IND vs AUS Final: ರೋಹಿತ್, ಗಿಲ್ ಔಟ್; 10 ಓವರ್​ಗಳಲ್ಲಿ 80 ರನ್ ಚಚ್ಚಿದ ಭಾರತ

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುತ್ತಿರುವ ಟೀಂ ಇಂಡಿಯಾ ಆರಂಭಿಕ ಆಘಾತ ಎದುರಸಿದೆ. ತಂಡದ ಆರಂಭಿಕರಿಬ್ಬರು ಪೆವಿಲಿಯನ್ ಸೇರಿಕೊಂಡಿದ್ದಾರೆ. ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಿದ್ದ ಯುವ ಬ್ಯಾಟರ್​ ಶುಭ್​ಮನ್ ಗಿಲ್ ಕೇವಲ 4 ರನ್​ಗಳಿಗೆ ತಮ್ಮ ಇನ್ನಿಂಗ್ಸ್ ಮುಗಿಸಿದರೆ, ರೋಹಿತ್ ಶರ್ಮಾ ಕೂಡ ಮತ್ತೊಮ್ಮೆ ತಮ್ಮ ಅರ್ಧಶತಕದಂಚಿನಲ್ಲಿ ಎಡವಿ 47 ರನ್​ಗಳಿಗೆ ವಿಕೆಟ್​ ಒಪ್ಪಿಸಿದ್ದಾರೆ. ಹೀಗಾಗಿ ಟೀಂ ಇಂಡಿಯಾ ಮೊದಲ 10 ಓವರ್​ಗಳಲ್ಲಿ ಅಂದರೆ ಬ್ಯಾಟಿಂಗ್ ಪವರ್​ ಪ್ಲೇನಲ್ಲಿ 2 ವಿಕೆಟ್ ಕಳೆದುಕೊಂಡು 80 ರನ್ ಕಲೆಹಾಕಿದೆ.

4 ಓವರ್​ಗಳಲ್ಲಿ 30 ರನ್

ಎಂದಿನಂತೆ ಅಬ್ಬರದ ಶೈಲಿಯಲ್ಲಿ ಬ್ಯಾಟಿಂಗ್ ಆರಂಭಿಸಿದ ರೋಹಿತ್ ಹೇಜಲ್​ವುಡ್ ಬೌಲ್ ಮಾಡಿದ 2ನೇ ಓವರ್​ನಲ್ಲಿ 2 ಬೌಂಡರಿ ಬಾರಿಸಿದರು. ನಾಲ್ಕನೇ ಓವರ್​ನಲ್ಲಿ ಇನ್ನಿಂಗ್ಸ್​ನ ಮೊದಲ ಸಿಕ್ಸರ್ ಬಾರಿಸಿದ ರೋಹಿತ್ ಈ ಓವರ್​ನಲ್ಲಿ ಇನ್ನೊಂದು ಬೌಂಡರಿ ಕೂಡ ಹೊಡೆದರು. ಹೀಗಾಗಿ 4 ಓವರ್​ಗಳಲ್ಲಿ ಭಾರತ 30 ರನ್ ಕಲೆಹಾಕಿತು.

4 ರನ್​ಗಳಿಗೆ ಸುಸ್ತಾದ ಗಿಲ್

ಆದರೆ ಐದನೇ ಓವರ್ ದಾಳಿಗಿಳಿದ ಮಿಚೆಲ್ ಸ್ಟಾರ್ಕ್​ ಶುಭ್​ಮನ್ ಗಿಲ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಆರಂಭದಿಂದಲೂ ತಾಳ್ಮೆಯ ಆಟಕ್ಕೆ ಮುಂದಾಗಿದ್ದ ಗಿಲ್, ಮಿಡ್ ಆನ್​ನಲ್ಲಿ ಆಡಂ ಝಂಪಾಗೆ ಕ್ಯಾಚಿತ್ತು ಔಟಾದರು. ಗಿಲ್ ವಿಕೆಟ್ ಬಳಿಕ ಬಂದ ವಿರಾಟ್ ಕೊಹ್ಲಿ ಕೂಡ ನಾಯಕ ರೋಹಿತ್​ಗೆ ಉತ್ತಮ ಸಾಥ್ ನೀಡಿದರು. ಹೀಗಾಗಿ ತಂಡ ಮೊದಲ 7 ಓವರ್​ಗಳಲ್ಲಿ 50 ರನ್​ಗಳ ಗಡಿ ದಾಟಿತು. ಈ ವೇಳೆ ಸ್ಟಾರ್ಕ್​ ಓವರ್​ನಲ್ಲಿ ಕೊಹ್ಲಿ ಹ್ಯಾಟ್ರಿಕ್ ಬೌಂಡರಿ ಬಾರಿಸಿದ್ದು, ಮೈದಾನದಲ್ಲಿ ನೆರದಿದ್ದವರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತು.

47 ರನ್​ಗಳಿಗೆ ರೋಹಿತ್ ಔಟ್

ಆದರೆ 10ನೇ ಓವರ್​ ದಾಳಿಗಿಳಿದ ಮ್ಯಾಕ್ಸ್​ವೆಲ್ ಭಾರತಕ್ಕೆ ಬಿಗ್ ಶಾಕ್ ನೀಡಿದರು. ಮ್ಯಾಕ್ಸ್​ವೆಲ್ ಬೌಲ್ ಮಾಡಿದ ಮೊದಲ 3 ಎಸೆತಗಳಲ್ಲಿ 1 ಸಿಕ್ಸರ್ ಹಾಗೂ 1 ಬೌಂಡರಿ ಕಲೆಹಾಕಿದ ರೋಹಿತ್, ನಂತರದ ಎಸೆತದಲ್ಲೂ ಬಿಗ್ ಶಾಟ್ ಆಡುವ ಯತ್ನದಲ್ಲಿ ಟ್ರಾವಿಸ್​ ಹೆಡ್​ಗೆ ಕ್ಯಾಚಿತ್ತು ಔಟಾದರು. ಈ ಮೂಲಕ ರೋಹಿತ್ ಮತ್ತೊಮ್ಮೆ ತಮ್ಮ ಅರ್ಧಶತಕದಂಚಿನಲ್ಲಿ ಎಡವಿದರು.

ಪೆವಿಲಿಯನ್ ಸೇರಿದ ಶ್ರೇಯಸ್

ರೋಹಿತ್ ವಿಕೆಟ್ ಬಳಿಕ ಬಂದ ಶ್ರೇಯಸ್ ಅಯ್ಯರ್ ಕೂಡ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡಿದ್ದಾರೆ. ತಾವು ಎದುರಸಿದ ಮೊದಲ ಎಸೆತದಲ್ಲೇ ಬೌಂಡರಿ ಬಾರಿಸಿದ ಅಯ್ಯರ್, ಬ್ಯಾಟ್​ ಕಮ್ಮಿನ್ಸ್​ ಎಸೆತದ ಮುಂದಿನ ಓವರ್​ನ ಮೊದಲ ಎಸೆತದಲ್ಲೇ ವಿಕೆಟ್ ಕೀಪರ್ ಜೋಸ್​ ಇಂಗ್ಲಿಸ್​ಗೆ ಕ್ಯಾಚಿತ್ತು ಔಟಾದರು. ಈ ಮೂಲಕ ಟೀಂ ಇಂಡಿಯಾ 81 ರನ್ ಕಲೆಹಾಕುವುದರೊಳಗೆ ಪ್ರಮುಖ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.