ಇಷ್ಟು ದಿನ ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಎಂದರೆ ಉರಿದು ಬೀಳುತ್ತಿದ್ದ ಗೌತಮ್ ಗಂಭೀರ್ ಇದೀಗ ಧೋನಿ ಪರ ಬ್ಯಾಟ್ ಬೀಸಿ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ. ಅಪರೂಪಕ್ಕೆಂಬಂತೆ ಧೋನಿಯನ್ನು ಮೆಚ್ಚಿ ಮಾತನಾಡಿರುವ ಗಂಭೀರ್, ವೈಟ್ ಬಾಲ್ ಕ್ರಿಕೆಟ್‌ನಲ್ಲಿ ತಮ್ಮ ನೆಚ್ಚಿನ ಬ್ಯಾಟಿಂಗ್ ಪಾಲುದಾರ ಎಂಎಸ್ ಧೋನಿ ಎಂದು ಹೇಳುವ ಮೂಲಕ ಎಲ್ಲರ ಹುಬ್ಬೆರಿಸಿದ್ದಾರೆ. ವಾಸ್ತವವಾಗಿ ಕ್ರಿಕೆಟ್ ಆಡುವ ದಿನಗಳಲ್ಲಿ ಸೆಹ್ವಾಗ್ ಅವರೊಂದಿಗೆ ಭಾರತದ ಇನ್ನಿಂಗ್ಸ್ ಆರಂಭಿಸುತ್ತಿದ್ದ ಗಂಭೀರ್, ಎಂಎಸ್ ಧೋನಿ ಅವರನ್ನು ತಮ್ಮ ನೆಚ್ಚಿನ ಬ್ಯಾಟಿಂಗ್ ಪಾರ್ಟ್ನರ್ ಎಂದು ಏಕೆ ಕರೆದರು ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿರಬಹುದು. ಅದಕ್ಕೆಲ್ಲ ಉತ್ತರ ಇಲ್ಲಿದೆ.
ನನ್ನ ನೆಚ್ಚಿನ ಪಾಲುದಾರ ಧೋನಿ
ಸ್ಪೋರ್ಟ್ಸ್ಕೀಡಾ ಜೊತೆ ಮಾತನಾಡಿದ ಗೌತಮ್ ಗಂಭೀರ್,‘ನನ್ನ ನೆಚ್ಚಿನ ಕ್ರಿಕೆಟ್ ಪಾಲುದಾರ ಎಂಎಸ್ ಧೋನಿ. ಜನರು ನನ್ನ ನೆಚ್ಚಿನ ಬ್ಯಾಟಿಂಗ್ ಪಾಲುದಾರ ವೀರೇಂದ್ರ ಸೆಹ್ವಾಗ್ ಎಂದು ಭಾವಿಸುತ್ತಾರೆ. ಆದರೆ ವಾಸ್ತವವಾಗಿ ನಾನು ಧೋನಿಯೊಂದಿಗೆ ಆಡಲು ಹೆಚ್ಚು ಇಷ್ಟಪಡುತ್ತೇನೆ, ಅದರಲ್ಲೂ ವಿಶೇಷವಾಗಿ ವೈಟ್-ಬಾಲ್ ಕ್ರಿಕೆಟ್‌ನಲ್ಲಿ. ನಾವಿಬ್ಬರು ಅನೇಕ ದೊಡ್ಡ ಜೊತೆಯಾಟವನ್ನು ಹಂಚಿಕೊಂಡಿದ್ದೇವೆ ಎಂದು ಗಂಭೀರ್ ಹೇಳಿದ್ದಾರೆ.
109 ರನ್‌ಗಳ ಐತಿಹಾಸಿಕ ಜೊತೆಯಾಟ
ಟೀಂ ಇಂಡಿಯಾ ಅಭಿಮಾನಿಗಳು ಗೌತಮ್ ಗಂಭೀರ್ ಯಾವಾಗಲೂ ಧೋನಿ ವಿರುದ್ಧ ಮಾತನಾಡುತ್ತಾರೆ ಎಂದು ಆರೋಪಿಸುತ್ತಾರೆ. ಆದರೆ ಇದೀಗ ಗಂಭೀರ್ ಈ ಬಾರಿ ಎಂಎಸ್ ಧೋನಿ ಅವರನ್ನು ತಮ್ಮ ನೆಚ್ಚಿನ ಬ್ಯಾಟಿಂಗ್ ಪಾಲುದಾರ ಎಂದು ಕರೆಯುವ ಮೂಲಕ ಎಲ್ಲರ ಬಾಯಿ ಮುಚ್ಚಿಸಿದ್ದಾರೆ. ನಿಜ ಹೇಳಬೇಕೆಂದರೆ ಟೀಂ ಇಂಡಿಯಾ 2011 ರ ಏಕದಿನ ವಿಶ್ವಕಪ್ ಗೆಲ್ಲಲು ಈ ಇಬ್ಬರ ಆಟವೇ ಪ್ರಮುಖ ಕಾರಣವಾಗಿತ್ತು. 2011ರ ವಿಶ್ವಕಪ್‌ನ ಫೈನಲ್‌ನಲ್ಲಿ ಗಂಭೀರ್ ಮತ್ತು ಧೋನಿ 109 ರನ್‌ಗಳ ಐತಿಹಾಸಿಕ ಜೊತೆಯಾಟವನ್ನು ಮಾಡಿದ್ದರು. ಈ ಜೊತೆಯಾಟದಿಂದಾಗಿ ಭಾರತ, ಶ್ರೀಲಂಕಾ ವಿರುದ್ಧ ಪ್ರಶಸ್ತಿ ಗೆದ್ದುಕೊಂಡಿತು. ಇದರಲ್ಲಿ ಗೌತಮ್ ಗಂಭೀರ್ 97 ರನ್ ಮತ್ತು ಧೋನಿ ಔಟಾಗದೆ 91 ರನ್ ಬಾರಿಸಿದ್ದರು.
ಗಂಭೀರ್ ಮತ್ತು ಧೋನಿ ಜೋಡಿಯ ಸಾಧನೆ
ವಾಸ್ತವವಾಗಿ ಗಂಭೀರ್ ಹೀಗೆ ಹೇಳುತ್ತಿರುವುದಕ್ಕೆ ಕಾರಣ ಅವರ ಮತ್ತು ಧೋನಿ ನಡುವಿನ ಜೊತೆಯಾಟ. ಭಾರತದ ಪರ 1000 ಅಥವಾ ಅದಕ್ಕಿಂತ ಹೆಚ್ಚು ರನ್‌ಗಳನ್ನು ಗಳಿಸಿದ ಬ್ಯಾಟ್ಸ್‌ಮನ್‌ಗಳಲ್ಲಿ ಗಂಭೀರ್ ಮತ್ತು ಧೋನಿ ಮೂರನೇ ಅತಿ ಹೆಚ್ಚು ಸರಾಸರಿ ಹೊಂದಿರುವ ಜೋಡಿಯಾಗಿದೆ. ಇವರಿಬ್ಬರೂ 18 ಏಕದಿನ ಇನ್ನಿಂಗ್ಸ್‌ಗಳಲ್ಲಿ 74.70 ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. ರೋಹಿತ್-ರಾಹುಲ್ ಮತ್ತು ಗವಾಸ್ಕರ್-ಅಜರುದ್ದೀನ್ ಜೋಡಿ ಮಾತ್ರ ಜೊತೆಯಾಟದಲ್ಲಿ ಉತ್ತಮ ದಾಖಲೆಗಳನ್ನು ಹೊಂದಿದೆ. ರೋಹಿತ್-ರಾಹುಲ್ ತಲಾ 16 ಇನ್ನಿಂಗ್ಸ್‌ಗಳಲ್ಲಿ 83.53 ಸರಾಸರಿಯಲ್ಲಿ 1000 ಪ್ಲಸ್ ರನ್ ಗಳಿಸಿದ್ದಾರೆ ಮತ್ತು ಗವಾಸ್ಕರ್-ಅಜರುದ್ದೀನ್ ಜೋಡಿ 78ರ ಸರಾಸರಿಯಲ್ಲಿ ರನ್ ಗಳಿಸಿದ್ದಾರೆ.
ಈ ಹಿಂದೆಯೂ ಹೊಗಳಿದ್ದ ಗಂಭೀರ್
ಎಂಎಸ್ ಧೋನಿ ಅವರನ್ನು ಗೌತಮ್ ಗಂಭೀರ್ ಹೊಗಳಿದ್ದು ಇದೇ ಮೊದಲಲ್ಲ. ಈ ಹಿಂದೆ ಅವರು ಎಂಎಸ್ ಧೋನಿ ತಂಡಕ್ಕಾಗಿ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ರನ್‌ಗಳನ್ನು ಪಣಕ್ಕಿಟ್ಟಿದ್ದಾರೆ ಎಂದು ಹಲವು ಬಾರಿ ಹೇಳಿದ್ದಾರೆ. ಜನರು ಯಾವಾಗಲೂ ಎಂಎಸ್ ಧೋನಿ ಮತ್ತು ನಾಯಕನಾಗಿ ಅವರ ಸಾಧನೆಗಳ ಬಗ್ಗೆ ಮಾತನಾಡುತ್ತಾರೆ, ಇದು ಸಂಪೂರ್ಣವಾಗಿ ನಿಜ. ಆದರೆ ನಾಯಕತ್ವದಿಂದಾಗಿ ಅವರು ತಮ್ಮೊಳಗಿನ ಬ್ಯಾಟ್ಸ್‌ಮನ್‌ನನ್ನು ತ್ಯಾಗ ಮಾಡಬೇಕಾಯಿತು. ಒಂದು ವೇಳೆ ಎಂಎಸ್ ಧೋನಿ ಅಗ್ರ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ್ದರೆ ಅಥವಾ ಟಾಪ್ 3ನೇ ಕ್ರಮಾಂಕದಲ್ಲಿ ಆಡಿದ್ದರೆ ಅನೇಕ ಏಕದಿನ ದಾಖಲೆಗಳನ್ನು ಮುರಿಯಬಹುದಿತ್ತು ಎಂದು ನನಗೆ ಖಾತ್ರಿಯಿದೆ ಎಂದು ಗಂಭೀರ್ ಈ ಹಿಂದೆ ಹೇಳಿದ್ದರು.