ಯಲ್ಲಾಪುರ ತಾಲೂಕಿನ ಬಾಸಲ ಪ್ರಾಥಮಿಕ ಶಾಲೆಯ ಸಭಾಭವನದಲ್ಲಿ ಕರ್ನಾಟಕ ಕಲಾ ಸನ್ನಿಧಿ ತೇಲಂಗಾರ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ತಾಳಮದ್ದಲೆ ಕಾರ್ಯಕ್ರಮವನ್ನು ಸುಬ್ಬಣ್ಣ ಕುಂಟೆಗುಳಿ ಉದ್ಘಾಟನೆ ಮಾಡಿದ್ರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸುಬ್ಬಣ್ಣ ಕುಂಟೆಗುಳಿ, ಕಲೆ, ಸಂಘಟನೆಯಲ್ಲಿ ಯುವಕರು ಹೆಚ್ಚು ತೊಡಗಿಸಿಕೊಂಡರೆ ಕಲೆಯ ನೆಲೆ ಇನ್ನಷ್ಟು ಗಟ್ಟಿಯಾಗಲು ಸಾಧ್ಯ. ಹಿರಿಯ ಕಲಾವಿದರ ಸಾಧನೆಯನ್ನು ಸಮಾಜದೆದುರು ತೆರೆದಿಡುವ ಪ್ರಯತ್ನ ಶ್ಲಾಘನೀಯ. ಇತರ ಕಲಾ ಪ್ರಕಾರಗಳಿಗೂ ಈ ಕಾರ್ಯ ವಿಸ್ತಾರವಾಗಲಿ ಎಂದು ಹೇಳಿದ್ರು..
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಅರ್ಥಧಾರಿ ಗೋಪಾಲ ಹೆಗಡೆ ಚಾವಡಿ ಮಾತನಾಡಿ, ತಾಳಮದ್ದಲೆ ವಿಶೇಷವಾದ ಕಲೆ. ಜ್ಞಾನ, ಮಾತಿನ ಕೌಶಲ್ಯ, ಪೌರಾಣಿಕ ಹಿನ್ನೆಲೆಯ ಅರಿವು ಎಲ್ಲವೂ ಇದರಿಂದ ಸಿಗುತ್ತದೆ. ಇಂತಹ ಕಲೆಯ ಪ್ರದರ್ಶನಗಳು ಹೆಚ್ಚು ಹೆಚ್ಚು ನಡೆಯುವ ಜೊತೆಗೆ, ಅದರ ಮಹತ್ವವನ್ನೂ ಸಾರುವ ಕಾರ್ಯ ಆಗಬೇಕು ಎಂದು ಹೇಳಿದ್ರು.
ಈ ವೇಳೆ ವೇದಿಕೆಯಲ್ಲಿ ಗ್ರಾ.ಪಂ ಸದಸ್ಯ ಮಾಚಣ್ಣ ಹಲಗುಮನೆ, ಮಾವಿನಮನೆ ಸೇವಾ ಸಹಕಾರಿ ಸಂಘದ ನಿರ್ದೇಶಕ ಶಿವರಾಮ ಭಟ್ಟ ಬಾಸಲ ಉಪಸ್ಥಿತರಿದ್ದರು.
ಬಳಿಕ ನಡೆದ ಸುಧನ್ವಾರ್ಜು ತಾಳಮದ್ದಲೆ ಪ್ರೇಕ್ಷಕರ ಮೆಚ್ಚುಗೆ ಗಳಿಸಿತು. ಹಿಮ್ಮೇಳದಲ್ಲಿ ಭಾಗವತರಾಗಿ ದಿನೇಶ ಭಟ್ಟ ಯಲ್ಲಾಪುರ, ವಿಘ್ನೇಶ್ವರ ಕುಂಟೆಮನೆ, ಗಣಪತಿ ಗಾಂವ್ಕರ ಹುಟುರ್ತೆ, ಮದ್ದಲೆವಾದಕರಾಗಿ ಸುಬ್ರಾಯ ಭಟ್ಟ ಗಾಣಗದ್ದೆ ಭಾಗವಹಿಸಿದ್ದರು. ಸುಧನ್ವನಾಗಿ ನಾಗರಾಜ ಭಟ್ಟ ಕುಂಕಿಪಾಲ, ಅರ್ಜುನನಾಗಿ ಮಂಜುನಾಥ ಗಾಂವ್ಕರ ಮೂಲೆಮನೆ, ಪ್ರಭಾವತಿಯಾಗಿ ಸದಾಶಿವ ಮಲವಳ್ಳಿ, ಸುಗರ್ಭೆಯಾಗಿ ಗಣಪತಿ ಭಟ್ಟ ಹಲಗುಮನೆ, ಪ್ರದ್ಯುಮ್ನನಾಗಿ ಶ್ರೀಧರ ಅಣಲಗಾರ, ಕೃಷ್ಣನಾಗಿ ದೀಪಕ ಭಟ್ಟ ಕುಂಕಿ, ವೃಷಕೇತುವಾಗಿ ಪ್ರಸನ್ನ ಗಾಂವ್ಕರ ವಾಗಳ್ಳಿ, ಹಂಸಧ್ವಜನಾಗಿ ದಿನೇಶ ಗೌಡ ಪಾತ್ರ ಚಿತ್ರಣ ನೀಡಿದರು.