ರೈತರಿಗೆ ಆಶಾದಾಯಕವಾದ ಹೊಸ ಅನಾನಸ್ ತಳಿ: ಬನವಾಸಿ ರೈತರ ಹೊಲದಲ್ಲಿ ಪ್ರಯೋಗ

ಬನವಾಸಿ: ಅನಾನಸ್ ಬೆಳೆಗೆ ಪ್ರಸಿದ್ಧವಾದ ಬನವಾಸಿಯಲ್ಲಿ ಫಿಲಿಫೈನ್ಸ್ ಮೂಲದ ‘ಎಂ.ಡಿ.–2’ ತಳಿ ಬೆಳೆಸಿ, ಪರಿಚಯಿಸುವ ಪ್ರಾಯೋಗಿಕ ಯೋಜನೆಯನ್ನು ತೋಟಗಾರಿಕಾ ಇಲಾಖೆ ಕೈಗೆತ್ತಿಕೊಂಡಿದೆ. ಬನವಾಸಿ ಹೋಬಳಿಯ 11 ರೈತರ ಹೊಲದಲ್ಲಿ ಈ ತಳಿ ಬೆಳೆದು ಯಶಸ್ವಿಯಾದರೆ ಜಿಲ್ಲೆಯ ಉಳಿದ ರೈತರಿಗೂ ಶಿಫಾರಸ್ಸು ಮಾಡಲು ಇಲಾಖೆ ಯೋಜಿಸಿದೆ.

ಸದ್ಯ ಬನವಾಸಿ ಭಾಗದಲ್ಲಿ ‘ರಾಜಾ’ ಮತ್ತು ‘ಗೇಂಟ್–ಕ್ಯೂ’ ತಳಿಯ ಅನಾನಸ್‌ಗಳನ್ನು ವ್ಯಾಪಕ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಉತ್ತರ ಭಾರತದ ದೆಹಲಿ, ಹರಿಯಾಣಕ್ಕೆ ಇಲ್ಲಿಂದ ಹಣ್ಣುಗಳು ಪೂರೈಕೆ ಆಗುತ್ತಿದೆ.
ಎಂ.ಡಿ.–2 ತಳಿಯ ಅನಾನಸ್ ದೇಶದ ಅಸ್ಸಾಂ ಭಾಗದಲ್ಲಿ ಬೆಳೆಯಲಾಗುತ್ತಿದೆ. ಸಾಮಾನ್ಯ ಅನಾನಸ್‌ಗಳು ಸರಾಸರಿ 2 ಕೆ.ಜಿ. ತೂಗಿದರೆ, ಈ ತಳಿಯ ಹಣ್ಣುಗಳು ಎರಡೂವರೆ ಕೆ.ಜಿ ತೂಕದವರೆಗೆ ಬೆಳೆಯುತ್ತವೆ. ಇದು ರೈತರಿಗೆ ಲಾಭದಾಯಕವಾಗಲಿದೆ ಎಂದು ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಸತೀಶ್ ಹೆಗಡೆ ಹೇಳಿದರು.

ಬನವಾಸಿ ಭಾಗದಲ್ಲಿ ಸದ್ಯ ಬೆಳೆಯುವ ಅನಾನಸ್‌ಗಳಲ್ಲಿ ಬಹುಪಾಲು ಉತ್ತರ ಭಾರತದ ರಾಜ್ಯಗಳಿಗೆ ರಫ್ತಾಗುತ್ತಿದೆ. ಅಲ್ಲಿ ಅವುಗಳನ್ನು ಸಂಸ್ಕರಿಸಿ ಬೇರೆ ಬೇರೆ ಉತ್ಪನ್ನಗಳಾಗಿ ಬಳಸಲಾಗುತ್ತಿದೆ. ಎಂ.ಡಿ.–2 ತಳಿಯ ಅನಾನಸ್‌ಗಳಿಂದ ಹಲವು ಉತ್ಪನ್ನ ತಯಾರಿಸಲು ಮತ್ತು ನೇರವಾಗಿ ಸೇವಿಸಲು ಸಾಧ್ಯವಿದೆ. ಅಲ್ಲದೆ ಈ ಜಾತಿಯ ಹಣ್ಣುಗಳು ಹೆಚ್ಚು ಸಿಹಿ ಅಂಶವನ್ನು ಒಳಗೊಂಡಿರುವುದರಿಂದ ಬೇಡಿಕೆಯೂ ಹೆಚ್ಚಿದೆ.

ಕೋವಿಡ್ ಸಂದರ್ಭದಲ್ಲಿ ಅನಾನಸ್ ಬೆಳೆಗಾರರು ಹೆಚ್ಚು ನಷ್ಟ ಅನುಭವಿಸಿದ್ದರು. ಹಣ್ಣುಗಳು ಹೊರರಾಜ್ಯಕ್ಕೆ ರಫ್ತಾಗಲು ಅಡ್ಡಿಯಾಗಿತ್ತು. ಸ್ಥಳೀಯವಾಗಿ ಬೇಡಿಕೆ ಇಲ್ಲದಿರುವುದು ಸಮಸ್ಯೆಗೆ ಕಾರಣವಾಗಿತ್ತು. ಹೀಗಾಗಿ ಎಂ.ಡಿ.–2 ತಳಿಗೆ ಆದ್ಯತೆ ನೀಡುವ ಪ್ರಯತ್ನ ನಡೆಯುತ್ತಿದ್ದು, ಈ ಹಣ್ಣುಗಳಿಗೆ ಸ್ಥಳೀಯವಾಗಿಯೂ ಮಾರುಕಟ್ಟೆ ಕಂಡುಕೊಳ್ಳಲು ಸಾಧ್ಯವಾಗಲಿದೆ.