2023ರ ವಿಶ್ವಕಪ್ ಫೈನಲ್ ಪಂದ್ಯ ಶುರುವಾಗಿದೆ. ವಿಶ್ವಕಪ್ ಟ್ರೋಫಿಗಾಗಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಈ ಟೂರ್ನಿಯಲ್ಲಿ ಅಜೇಯವಾಗಿ ಫೈನಲ್‌ಗೆ ಲಗ್ಗೆ ಇಟ್ಟಿರುವ ಟೀಮ್ ಇಂಡಿಯಾನೇ ಕಪ್ ಗೆಲ್ಲೋದ್ರಲ್ಲಿ ಫೇವರೆಟ್ ತಂಡವಾಗಿದೆ. ಸತತ 10 ಪಂದ್ಯಗಳನ್ನ ಗೆಲ್ಲುವ ಮೂಲಕ ವಿಜಯಪಾತಾಕೆ ಹಾರಿಸಿದೆ. ಕ್ರಿಕೆಟ್ ದಿಗ್ಗಜರು ಸೇರಿದಂತೆ ಸೆಲಿಬ್ರಿಟಿಗಳು ಭಾರತ ತಂಡಕ್ಕೆ ಶುಭಕೋರಿದ್ದಾರೆ. ಅದೇ ರೀತಿತಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ತಮ್ಮ ಶುಭ ಹಾರೈಸಿದ್ದಾರೆ.
ಈ ಕುರಿತಾಗಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ‘ಭಾರತ ತಂಡಕ್ಕೆ ಆಲ್ ದಿ ಬೆಸ್ಟ್. 140 ಕೋಟಿ ಭಾರತೀಯರು ನಿಮ್ಮನ್ನು ಹುರಿದುಂಬಿಸುತ್ತಿದ್ದಾರೆ. ನೀವು ಪ್ರಕಾಶಮಾನವಾಗಿ ಹೊಳೆಯಲಿ, ಚೆನ್ನಾಗಿ ಆಡಲಿ ಮತ್ತು ಕ್ರೀಡಾ ಮನೋಭಾವವನ್ನು ಎತ್ತಿಹಿಡಿಯಿರಿ’ ಬರೆದುಕೊಂಡಿದ್ದಾರೆ
ಫೈನಲ್ ಪಂದ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾದ ಉಪಪ್ರಧಾನಿ ರಿಚರ್ಡ್ ಮಾರ್ಲ್ಸ್ ಭಾಗಿಯಾಗಿದ್ದಾರೆ. ಜೊತೆಗೆ ವಿಶೇಷ ಅಂದರೆ, ಚಾಂಪಿಯನ್ ಕ್ಯಾಪ್ಟನ್ ಎಂ.ಎಸ್.ಧೋನಿ ಸೇರಿದಂತೆ ವಿಶ್ವಕಪ್ ಗೆದ್ದ ತಂಡಗಳ ನಾಯಕರು ಕೂಡ ವಿಶ್ವಕಪ್ ರೋಚಕ ಸಮರಕ್ಕೆ ಸಾಕ್ಷಿಯಾಗಿದ್ದಾರೆ.
ಭಾರತ ತಂಡಕ್ಕೆ ಶುಭಕೋರಿದ ದಿಗ್ಗಜರು
ಪ್ರಧಾನಿ ಮೋದಿಯವರಲ್ಲದೆ, ಹಲವಾರು ರಾಜಕೀಯ ನಾಯಕರು ಟೀಮ್ ಇಂಡಿಯಾಕ್ಕೆ ಶುಭ ಹಾರೈಸಿದ್ದಾರೆ. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ವಿಡಿಯೋ ಸಂದೇಶದಲ್ಲಿ ಭಾರತ ತಂಡಕ್ಕೆ ಶುಭ ಹಾರೈಸಿದ್ದು, ಕ್ರೀಡೆಯು ಯಾವಾಗಲೂ ಲಿಂಗ, ಪ್ರದೇಶ, ಭಾಷೆ, ಧರ್ಮ ಮತ್ತು ವರ್ಗವನ್ನು ಮೀರಿ ದೇಶವನ್ನು ಒಂದುಗೂಡಿಸುತ್ತದೆ ಎಂದು ಹೇಳಿದ್ದಾರೆ.
ಈ ವರ್ಷ ನೀವು ಫೈನಲ್‌ಗೆ ಸಿದ್ಧರಾಗುತ್ತಿದ್ದಂತೆ, ಇಡೀ ದೇಶವು ನಿಮಗಾಗಿ ಕಾತುರರಾಗಿದೆ. ನಾನು ನಿಮಗೆ ನನ್ನ ಶುಭಾಶಯಗಳನ್ನು ತಿಳಿಸುತ್ತಿದ್ದೇನೆ. ಭಾರತ ತಂಡಕ್ಕೆ ಶುಭವಾಗಲಿ. ಜೈ ಹಿಂದ್ ಎಂದು ಹೇಳಿದ್ದಾರೆ.
ವಿಶ್ವಕಪ್‌ನಲ್ಲಿ ಆಡಿದ 10 ಪಂದ್ಯಗಳಲ್ಲಿಯೂ ಗೆದ್ದು ಅಜೇಯ ಓಟ ಮುಂದುವರಿಸಿರುವ ಭಾರತ, ಟ್ರೋಫಿ ಗೆಲ್ಲುವ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಬಲಿಷ್ಠವಾಗಿರುವ ಭಾರತ ಮೂರನೇ ಬಾರಿ ವಿಶ್ವಕಪ್ ಗೆಲ್ಲುವ ವಿಶ್ವಾಸದಲ್ಲಿದೆ.