ಬೆಂಗಳೂರು ನ.21: ರಾಜ್ಯ ರಾಜಕೀಯದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಮಧ್ಯೆ ವಾಗ್ಯುದ್ದ ನಡೆದಿದೆ. “ಡಿಕೆ ಶಿವಕುಮಾರ್ ಟೆಂಟಲ್ಲಿ ಬ್ಲೂ ಫಿಲಂ ತೋರಿಸಿಕೊಂಡು ಜೀವನ ಮಾಡಿಕೊಂಡು ಬಂದವನು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ಡಿ ಕುಮಾರಸ್ವಾಮಿ ಆರೋಪ ಮಾಡಿದ್ದರು. ಇದಕ್ಕೆ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿ “ಆರೋಪ ಸಾಬೀತು ಮಾಡಿದರೇ ರಾಜಕೀಯ ನಿವೃತ್ತಿ ಪಡೆಯುತ್ತೇನೆ” ಎಂದು ಹೇಳಿದ್ದರು. ಈ ವಿಚಾರವಾಗಿ ಇಬ್ಬರ ನಡುವೆ ಮಾತಿನ ಗುದ್ದಾಟ ನಡೆದಿದ್ದು ಇದೀಗ ಹೆಚ್ಡಿ ಕುಮಾರಸ್ವಾಮಿ ಕೊಳ್ಳೇ ಹೊಡೆದಾಗಿದೆ, ಡಿಕೆ ಶಿವಕುಮಾರ್ ಜೀವನ ಏನು ಅಂತಾ ನನಗೆ ಗೊತ್ತಿದೆ ಎಂದು ತಿರುಗೇಟು ನೀಡಿದರು.
ರಾಮನಗರ ತಾಲೂಕಿನ ದಾಸೇಗೌಡನದೊಡ್ಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಹೆಚ್ಡಿ ಕುಮಾರಸ್ವಾಮಿ, ದೇಶದ ವ್ಯವಸ್ಥೆಯಲ್ಲಿ ಕಳ್ಳರೂ ಒಂದೇ, ಸುಳ್ಳರೂ ಒಂದೇ. ಭಗವಂತ ಇದ್ದಾನೆ ಅಂತಿಮಾಗಿ ಎಲ್ಲವನ್ನೂ ತೀರ್ಮಾನಿಸುತ್ತಾನೆ. ಹಣದ ಮದ ಇದ್ದವರು ಎಲ್ಲವನ್ನೂ ಕೊಳ್ಳಬಹುದು ಅಂದುಕೊಂಡಿದ್ದಾರೆ ಎಂದು ವಾಗ್ದಾಳಿ ಮಾಡಿದರು.
ಪೋಸ್ಟರ್ ಅಂಟಿಸಿದ ವಿಚಾರವಾಗಿ ಮಾತನಾಡಿದ ಅವರು ಅಂಟಿಸಿಕೊಳ್ಳಲಿ ಯಾರು ಬೇಡ ಅಂತಾರೆ, ಏನೂ ಮಾಡಲು ಆಗಲ್ಲ. ಸರ್ಕಾರದ ತಪ್ಪುಗಳನ್ನು ಏಕಾಂಗಿಯಾಗಿ ಪ್ರಶ್ನೆ ಮಾಡೋದು ನಾನು ಒಬ್ಬನೆ. ಎಲ್ಲರೂ ಮೌನಕ್ಕೆ ಶರಣಾಗಿದ್ದಾಗ ಧ್ವನಿ ಎತ್ತಿದ್ದು ನಾನು. ಅಕ್ರಮ ಸಂಪತ್ತು, ವರ್ಗಾವಣೆ ದಂಧೆ ಬಗ್ಗೆ ಧ್ವನಿ ಎತ್ತಿದ್ದು ನಾನು. ನನ್ನ ಆರೋಪಗಳಿಗೆ ಸರ್ಕಾರಕ್ಕೆ ಒಂದು ಉತ್ತರ ನೀಡಲು ಆಗಿಲ್ಲ. ಅಕ್ರಮದ ಬಗ್ಗೆ ಚರ್ಚೆ ಮಾಡಿದಾಗ ನನ್ನ ಪೋಟೋಗಳನ್ನ ಹಾಕಿದ್ದಾರೆ. ನನ್ನ ಜೀವನ ತೆರೆದ ಪುಸ್ತಕ, ಯಾರು ಏನೂ ಮಾಡಲು ಆಗುವುದಿಲ್ಲ ಎಂದು ಹೇಳಿದರು.
ಗ್ಯಾರಂಟಿ ಯೋಜನೆಗಳ ಬಗ್ಗೆ ಜಾಹೀರಾತು ನೀಡಿ ಓಡಾಡುತ್ತಿದ್ದಾರೆ. ಶಕ್ತಿ ಯೋಜನೆ ಜಾರಿ ಮಾಡಿದ್ದಾರೆ ಆದರೆ ಸೂಕ್ತ ಬಸ್ ವ್ಯವಸ್ಥೆ ಮಾಡಿಲ್ಲ. ನುಡಿದಂತೆ ನಡೆದಿದ್ದೇವೆ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಸರ್ಕಾರ ಒಂದು ಕಡೆ ಗ್ಯಾರಂಟಿಗಳ ಬಗ್ಗೆ ಪ್ರಚಾರ ಮಾಡುತ್ತಿದೆ. ಮತ್ತೊಂದು ಕಡೆ ನನ್ನ ಫೋಟೋಗಳನ್ನು ಹಾಕಿಕೊಂಡಿದ್ದಾರೆ. ಜನ ತಿರುಗಿಬೀಳುವವರೆಗೆ ಈ ಸರ್ಕಾರದವರು ತಿರುಗಾಡುತ್ತಿರುತ್ತಾರೆ ಎಂದರು.
ರಾಜ್ಯದಲ್ಲಿ ಬರಗಾಲ ಆವರಿಸಿದ್ದು, ಜಿಲ್ಲಾಧಿಕಾರಿಗಳ ಕಚೇರಿಗಳಲ್ಲಿ 800ಕೋಟಿ ಇಟ್ಟಿದ್ದೀವಿ ಅಂತಾರೆ. ರೈತರಿಗೆ ಪರಿಹಾರ ನೀಡದೇ ಯಾವ ಉದ್ದೇಶಕ್ಕೆ ಹಣ ಇಟ್ಟಿದ್ದೀರಿ. ಸರ್ಕಾರದ ಮಾಹಿತಿ ಪ್ರಕಾರವೇ 33ಸಾವಿರ ಕೋಟಿ ರೈತರ ಬೆಳೆ ನಷ್ಟ ಆಗಿದೆ. ದೀಪಾವಳಿ ಕೆಲವು ಕಡೆ ಮಳೆ ಆಗಿದೆ. ಆದರೆ ಬಹುತೇಕ ಕಡೆ ಮೇವಿನ ಕೊರತೆ ಇದೆ. ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಫಸಲು ಹಾಳಾಗಿದೆ. ಹಿಂದೆ ಬೇರೆ ದೇಶಗಳಿಗೆ ಆಹಾರ ಪದಾರ್ಥ ರಫ್ತು ಮಾಡ್ತಿದ್ವಿ. ಈಗ ನಮ್ಮಲ್ಲೇ ಆಹಾರದ ಕೊರತೆ ಉಂಟಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಫಸಲು ಭೀಮಾ ಯೋಜನೆ ಅಡಿ ರೈತರಿಗೆ ಪರಿಹಾರ ಕೊಡುವುದಕ್ಕಿಂತ ಹೆಚ್ಚಾಗಿ ಖಾಸಗಿ ಕಂಪೆನಿಗಳಿಗೆ ಹೆಚ್ಚಿನ ಲಾಭ ಆಗುತ್ತಿದೆ. ಬೆಳೆ ಪರಿಹಾರದ ನಷ್ಟವನ್ನ ಇಲ್ಲಿವರೆಗೂ ಸರ್ಕಾರ ಕೊಟ್ಟಿಲ್ಲ. ಅದೇನೋ ನುಡಿದಂತೆ ನಡೆದಿದ್ದೇವೆ ಅಂತಾರೆ. ಇಲ್ಲಿ ಶಾಲಾ ಮಕ್ಕಳಿಗೆ ಬಸ್ ವ್ಯವಸ್ಥೆಯೇ ಇಲ್ಲ. ಮಕ್ಕಳ ಭವಿಷ್ಯದ ಬಸ್ಸು ಎಲ್ಲಿದೆ. ಇದು ಈ ಸರ್ಕಾರ ನುಡಿದಂತೆ ನಡೆದಿರುವುದಾ.? ಮಕ್ಕಳು ಜೆಸಿಬಿಯಲ್ಲಿ ಶಾಲೆಗೆ ಹೋಗುತ್ತಿದ್ದಾರೆ. ನಿತ್ಯ ಕಲರ್ ಫುಲ್ ಫೋಟೊ ಹಾಕೊಂಡು ಫೋಸ್ ಕೊಡ್ತಾರೆ. ಸರ್ಕಾರದ ಅಕ್ರಮಗಳ ಪ್ರಶ್ನೆ ಮಾಡಿದ್ರೆ ನನ್ನ ವಿರುದ್ಧ ಪೋಸ್ಟರ್ ಹಾಕುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯಕ್ಕೆ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಜನರ ಕಷ್ಟ ಸುಖ ನೋಡಲು ಬರಲಿಲ್ಲ. ಈಗ ಜನರ ಹಣ ಲೂಟಿ ಮಾಡುವ ನಿಗಮ ಮಂಡಳಿ ನೇಮಕ ಮಾಡಲು ಬರುತ್ತಿದ್ದಾರೆ. ನಿಗಮ ಮಂಡಳಿ ರಚನೆ ಮಾಡಿ ಜನರ ಕಷ್ಟ ಕೇಳುತ್ತೀರಾ.? ಸಿಎಂ ಕ್ಷೇತ್ರದಲ್ಲಿ ಶಾಲಾ ಕಟ್ಟಡ ಕಟ್ಟಲು ದುಡಿಲ್ಲ ಅಂತ ಸಿಎಸ್ಆರ್ ಫಂಡ್ ಕೇಳುತ್ತಿದ್ದೀರಾ.? ಸಿಎಂ ಕ್ಷೇತ್ರದಲ್ಲಿ 2.5 ಲಕ್ಷಕ್ಕೆ ಯಾವ್ದೋ ಖಾಸಗಿ ಕಂಪನಿ ವಿರುದ್ಧ ಅರ್ಜಿ ಇಡ್ಕೊಂಡು ನಿಂತಿದ್ದಾರೆ. ಸಿಎಂ ಮನೆಗೆ ನವೀಕರಣ ಮಾಡಲು ಕೋಟ್ಯಾಂತರ ಹಣ ಖರ್ಚು ಮಾಡುತ್ತೀರಿ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.
ಹತಾಶರಾಗಿ ಹೆಚ್.ಡಿ.ಕುಮಾರಸ್ವಾಮಿ ಮಾತನಾಡ್ತಿದ್ದಾರೆ: ಡಿಕೆ ಶಿವಕುಮಾರ್
ಬ್ಲೂ ಫಿಲಂ ಕನೆಕ್ಷನ್ ಆರೋಪಕ್ಕೆ ಸಂಬಂಧಿಸಿದಂತೆ ಅಂತಹದ್ದೇನಾದರೂ ಕೆಲಸ ಮಾಡಿದ್ದರೇ ರಾಜಕೀಯ ನಿವೃತ್ತಿ ಆಗುತ್ತೇನೆ. ಪಾಪ ಹತಾಶರಾಗಿ ಹೆಚ್.ಡಿ.ಕುಮಾರಸ್ವಾಮಿ ಮಾತನಾಡುತ್ತಿದ್ದಾರೆ. ನನ್ನ ವಿರುದ್ಧ ಅವರ ತಂದೆ ಸ್ಪರ್ಧಿಸಿದ್ದರಲ್ಲ ಆಗ ಏಕೆ ಮಾತಾಡಲಿಲ್ಲ. 1.20 ಲಕ್ಷ ಮತಗಳಿಂದ ಕನಕಪುರ ಜನರು ನನ್ನನ್ನು ಗೆಲ್ಲಿಸಿದ್ದಾರೆ. ಒಬ್ಬ ಮಾಜಿ ಸಿಎಂ ಆಗಿ ಮಾತನಾಡುವುದಕ್ಕೆ ಘನತೆ ಇರಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವಾಗ್ದಾಳಿ ಮಾಡಿದರು.