ವಿರೋಧ ವ್ಯಕ್ತವಾಗುತ್ತಿದ್ದಂತೆ ಕಂಬಳದಿಂದ ಬ್ರಿಜ್ ಭೂಷಣ್ ಆಹ್ವಾನ ರದ್ದು

ಮಂಗಳೂರು, ನ.21: ಇದೇ ಮೊದಲ ಬಾರಿಗೆ ನಡೆಯಲಿರುವ ಕರಾವಳಿಯ ಪ್ರಸಿದ್ಧ ಕಂಬಳಕ್ಕೆರಾಜ್ಯ ರಾಜಧಾನಿ ಬೆಂಗಳೂರು ಸಜ್ಜಾಗುತ್ತಿದೆ. ಆದರೆ ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಅವರನ್ನು ಆಹ್ವಾನಿಸಲಾಗಿದ್ದು ಈ ವಿಚಾರ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಕುಸ್ತಿ ಆಟಗಾರರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಎದುರಿಸುತ್ತಿರುವ ಬ್ರಿಜ್ ಭೂಷಣ್ ಅವರನ್ನು ಇಂತಹ ಕಾರ್ಯಕ್ರಮಕ್ಕೆ ಕರೆದಿರುವುದು ಎಷ್ಟು ಸರಿ ಎಂಬ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆಗಳಾಗುತ್ತಿದ್ದವು. ಸದ್ಯ ಈಗ ತಾವು ಕಂಬಳಕ್ಕೆ ಅತಿಥಿಯಾಗಿ ಬರಲ್ಲ ಎಂದು ಬ್ರಿಜ್ ಭೂಷಣ್ ಪತ್ರ ಬರೆದು ತಿಳಿಸಿದ್ದಾರೆ.

ನವೆಂಬರ್ 25 ಮತ್ತು 26ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಂಬಳ ಕಾರ್ಯಕ್ರಮ ಏರ್ಪಡಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಭಾರತದ ಕುಸ್ತಿ ಫೆಡರೇಷನ್ ಮಾಜಿ ಆಧ್ಯಕ್ಷ ಬ್ರಿಜ್ ಭೂಷಣ್ ಅವರನ್ನು ಆಹ್ವಾನಿಸಲಾಗಿತ್ತು. ಅತಿಥಿಯಾಗಿ ಆಹ್ವಾನ ನೀಡಲು ಕುಸ್ತಿ ಅಸೋಸಿಯೇಷನ್ ಹಾಗೂ ಸಿದ್ದಿ ಜನಾಂಗ ಮನವಿ ಮಾಡಿತ್ತು. ಮನವಿ ಮೇರೆಗೆ ಕಂಬಳ ಸಮಿತಿ ಆಹ್ವಾನ ನೀಡಿತ್ತು. ಈ ಸಂಬಂಧ ವಿರೋಧ ಹಿನ್ನಲೆ ಬ್ರಿಜ್ ಭೂಷಣ್ ಅವರಿಗೆ ಕರೆ ಮಾಡಿ ಕಂಬಳ ಸಮಿತಿ ವಿವರ ನೀಡಿದ್ದು ತಾವು ಕಂಬಳಕ್ಕೆ ಅತಿಥಿಯಾಗಿ ಬರಲ್ಲ ಎಂದು ಪತ್ರ ಬರೆದು ಬ್ರಿಜ್ ಭೂಷಣ್ ಶುಭಾಶಯ ತಿಳಿಸಿದ್ದಾರೆ. ಈ ಬಗ್ಗೆ ಕಂಬಳ ಸಮಿತಿ ಮುಖ್ಯಸ್ಥ ಅಶೋಕ್ ರೈ ಟಿವಿ9ಗೆ ಮಾಹಿತಿ‌ ನೀಡಿದ್ದಾರೆ. ವಿರೋಧ ವ್ಯಕ್ತವಾದ ಹಿನ್ನಲೆ ಬ್ರಿಜ್ ಅವರ ಆಹ್ವಾನ ರದ್ದುಗೊಳಿಸಿದ್ದೇವೆ ಎಂದು ತಿಳಿಸಿದ್ದಾರೆ.

ಈ ವೇಳೆ ಮಾತನಾಡಿದ ಶಾಸಕ ಹಾಗೂ ಬೆಂಗಳೂರು ಕಂಬಳ ಸಮಿತಿ ಅಧ್ಯಕ್ಷ ಅಶೋಕ್ ರೈ ಅವರು, ಕಂಬಳ ಒಂದು ಕ್ರೀಡೆ ಇದು ದೊಡ್ಡ ಕಾರ್ಯಕ್ರಮ ಆಗಿದೆ. ಇದಕ್ಕಾಗಿ ಬೇರೆ ಬೇರೆ ಸಂಘಟನೆಯವರು ಬಂದು ಅನೇಕ ಮನವಿ ಮಾಡ್ತಾರೆ. ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಬಂದು ವೇದಿಕೆಗೆ ಅವರ ಹೆಸರನ್ನು ಇಡಲು ಹೇಳ್ತಾರೆ. ಸಿದ್ದಿ ಜನಾಂಗದವರು ಬಂದು ಕೋರಿದ್ರು. ಆದ್ರೆ ಅವರು ಮೊನ್ನೆಯೇ ನಾನು ಕಾರ್ಯಕ್ರಮಕ್ಕೆ ಬರೋದಿಲ್ಲ ಅಂತ ಹೇಳಿದ್ದಾರೆ. ಆದರೆ ಇನ್ವಿಟೇಷನ್ ನಲ್ಲಿ ಅವರ ಹೆಸರಿದೆ. ಅವರು ಕಂಬಳಕ್ಕೆ ಬರೋದಿಲ್ಲ. ಪತ್ರಿಕೆಯನ್ನು ಕೂಡ ನಾವು ಬದಲು ಮಾಡುತ್ತೇವೆ ಎಂದರು.

ಅವರ ಸೇವೆಯನ್ನು ಪರಿಗಣಿಸಿ ಕಂಬಳಕ್ಕೆ ಆಹ್ವಾನ ನೀಡಲಾಗಿತ್ತು

ಇನ್ನು ವಿವಾದದ ಬೆನ್ನಲ್ಲೇ ಆಹ್ವಾನ ಪತ್ರಿಕೆಯಿಂದ ಬ್ರಿಜ್ ಭೂಷಣ್ ಹೆಸರು ಕೈ ಬಿಡಲು ನಿರ್ಧಾರ ಮಾಡಲಾಗಿದ್ದು ಕಡೆ ಘಳಿಗೆಯಲ್ಲಿ ಆಹ್ವಾನ ಪತ್ರಿಕೆ ಬದಲು ಮಾಡಲಾಗುತ್ತಿದೆ. ಬ್ರಿಜ್ ಭೂಷಣ್ ಕುಡುಬಿ ಮತ್ತು ಸಿದ್ದಿ ಜನಾಂಗದವರಿಗೆ ಗೋವಾದಲ್ಲಿ ಕುಸ್ತಿ ತರಬೇತಿ ನೀಡಿದ್ದರು. ಈ ಸೇವೆಯನ್ನು ಪರಿಗಣಿಸಿ ಕಂಬಳಕ್ಕೆ ಆಹ್ವಾನ ನೀಡಲಾಗಿತ್ತು. ಆದರೆ ಬ್ರಿಜ್ ಭೂಷಣ್ ಕಂಬಳಕ್ಕೆ ಆಗಮಿಸುವ ಬಗ್ಗೆ ಕನ್ಫರ್ಮೇಷನ್ ನೀಡಿರಲಿಲ್ಲ ಎಂದು ಅಶೋಕ್ ರೈ ತಿಳಿಸಿದರು.

ಬೆಂಗಳೂರು ತುಳುಕೂಟಕ್ಕೆ 50ವರ್ಷ ತುಂಬಿದ ಹಿನ್ನೆಲೆಯಲ್ಲಿ ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿರುವ ಬೆಂಗಳೂರು ತುಳುಕೂಟ  ಮೊಟ್ಟಮೊದಲು ಬಾರಿಗೆ ರಾಜಾಧಾನಿಯಲ್ಲಿ ಕಂಬಳವನ್ನ ನಡೆಸುತ್ತಿರುವ ಹಿನ್ನೆಲೆ ಅರಮನೆ ಮೈದಾನದ ಗೇಟ್ 5ರಲ್ಲಿ 151 ಮೀ ಉದ್ದದ ಕಂಬಳ‌ದ ಕೆರೆ ಅಂದರೆ ಟ್ರ್ಯಾಕ್ ನಿರ್ಮಾಣವಾಗಿದೆ. ಬಹಳ ವಿಶೇಷ ಎಂದರೆ ಇದು ಅತಿ ಉದ್ದದ ಟ್ರ್ಯಾಕ್ ‌ಗಳಲ್ಲಿ ಒಂದಾಗಿದ್ದು, ಶೇಕಡ 100 ರಷ್ಟು ಕೆರೆ ಕೆಲಸ ಪೂರ್ಣವಾಗಿದೆ. ಇನ್ನೂ ಕಂಬಳಕ್ಕೆ ಈಗಾಗಲೇ ಸರ್ಕಾರ ಅನುಮತಿ ನೀಡಿದ್ದು, ಇದೇ ತಿಂಗಳ 25 ಹಾಗೂ 26 ರಂದು ಬೆಂಗಳೂರು ಕಂಬಳ‌ ನಡೆಯಲಿದೆ. 8 ಸಾವಿರಕ್ಕೂ ಅಧಿಕ ಜನರು ಕುಳಿತುಕೊಂಡು ನೋಡಲು ಅವಕಾಶ ಮಾಡಿಕೊಡಲಾಗಿದೆ. 150 ಕೌಂಟರ್ ಗಳನ್ನ ತೆರೆಯಲಾಗುತ್ತೆ. 48 ಗಂಟೆಗಳ ಕಾಲ ನಡೆಯಲಿರುವ ಈ ಸ್ಪರ್ಧೆಯಲ್ಲಿ 150 ರಿಂದ 160 ಜೊತೆ ಕೋಣಗಳು ಭಾಗಿಯಾಗಲಿವೆ. 130 ಜೊತೆ ಕೋಣ ರಿಜಿಸ್ಟರ್ ಆಗಿದ್ದು ಅದರಲ್ಲಿ ಆಯ್ಕೆ ಆದ ಕೋಣ ತರಲು ಯೋಜನೆ ರೂಪಿಸಲಾಗಿದೆ. ಎಲ್ಲ ಪಕ್ಷದವರು ಜೊತೆಗೆ ಸಾಂಸ್ಕೃತಿಕ ಹಾಗೂ ಕಂಬಳ ಎರಡು ಭಾಗ ಮಾಡಲಾಗಿದೆ . ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಹಾಲಿವುಡ್, ಬಾಲಿವುಡ್ ನ ಖ್ಯಾತ ನಟ ನಟಿಯರು ಬರುವವರಿದ್ದು ಕಂಬಳ ಯಶಸ್ವಿಯಾಗಲಿದೆ.