ನವದೆಹಲಿ, ನವೆಂಬರ್ 22: ವಿದೇಶ ವಿನಿಮಯ ನಿರ್ವಹಣೆ ಕಾಯ್ದೆ ಉಲ್ಲಂಘನೆ ಆರೋಪದ ಮೇಲೆ ಬೈಜೂಸ್ ಸಂಸ್ಥೆಗೆ ಜಾರಿ ನಿರ್ದೇಶನಾಲಯ ಶೋಕಾಸ್ ನೋಟೀಸ್ ಜಾರಿ ಮಾಡಿದೆ . ಇದು 9,000 ಕೋಟಿ ರೂ ಮೊತ್ತದ ಅಕ್ರಮ ಎಂದು ಹೇಳಲಾಗುತ್ತಿದೆ. ಇಡಿ ನಡೆಸಿದ ತನಿಖೆ ವೇಳೆ, ಬೈಜೂಸ್ ಸಂಸ್ಥೆ ಫೆಮಾ ನಿಯಮಗಳನ್ನು ಉಲ್ಲಂಘಿಸಿರುವುದು ಗೊತ್ತಾಗಿದೆ. ಹೀಗಾಗಿ, ಸಂಸ್ಥೆಗೆ ಶೋಕಾಸ್ ನೋಟೀಸ್ ಜಾರಿ ಮಾಡಿರುವುದು ತಿಳಿದುಬಂದಿದೆ.
ಫೆಮಾ ನಿಯಮ ಉಲ್ಲಂಘನೆ ಆಗಿರುವ ಆರೋಪ ಮತ್ತು ಇಡಿಯಿಂದ ನೋಟೀಸ್ ಬಂದಿರುವ ಸುದ್ದಿಯನ್ನು ಬೈಜುಸ್ ಸಂಸ್ಥೆ ತಳ್ಳಿಹಾಕಿದೆ. ನಿನ್ನೆ ಮಂಗಳವಾರ (ನ. 21) ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಮಾಧ್ಯಮಗಳಲ್ಲಿ ಬರುತ್ತಿರುವ ಈ ಸುದ್ದಿ ಸತ್ಯಕ್ಕೆ ದೂರವಾದುದು ಎಂದು ಹೇಳಿದೆ.
‘ಜಾರಿ ನಿರ್ದೇಶನಾಲಯ ಇಲಾಖೆಯಿಂದ ತನಗೆ ನೋಟೀಸ್ ಬಂದಿದೆ ಎಂದು ಮಾಧ್ಯಮಗಳಲ್ಲಿ ಬಂದಿರುವ ವರದಿಗಳನ್ನು ಬೈಜುಸ್ ಖಡಾಖಂಡಿತವಾಗಿ ನಿರಾಕರಿಸುತ್ತದೆ. ಇಡಿಯಿಂದ ಯಾವುದೇ ಅಂತಹ ನೋಟೀಸ್ ಬಂದಿಲ್ಲ,’ ಎಂದು ಬೈಜುಸ್ ತನ್ನ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.
ಮಾಧ್ಯಮಗಳಲ್ಲಿ ಬಂದ ವರದಿ ಪ್ರಕಾರ ಹಲವರಿಗೆ ಈ ನೋಟಿಸ್ ಜಾರಿಯಾಗಿದೆ. ಬೈಜುಸ್ನ ಸಂಸ್ಥಾಪಕರು ಮತ್ತು ಥಿಂಕ್ ಅಂಡ್ ಲರ್ನ್ ಪ್ರೈ ಲಿ ಸಂಸ್ಥೆಯ ಸಂಸ್ಥಾಪಕರೂ ಆದ ಬೈಜು ರವೀಂದ್ರನ್ ಅವರಿಗೂ ಇಡಿ ನೋಟೀಸ್ ಕೊಟ್ಟಿರುವುದು ಗೊತ್ತಾಗಿದೆ.