ಮಧ್ಯಪ್ರದೇಶದ ದಿಂಡೋರಿಯಲ್ಲಿ ಚಲಿಸುತ್ತಿರುವ ಕಾರಿನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆದಿದ್ದು, ಓರ್ವನನ್ನು ಬಂಧಿಸಲಾಗಿದೆ. 16 ವರ್ಷದ ಬಾಲಕಿ ಮೇಲೆ ಕಾರಿನಲ್ಲಿ ಅತ್ಯಾಚಾರ ಎಸಗಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ನಗರದ ಬಜಾಗ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ಪೊಲೀಸರ ಪ್ರಕಾರ, ಅಪ್ರಾಪ್ತ ಬಾಲಕಿ ತನ್ನ ಸಹೋದರಿಯೊಂದಿಗೆ ಬಿರ್ಸಾ ಮುಂಡಾ ಅವರ ಸ್ಮರಣಾರ್ಥ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದಳು. ಅಲ್ಲಿಗೆ ನಡೆದುಕೊಂಡು ಹೋಗುತ್ತಿರುವಾಗ ಅವರು ಕಾರಿನಲ್ಲಿ ಬರುತ್ತಿದ್ದ ನಾಲ್ವರು ಆರೋಪಿಗಳು ತಮ್ಮ ಕಾರನ್ನು ನಿಲ್ಲಿಸಿ ಅವರಿಗೆ ಲಿಫ್ಟ್ ನೀಡಿದರು.
ಕಾರಿನೊಳಗೆ ಕುಳಿತ ತಕ್ಷಣ ಆರೋಪಿಗಳು ಅರಣ್ಯ ಪ್ರದೇಶಕ್ಕೆ ಓಡಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಆಕೆಯ ಅಳು ಹೊರಗಡೆ ಕೇಳಿಸಬಾರದೆನ್ನುವ ಉದ್ದೇಶದಿಂದ ಅವರು ಕಾರಿನೊಳಗೆ ಜೋರಾಗಿ ಮ್ಯೂಸಿಕ್ ಹಾಕಿದ್ದರು. ಘಟನೆಯ ನಂತರ ಬಾಲಕಿ ತನ್ನ ಕುಟುಂಬ ಸದಸ್ಯರಿಗೆ ಘಟನೆಯನ್ನು ತಿಳಿಸಿದ್ದಾಳೆ.
ಬಾಲಕಿಯ ಕುಟುಂಬ ಸದಸ್ಯರ ಪ್ರಕಾರ, ಅವರು ಘಟನೆಯನ್ನು ವರದಿ ಮಾಡಲು ಅದೇ ದಿನ ಸ್ಥಳೀಯ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದರು, ಆದರೆ ಅವರ ದೂರನ್ನು ಸ್ವೀಕರಿಸಲಿಲ್ಲ. ನಂತರ ನವೆಂಬರ್ 18 ರಂದು ದಿಂಡೋರಿ ಜಿಲ್ಲಾಸ್ಪತ್ರೆಗೆ ತೆರಳಿ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದಾಗ ಪ್ರಕರಣ ದಾಖಲಾಗಿದೆ.
ಘಟನೆಯ ಕುರಿತು ಮಾತನಾಡಿದ ದಿಂಡೋರಿಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್‌ಪಿ) ಜಗನ್ನಾಥ್ ಮಾರ್ಕಮ್, ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದರು.
ಆರೋಪಿಗಳಲ್ಲಿ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅವರು ಹೇಳಿದರು. ಸಾಮೂಹಿಕ ಅತ್ಯಾಚಾರವೇ ಎನ್ನುವುದರ ಕುರಿತು ಸ್ಪಷ್ಟ ಮಾಹಿತಿ ಇಲ್ಲ, ಈ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ ಮತ್ತು ನಿಖರವಾದ ವಿವರಗಳು ಹೊರಬರುತ್ತವೆ ಎಂದು ಹೇಳಿದ್ದಾರೆ. ಪ್ರಕರಣ ದಾಖಲಿಸುವಲ್ಲಿ ನಿರ್ಲಕ್ಷ್ಯ ತೋರಿದ್ದು ತನಿಖೆಯಲ್ಲಿ ಅದು ಬಹಿರಂಗವಾದರೆ, ಅವರ ವಿರುದ್ಧವೂ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.