ಮೋದಿ ಸ್ಟೇಡಿಯಂನಲ್ಲಿ ಕೊಹ್ಲಿಗೆ ಮರೆಯಲಾಗದ ಉಡುಗೊರೆ ಕೊಟ್ಟ ಸಚಿನ್ ತೆಂಡೂಲ್ಕರ್: ಏನದು ನೋಡಿ

ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಅಹ್ಮದಾಬಾದ್‌ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಐಸಿಸಿ ಏಕದಿನ ವಿಶ್ವಕಪ್ ಫೈನಲ್ ಪಂದ್ಯ ನಡೆಯುತ್ತಿದೆ. ಹೈವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಭಾರತ ತಂಡದ ಕೋಟ್ಯಂತರ ಅಭಿಮಾನಿಗಳು ಟೀಮ್ ಇಂಡಿಯಾ ಗೆಲುವಿಗಾಗಿ ಪ್ರಾರ್ಥಿಸುತ್ತಿದ್ದಾರೆ. ಈಗಾಗಲೇ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿದ್ದಾರೆ. ಈ ನಡುವೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ವಿರಾಟ್ ಕೊಹ್ಲಿಗೆ ವಿಶೇಷ ಉಡುಗೊರೆ ನೀಡಿದ್ದಾರೆ.

ಪಂದ್ಯ ಆರಂಭಕ್ಕೂ ಮುನ್ನ ಸಚಿನ್ ಅವರು ತಮ್ಮ ಕೊನೆಯ ಏಕದಿನ ಪಂದ್ಯದಲ್ಲಿ ಧರಿಸಿದ್ದ ಜೆರ್ಸಿಯನ್ನು ವಿರಾಟ್ ಕೊಹ್ಲಿಗೆ ಉಡುಗೊರೆಯಾಗಿ ನೀಡಿದ್ದಾರೆ. ಇದರ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ. 2011ರ ವಿಶ್ವಕಪ್‌ನಲ್ಲಿ ಭಾರತ ತಂಡ ಪ್ರಶಸ್ತಿ ಗೆದ್ದಾಗ, ಆ ತಂಡದಲ್ಲಿ ಸಚಿನ್ ಮತ್ತು ವಿರಾಟ್ ಇಬ್ಬರೂ ಜೊತೆಯಾಗಿ ಆಡಿದ್ದರು.

ವಿರಾಟ್ ಕೊಹ್ಲಿ ಸೆಮಿಫೈನಲ್‌ನಲ್ಲಿ ನ್ಯೂಝಿಲೆಂಡ್ ವಿರುದ್ಧ ತಮ್ಮ 50ನೇ ಶತಕವನ್ನು ಪೂರೈಸಿದರು. ಈ ಶತಕದೊಂದಿಗೆ ಅವರು ಸಚಿನ್ ಅವರ 49 ಶತಕಗಳ ದಾಖಲೆಯನ್ನು ಪುಡಿಗಟ್ಟಿದರು. ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಸಚಿನ್ ಕೂಡ ಹಾಜರಿದ್ದರು. ವಿರಾಟ್ ಕೊಹ್ಲಿ ಮತ್ತು ಸಚಿನ್ ತೆಂಡೂಲ್ಕರ್ ನಡುವೆ ಉತ್ತಮ ಗೌರವದ ಸಂಬಂಧವಿದೆ. ವಿರಾಟ್ ಮಾಸ್ಟರ್ ಬ್ಲಾಸ್ಟರ್ ಅವರನ್ನು ರೋಲ್ ಮಾಡೆಲ್ ಎಂದು ಕೂಡ ಹೇಳಿದ್ದಾರೆ.

2023ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಈಗ ಫೈನಲ್ ಫೈಟ್ ನಡೆಯುತ್ತಿದೆ. ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಒಂದು ಪ್ರಶಸ್ತಿಗಾಗಿ ರೋಹಿತ್ ಶರ್ಮಾ ನೇತೃತ್ವದ ಭಾರತ ಹಾಗೂ ಪ್ಯಾಟ್ ಕಮ್ಮಿನ್ಸ್ ಅವರ ಆಸ್ಟ್ರೇಲಿಯಾ ತಂಡಗಳು ಮುಖಾಮುಖಿ ಸೆಣೆಸಾಟ ನಡೆಸುತ್ತಿದೆ. ಇಂದಿನ ಪಂದ್ಯಕ್ಕೆ ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಅತ್ತ ಆಸ್ಟ್ರೇಲಿಯಾ ಕೂಡ ಸೆಮಿಫೈನಲ್​ನಲ್ಲಿ ಆಡಿಸಿದ ಆಟಗಾರರನ್ನೇ ಫೈನಲ್​ಗೂ ಆಯ್ಕೆ ಮಾಡಿದೆ.

ಭಾರತ ಪ್ಲೇಯಿಂಗ್ XI: ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್.

ಆಸ್ಟ್ರೇಲಿಯಾ ಪ್ಲೇಯಿಂಗ್ XI: ಟ್ರಾವಿಸ್ ಹೆಡ್, ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಸ್ಟೀವ್ ಸ್ಮಿತ್, ಮಾರ್ನಸ್ ಲಾಬುಶೇನ್, ಗ್ಲೆನ್ ಮ್ಯಾಕ್ಸ್‌ವೆಲ್, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮ್ಮಿನ್ಸ್ (ನಾಯಕ), ಆ್ಯಡಂ ಝಂಪಾ, ಜೋಶ್ ಹ್ಯಾಝಲ್‌ವುಡ್.