ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ; ಭಾರತ ಮೊದಲು ಬ್ಯಾಟಿಂಗ್

45 ದಿನಗಳು ಮತ್ತು 47 ಪಂದ್ಯಗಳ ಸುದೀರ್ಘ ಪ್ರಯಾಣದ ನಂತರ ಅಂತಿಮವಾಗಿ ಎಲ್ಲರೂ ಕಾಯುತ್ತಿದ್ದ ದಿನ ಬಂದಿದೆ. 2023ರ ವಿಶ್ವಕಪ್‌ನ ಫೈನಲ್ ಪಂದ್ಯ ಇಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಎರಡು ಬಾರಿಯ ಚಾಂಪಿಯನ್ ಭಾರತ, ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾವನ್ನು ಎದುರಿಸುತ್ತಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ಅದ್ಭುತ ಪ್ರದರ್ಶನ ನೀಡಿ ಎಲ್ಲಾ 10 ಪಂದ್ಯಗಳನ್ನು ಗೆಲ್ಲುವ ಮೂಲಕ ಫೈನಲ್‌ಗೆ ಲಗ್ಗೆ ಇಟ್ಟಿದ್ದರೆ, ಭಾರತ ಸೇರಿದಂತೆ ಮೊದಲ 2 ಪಂದ್ಯಗಳನ್ನು ಸೋತ ಆಸ್ಟ್ರೇಲಿಯಾ, ಸತತ 8 ಪಂದ್ಯಗಳನ್ನು ಗೆದ್ದು ಫೈನಲ್‌ ಪ್ರವೇಶಿದೆ. ಇನ್ನು ಈ ಪಂದ್ಯದ ಟಾಸ್ ಕೂಡ ಮುಗಿದಿದ್ದು, ಟಾಸ್ ಗೆದ್ದ ಆಸೀಸ್ ನಾಯಕ ಪ್ಯಾಟ್ ಕಮ್ಮಿನ್ಸ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಹಾಗೆಯೇ ಉಭಯ ತಂಡಗಳ ಆಡುವ ಹನ್ನೊಂದರ ಬಳಗವೂ ಹೊರಬಿದ್ದಿದೆ.

ತಂಡದಲ್ಲಿ ಬದಲಾವಣೆ ಇಲ್ಲ

ಪ್ಲೇಯಿಂಗ್ ಇಲೆವೆನ್‌ಗೆ ಸಂಬಂಧಿಸಿದಂತೆ ಭಾರತ ಹಾಗೂ ಆಸ್ಟ್ರೇಲಿಯಾ ಎರಡೂ ತಂಡಗಳು ಆಡುವ ಹನ್ನೊಂದರ ಬಳಗದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಆದರೆ, ಟೀಂ ಇಂಡಿಯಾ ಬದಲಾವಣೆ ಮಾಡಬಹುದೆಂಬ ಸುದ್ದಿ ಪಂದ್ಯ ಆರಂಭಕ್ಕೂ ಮುನ್ನ ಇತ್ತು. ಅಹಮದಾಬಾದ್ ಪಿಚ್ ಸ್ಪಿನ್ನರ್​ಗಳಿಗೆ ಹೆಚ್ಚು ನೆರವಾಗುವುದರಿಂದ ಅಶ್ವಿನ್ ತಂಡದಲ್ಲಿ ಆಡುತ್ತಿದ್ದಾರೆ ಎಂಬ ವರದಿಗಳೂ ಬಂದಿದ್ದವು. ಅಲ್ಲದೆ ರೋಹಿತ್ ಶರ್ಮಾ ಅವರು ಪತ್ರಿಕಾಗೋಷ್ಠಿಯಲ್ಲಿ ಪಂದ್ಯದ ಮೊದಲು ಆಡುವ ಹನ್ನೊಂದರ ಬಗ್ಗೆ ನಿರ್ಧರಿಸುವುದಾಗಿ ಹೇಳಿದಾಗ ತಂಡದಲ್ಲಿನ ಬದಲಾವಣೆಗಳಾಗುವ ಬಗ್ಗೆ ಊಹಾಪೋಹಗಳು ಎದ್ದಿದ್ದವು. ಆದರೆ ಗೆಲುವಿನ ಸಂಯೋಜನೆಯಲ್ಲಿ ಬದಲಾವಣೆ ತರಲು ರೋಹಿತ್ ಬಯಸಿಲ್ಲ.

ಉಭಯ ತಂಡಗಳು

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್.

ಆಸ್ಟ್ರೇಲಿಯಾ ತಂಡ: ಟ್ರಾವಿಸ್ ಹೆಡ್, ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಸ್ಟೀವ್ ಸ್ಮಿತ್, ಲಬುಶೇನ್, ಗ್ಲೆನ್ ಮ್ಯಾಕ್ಸ್‌ವೆಲ್, ಜೋಶ್ ಇಂಗ್ಲಿಸ್, ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮ್ಮಿನ್ಸ್ (ನಾಯಕ), ಆಡಮ್ ಝಂಪಾ, ಜೋಶ್ ಹ್ಯಾಜಲ್‌ವುಡ್.