ಆಕೆಗೆ ಒಡವೆ ಅಂದ್ರೆ ಎಲ್ಲಿಲ್ಲದ ಪ್ರೀತಿ.. ಅದ್ರಲ್ಲೂ ಮೈ ಮೇಲೆ ಚಿನ್ನದ ಒಡವೆ ಹಾಕೋದು ಅಂದ್ರೆ ಬಲು ಪ್ರೀತಿ, ಅದು ಮದುವೆಯೇ ಇರಲಿ, ಶುಭ ಸಮಾರಂಭ ಇರಲಿ.. ಕೊನೆಗೆ ಊರಿನಲ್ಲಿ ಕುರಿ ಮೇಯಿಸುವುದೆ ಇರಲಿ ತನ್ನ ಬಳಿ ಇರೊ ಅಷ್ಟೂ ಒಡವೆ ಸದಾ ತನ್ನ ಮೈ ಮೇಲೆಯೇ ಇರಬೇಕು ಅನ್ನೋದೆ ಆಕೆಯ ಬಯಕೆಯಾಗಿತ್ತಂತೆ! ಆದ್ರೆ ಆಕೆಯ ಈ ಬಯಕೆಯೇ ಅವಳ ಪ್ರಾಣ ತೆಗೆದಿದೆ. ಕುರಿ ಮೇಯಿಸಲು ಜಮೀನಿನ ಬಳಿ ಹೋಗಿದ್ದ ಒಂಟಿ ಮಹಿಳೆಯನ್ನ ಪ್ರಾಣ ತೆಗೆದು ಹೊಂಡದಲ್ಲಿ ಮುಳುಗಿಸಿ ಚಿನ್ನಾಭರಣ ದೋಚಿರೊ ಪಾತಕಿಗಳು ಎಸ್ಕೇಪ್ ಆಗಿದ್ದು ಹಾಡಹಗಲಿನಲ್ಲೇ ನಡೆದ ಅಮಾನುಷ ಹತ್ಯೆಗೆ ಊರಿಗೆ ಊರೆ ಬೆಚ್ಚಿಬಿದ್ದಿದ್ದು ಕೊಲೆಗಡುಕರ ಬಂಧನಕ್ಕೆ ಒತ್ತಾಯಿಸಿದ್ದಾರೆ.
ಚಿನ್ನಾಭರಣಕ್ಕಾಗಿ ಒಂಟಿ ಮಹಿಳೆಯ ಕಗ್ಗೊಲೆ.. ಕುರಿ ಮೇಯಿಸಲು ಹೋದಾಕೆಯನ್ನ ಹಿಂಬಾಲಿಸಿ ಹತ್ಯೆಗೈದ ಪಾತಕಿಗಳು, ಮಹಿಳೆಯ ಪ್ರಾಣ ತೆಗೆದ ಆಭರಣ ಪ್ರೀತಿ. ಕುರಿ ಮೇಯಿಸಲು ಕೂಡ ಆಭರಣ ಹಾಕಿಕೊಂಡ ಹೋದಾಕೆಯ ಜೀವ ತೆಗದು ಚಿನ್ನಾಭರಣ ದೋಚಿದ ನೀಚರು. ಹೌದು ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಅಡಗೂರು ಗ್ರಾಮದಲ್ಲಿ ನಡೆದು ಹೋಗಿರೊ ಒಂಟಿ ಮಹಿಳೆಯ ಕಗ್ಗೊಲೆ ಇಡೀ ಜಿಲ್ಲೆಯನ್ನೇ ಬೆಚ್ಚಿಬೀಳೀಸಿದೆ.
ಮೈಮೇಲಿದ್ದ 80 ಗ್ರಾಂ ಚಿನ್ನಾಕ್ಕಾಗಿ ಮಹಿಳೆಯನ್ನು ಕೊಂದಿರೊ ಪಾಪಿಗಳು ಅಲ್ಲೇ ಇದ್ದ ನೀರಿನ ತೊರೆಗೆ ಮೃತದೇಹ ಬಿಸಾಡಿ ಮೃತದೇಹದ ಮೇಲೆ ದೊಡ್ಡ ಮರದ ದಿಮ್ಮಿಯನ್ನ ಹೇರಿ ಹೋಗಿದ್ದಾರೆ. ಮೊನ್ನೆ ಸೋಮವಾರ ಮಧ್ಯಾಹ್ನ ತನ್ನ ಕುರಿಗಳನ್ನ ಮೇಯಿಸಲೆಂದು ಮನೆಯಿಂದ ಹೊರ ಹೋಗಿದ್ದ ಗ್ರಾಮದ ಸುಶೀಲಮ್ಮ(60) ಸಂಜೆಯಾದ್ರು ವಾಪಸ್ ಬಂದಿಲ್ಲ.
ಆಕೆಯ ಕುರಿಗಳು ಮನೆಗೆ ಬಂದರೂ ಆ ಮಹಿಳೆಯ ಸುಳಿವು ಇಲ್ಲದನ್ನು ಕಂಡ ಮನೆಯವರು ಸುತ್ತಮುತ್ತಲೆಲ್ಲಾ ಹುಡುಕಾಡಿದ್ದಾರೆ. ಆಕೆಯ ಫೋನ್ ಗೆ ಕರೆ ಮಾಡಿದ್ರೆ ಫೋನ್ ಸ್ವಿಚ್ ಆಫ್ ಆಗಿದೆ, ಎಲ್ಲಿ ಹುಡುಕಾಡಿದ್ರು ಆಕೆಯ ಸುಳಿವು ಸಿಕ್ಕಿಲ್ಲ. ಕೂಡಲೆ ಚನ್ನರಾಯಪಟ್ಟಣ ನಗರ ಠಾಣೆ ಪೊಲೀಸರಿಗೆ ವಿಚಾರ ಮುಟ್ಟಿಸಿದ್ದಾರೆ. ಎಲ್ಲಿಯಾದ್ರು ಹೋಗಿರಬಹುದೆ ಎನ್ನೋ ಅನುಮಾನದಿಂದ ಬೆಳಿಗ್ಗೆಯವರೆಗೂ ಸುಮ್ಮನಿದ್ದಾರೆ.
ಮರು ದಿನ ಬೆಳಿಗ್ಗೆ ಮತ್ತೆ ಸುಶೀಲಮ್ಮಳನ್ನ ಹುಡುಕಿ ಹೊರಟ ಕುಟುಂಬ ಸದಸ್ಯರಿಗೆ ಕಂಡಿದ್ದು ಘನಘೋರ ದೃಶ್ಯ, ಆಕೆ ಕುರಿ ಮೇಯಿಸಲು ಹೋಗಿದ್ದ ಪ್ರದೇಶದಲ್ಲಿರೋ ತೊರೆಯ ನೀರಲ್ಲಿ ಮರದ ದಿಮ್ಮಿಯ ಕೆಳಗೆ ಸುಶೀಲಪ್ಪ ಶವ ಕಾಣಿಸಿದೆ. ಆಕೆಯ ಮೈಮೇಕಿದ್ದ ಚಿನ್ನದ ಸರ, ಚಿನ್ನದ ಬಳೆ, ಓಲೆ ಎಲ್ಲವೂ ಮಾಯವಾಗಿದೆ. ಚಿನ್ನಾಭರಣಕ್ಕಾಗಿಯೇ ಸುಶೀಲಮ್ಮರನ್ನ ಹಿಂಬಾಲಿಸಿರೊ ಪಾತಕಿಗಳು ಆಕೆಯನ್ನ ಕೊಂದು ಚಿನ್ನಾಭರಣ ದೋಚಿದ್ದಾರೆ ಎಂದು ಸಂಬಂಧಿ ಮೋಹನ್ ಅಲವತ್ತುಕೊಂಡಿದ್ದಾರೆ.
ಸುಶೀಲಮ್ಮ ಮನೆಯಲ್ಲಿ ಸಿರಿವಂತಿಕೆ ಇಲ್ಲದಿದ್ದರೂ ಒಂದಷ್ಟು ಆಡು ಕುರಿ ಮಾರಾಟ ಮಾಡಿಕೊಂಡು ಹೈನುಗಾರಿಕೆಯಿಂದ ಒಂದಷ್ಟು ಆದಾಯ ಗಳಿಸುತ್ತಿದ್ದರು, ಪತಿ ಹಾಗು ಮಕ್ಕಳು ಕಾರ್ಪೆಂಟರ್ ಕೆಲಸ ಮಾಡಿಕೊಂಡಿದ್ದರೂ ಸುಶೀಲಮ್ಮ ಆಡು ಕುರಿ ಮೇಯಿಸಿಕೊಂಡು ಜೀವನ ಸಾಗಿಸುತ್ತಿದ್ದರು. ಬಂದ ಆದಾಯದಲ್ಲಿ ಮೈ ತುಂಬಾ ಒಡವೆ ಮಾಡಿಕೊಂಡು ಹಾಕಿಕೊಳ್ಳ ಬೇಕು, ಮದುವೆ ಸಮಾರಂಭ ಇರಲಿ, ಯಾವುದೇ ಕಾರ್ಯಕ್ರಮ ಇರಲಿ, ಇಲ್ಲದೆ ಇರಲಿ ತನ್ನ ಬಳಿ ಇರೊ ಒಡವೆ ಯಾವಾಗ್ಲು ತನ್ನ ಮೈಮೇಲೆ ಇರಬೇಕು. ಈಗಲ್ಲದೆ ಮತ್ತೆ ಸತ್ತಾಗ ಒಡವೆ ಹಾಕೋಕಾಗುತ್ತಾ ಎನ್ನುತ್ತಿದ್ದ ಸುಶೀಲಮ್ಮ ಖುಷಿಯಿಂದಲೇ ಒಡವೆ ಹಾಕಿಕೊಂಡು ಓಡಾಡುತ್ತಿದ್ದರಂತೆ.
ಆದ್ರೆ ಸುಶೀಲಮ್ಮರ ಆ ಆಭರಣ ಪ್ರೀತಿಯೆ ಆಕೆಯ ಜೀವಕ್ಕೆ ಮುಳುವಾಗಿದೆ, ಆಕೆಯ ಮೈಮೇಲೆ ಲಕ್ಷ ಲಕ್ಷ ಬೆಲೆಬಾಳೋ ಚಿನ್ನಾಭರಣ ಗಮನಿಸಿದ ಪಾತಕಿಗಳು ಆಕೆಯನ್ನ ಹಿಂಬಾಲಿಸಿ ಹತ್ಯೆ ಮಾಡಿರಬಹುದು ಎನ್ನೊ ಶಂಕೆ ವ್ಯಕ್ತವಾಗಿದೆ. ಯಾರೊ ಗುರುತು ಪರಿಚಯ ಇರೋ ಜನರೇ ಈಕೆಯನ್ನ ಟಾರ್ಗೆಟ್ ಮಾಡಿರಬಹುದು ಎನ್ನೊ ಅನುಮಾನ ಕೂಡ ಮೂಡಿದೆ.
ಮಹಿಳೆಯ ಕೊಲೆ ನಡೆದಿರೋ ಬಗ್ಗೆ ವಿಚಾರ ತಿಳಿಯುತ್ತಲೆ ಸ್ಥಳಕ್ಕೆ ಬಂದ ಚನ್ನರಾಯಪಟ್ಟಣ ನಗರ ಠಾಣೆ ಪೊಲೀಸರು ಶ್ವಾನ ದಳ, ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರ ಮೂಲಕ ಪರಿಶೀಲನೆ ನಡೆಸಿದ್ದಾರೆ. ಹಾಸನವ ವೈದ್ಯಕೀಯ ಕಾಲೇಜಿನಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು ತನಿಖೆ ನಡೆಸುತ್ತಿದ್ದಾರೆ, ಮಹಿಳೆಯ ಸಾವು ಊರಿಗೆ ಊರನ್ನೆ ಬೆಚ್ಚಿಬೀಳಿಸಿದ್ದು ಹಂತಕರ ಬಂಧನಕ್ಕೆ ಕುಟುಂಬ ಸದಸ್ಯರು ಆಗ್ರಹಿಸಿದ್ದಾರೆ.
ಒಟ್ನಲ್ಲಿ ಆಭರಣ ಆಭರಣ ಅಂತಾ ಚಿನ್ನಾಭರಣದ ಮೇಲೆ ಬಹು ಮೋಹ ಹೊಂದಿದ್ದ ಮಹಿಳೆಯನ್ನ ಆಕೆಯ ಒಡವೆ ಮೇಲಿನ ಪ್ರೀತಿಯೇ ಬಲಿ ಪಡೆದುಕೊಂಡಿದೆ. ಪ್ರಕರಣ ದಾಖಲಿಸಿಕೊಂಡಿರೊ ಪೊಲೀಸರು ಹಂತಕರ ಪತ್ತೆಗೆ ಬಲೆ ಬೀಸಿದ್ದು ಆರೋಪಿಗಳ ಬಂಧನದ ಬಳಿಕ ಕೊಲೆ ಹಿಂದಿನ ಅಸಲಿಯತ್ತು ಬಯಲಾಗಲಿದೆ.