಿದೆ. ಸ್ವಚ್ಛತೆ ಕಾಪಾಡಲು, ಉಸಿರಾಟ ಸಮಸ್ಯೆ ಲಕ್ಷಣಗಳಿಗೆ ವೈದ್ಯರನ್ನು ಸಂಪರ್ಕಿಸಲು ಹಾಗೂ ಪರಿಸ್ಥಿತಿ ಬಗ್ಗೆ ನಿರಂತರವಾಗಿ ಮಾಹಿತಿ ಪಡೆಯುವಂತೆ ತಿಳಿಸಿದೆ..